Shivamogga

1,000 ಕೆಪಿಎಸ್ ಶಾಲೆಗಳಿಗೆ ಅಸ್ತು- ಮಧು ಬಂಗಾರಪ್ಪ ಘೋಷಣೆ!

1000 KPS schoola will be soon in Karnataka said Education minister Madhu Banagarappa

ಶಿವಮೊಗ್ಗ: ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕ್ರಾಂತಿಗೆ ರಾಜ್ಯ ಸರ್ಕಾರ ಮುನ್ನುಡಿ ಬರೆಯುತ್ತಿದೆ. ಜೂನ್ 1 ರಂದು ರಾಜ್ಯಾದ್ಯಂತ ಏಕಕಾಲದಲ್ಲಿ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಶಂಕುಸ್ಥಾಪನೆ ನೆರವೇರಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಈ ಬೃಹತ್ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಒಟ್ಟು 19 ಕೆಪಿಎಸ್ ಶಾಲೆಗಳು ನಿರ್ಮಾಣವಾಗಲಿದ್ದು, ಈ ಪೈಕಿ 7 ಶಾಲೆಗಳಿಗೆ ಸಿಎಂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈಗಾಗಲೇ ದುರ್ಗಿಗುಡಿ ಮತ್ತು ಮಿಳಗಟ್ಟ ಶಾಲೆಗಳನ್ನು ಯೋಜನೆಡಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಗುಣಮಟ್ಟದ ಶಿಕ್ಷಣ ಗ್ಯಾರಂಟಿ!


ನಮ್ಮ ಸರ್ಕಾರದ ಐದು ಪ್ರಮುಖ ಗ್ಯಾರಂಟಿಗಳ ಜೊತೆಗೆ ಈಗ ‘ಶಿಕ್ಷಣದ ಗ್ಯಾರಂಟಿ‘ಯನ್ನೂ ನೀಡಿದ್ದೇವೆ. ಬೆಲೆ ಕಟ್ಟಲಾಗದ ಈ ಗ್ಯಾರಂಟಿಯನ್ನು ದೇಶದಲ್ಲೇ ಮೊದಲ ಬಾರಿಗೆ ನಾವು ಜಾರಿಗೆ ತರುತ್ತಿರುವ ಹೆಮ್ಮೆ ನಮಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೀಗಿದರು.ಎಲ್‌ಕೆಜಿಯಿಂದ ಪಿಯುಸಿವರೆಗೆ ಮಕ್ಕಳಿಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡುವುದು ಕೆಪಿಎಸ್ ಶಾಲೆಗಳ ಉದ್ದೇಶವಾಗಿದೆ.ವಿದ್ಯಾರ್ಥಿಗಳು ಕೇವಲ ಪಾಸ್ ಆದರೆ ಸಾಲದು ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. ಈ ನಿಟ್ಟಿನಲ್ಲಿ ಸಿಎಂ ನೇತೃತ್ವದಲ್ಲಿ ಇಲಾಖೆಯಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಲಾಗಿದೆ.ಈಗಾಗಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶಿಸಲಾಗಿದ್ದು, ನಮ್ಮ ಮಾದರಿಯನ್ನು ನೋಡಿ ತೆಲಂಗಾಣ ಸರ್ಕಾರ ‘ಟಿಪಿಎಸ್’ ಶಾಲೆಗಳನ್ನು ಆರಂಭಿಸುತ್ತಿದೆ.

ಪಿಯುಸಿ ಫಲಿತಾಂಶ ಪ್ರಕಟ; ಕೂಡಲೆ SSLC ಫಲಿತಾಂಶ
ಫಲಿತಾಂಶಗಳ ಕುರಿತು ಮಾಹಿತಿ ನೀಡಿದ ಸಚಿವರು, “ದ್ವಿತೀಯ ಪಿಯುಸಿಯ ದ್ವಿತೀಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇ. 45 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ರಾಜ್ಯದಲ್ಲಿ ಒಟ್ಟಾರೆ ಶೇ. 92 ರಷ್ಟು ಅತ್ಯುತ್ತಮ ಫಲಿತಾಂಶ ಬಂದಿದೆ. ಇದೇ ತಿಂಗಳ ಅಂತ್ಯದೊಳಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬೀಳಲಿದೆ” ಎಂದರು.ವಿಶೇಷವೇನೆಂದರೆ 625ಕ್ಕೆ 625 ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯನವರು ಸಾಧಕ ಮಕ್ಕಳೊಂದಿಗೆ ಕುಳಿತು ಊಟ ಮಾಡಲಿದ್ದಾರೆ ಎಂದರು. “ನನಗೆ ವೈಯಕ್ತಿಕವಾಗಿ ಅನುದಾನ ರಹಿತ ಶಾಲೆಗಳಿಗೂ ಅನುದಾನ ನೀಡಬೇಕೆಂಬ ಆಸೆ ಇದೆ.ಆದರೆ ಈ ಕುರಿತು ಸಿಎಂ ಹಾಗೂ ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆಯಬೇಕಾಗಿದೆ” ಎಂದು ಸಚಿವರು ಸ್ಪಷ್ಟಪಡಿಸಿದರು.

ಕೇಸರಿ ಶಲ್ಯ -ಸಮಾಜ ಒಡೆಯುವ ಪದ್ಧತಿ!
ಹಿಜಾಬ್ ಗೆ ಮರು ಅವಕಾಶ ನೀಡಿದ್ದಕ್ಕಾಗಿ ಪ್ರತೀಕಾರಕ್ಕಾಗಿ ಹಿಂದೂಪರ ಸಂಘಟನೆಗಳು ವಿದ್ಯಾರ್ಥಿಗಳಿಗೆ ಕೇಸರಿ ಶಲ್ಯ ವಿತರಿಸುತ್ತಿರುವುದಕ್ಕೆ ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಧು ಬಂಗಾರಪ್ಪ, “ಇಂತಹ ರಬ್ಬಿಶ್ ವಿಚಾರಗಳಿಗೆಲ್ಲ ನಾನು ಉತ್ತರಿಸಲ್ಲ. ಇವೆರೆಲ್ಲ ಸಮಾಜ ಮತ್ತು ಮಕ್ಕಳನ್ನು ಹಾಳು ಮಾಡುವ ವಿಕೃತ ಮನಸುಳ್ಳವರು. ಧೈರ್ಯವಿದ್ದರೆ ಮೊದಲು ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ಹಾಗೂ ಮಹಾರಾಷ್ಟ್ರಕ್ಕೆ ಹೋಗಿ ಶಲ್ಯ ವಿತರಿಸಲಿ. ಶಿಕ್ಷಣದಲ್ಲಿ ನಾವು ಮಾನವೀಯತೆ ಕಲಿಸುವ ಕೆಲಸ ಮಾಡುತ್ತಿದ್ದೇವೆ, ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.

ನೀಟ್ ಪರೀಕ್ಷೆ ರದ್ದು- ಕೇಂದ್ರದ ವಿರುದ್ಧ ಚಾಟಿ
ನೀಟ್ ಪರೀಕ್ಷೆ ವಿವಾದದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಸಚಿವರು, “ನೀಟ್ ಪರೀಕ್ಷೆ ಗೊಂದಲ ಮತ್ತು ರದ್ದಾದ ಹಿನ್ನೆಲೆ ದೇಶದಲ್ಲಿ ಐದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇದು ಕೇಂದ್ರ ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ? ಪ್ರಧಾನಿ ಮೋದಿಯವರು ತಕ್ಷಣವೇ ಸಂಬಂಧಪಟ್ಟ ಸಚಿವರ ತಲೆದಂಡ ಪಡೆಯಬೇಕು ಎಂದು ಆಗ್ರಹಿಸಿದರು. “ಅಲ್ಲಿ ಶೇ. 95 ರಷ್ಟು ಹಿಂದೂ ಮಕ್ಕಳೇ ಇದ್ದಾರೆ, ನಾನು ಮಾಹಿತಿ ಪಡೆದಿದ್ದೇನೆ. ಜನಿವಾರ,ಶಿವದಾರ ಯಾವ ಧರ್ಮದವರಿಗೆ ಇರೋದು? ಅದು ಇವರಿಗೆ ಕಾಣಿಸಲ್ವಾ? ಪರೀಕ್ಷಾ ಶುಲ್ಕ ವಾಪಸ್ ಕೊಡ್ತೀವಿ ಅಂತಾರೆ, ಆದರೆ ನಾವು ಎಷ್ಟೇ ಕಷ್ಟದಲ್ಲಿದ್ದರೂ ಮಕ್ಕಳಿಂದ ಮರು ಪರೀಕ್ಷೆಗೆ ಹಣ ಪಡೆಯುವುದಿಲ್ಲ. ಕೇಂದ್ರದ ಬುಲ್ಡೋಜರ್ ಸಂಸ್ಕೃತಿ ಕರ್ನಾಟಕದಲ್ಲಿ ನಡೆಯಲ್ಲ” ಎಂದರು.

ಇದರೊಂದಿಗೆ ಹುಲಿಕಲ್ ಘಾಟ್‌ನಲ್ಲಿ ಮಣ್ಣು ಕುಸಿದು ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ ತಕ್ಷಣದ ಪರಿಹಾರ ವಿತರಿಸಲಾಗುತ್ತದೆ. ಮಳೆಹಾನಿ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಾಗಿದೆ. ಕೈಗಾ ಅಥವಾ ಇತರೆಡೆ ಅಣು ವಿದ್ಯುತ್ ಸ್ಥಾವರ ವಿಸ್ತರಣೆ/ಸ್ಥಾಪನೆ ವಿಚಾರವಾಗಿ ಸಿಎಂ ಜೊತೆ ಮಾತನಾಡಿದ್ದೇವೆ. ಅಣು ವಿದ್ಯುತ್ ಸ್ಥಾವರವಕ್ಕೆ ನಮ್ಮ ಕಠಿಣ ವಿರೋಧವಿದೆ ಎಂದರು. ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠಕ್ಕಾಗಿ ಹೋರಾಟ ನಡೆಸುತ್ತಿರುವವರನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸಲಿದ್ದೇನೆ ಎಂದು ಸಚಿವರು ಭರವಸೆ ನೀಡಿದರು.

Madhubangarappa #Siddaramaiah #KPSSchool #KarnatakaEducation #ShivamoggaNews #NEET2026 #EducationGuarantee #FreedomTV

Comments (0)

Your email address will not be published. Required fields are marked *

Back to top button