Shivamoggaರಾಜಕೀಯ

ಸಿದ್ದರಾಮಯ್ಯ ರಾಜೀನಾಮೆ, ಕಾಂಗ್ರೆಸ್ ಸರ್ಕಾರ ಪತನವಾಗಲಿದೆ- ವಿಜಯೇಂದ್ರ!

Siddu resign congress govt will fall - B Y Vijayendra

ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆಯ ಹೈಡ್ರಾಮಾ ತುತ್ತತುದಿಗೆ ತಲುಪಿರುವ ಬೆನ್ನಲ್ಲೇ, ವಿಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ಪತನದ ಕುರಿತು ಭಾರಿ ಭವಿಷ್ಯ ನುಡಿದಿದ್ದಾರೆ. “ದೆಹಲಿಯಲ್ಲಿ ನಡೆದ ಸರಣಿ ಸಭೆಗಳ ಬಳಿಕ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಲು ಸೂಚಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಪತನವವಾಗಲಿದ್ದು, , ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದು ಗ್ಯಾರಂಟಿ” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಆಡಳಿತ ಹಾಗೂ ಕೇಂದ್ರದ ಮೋದಿ ಸರ್ಕಾರದ ಸಾಧನೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಪಾಪ ಸಿದ್ದರಾಮಯ್ಯ-ರಾಜ್ಯದ ಮೇಲಿದೆ ಸಾಲದ ಹೊರೆ!
ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಬೆಳವಣಿಗೆಯನ್ನು ದೇಶ ಮತ್ತು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದ ವಿಜಯೇಂದ್ರ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾಪ ಸಿದ್ದರಾಮಯ್ಯನವರು ಹೈಕಮಾಂಡ್ ಗೆ ಹರಕೆಯ ಕುರಿಯಾಗಿದ್ದಾರೆ. “ಸಿದ್ದರಾಮಯ್ಯ ಅವರು ಅನುಭವಿ ಮುಖ್ಯಮಂತ್ರಿಗಳು, ಅವರ ಮೇಲೆ ನನಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ ಅವರ ಆಡಳಿತದಲ್ಲಿ ರಾಜ್ಯದ ಸಾಲದ ಪ್ರಮಾಣ ಬರೋಬ್ಬರಿ 10 ಲಕ್ಷ ಕೋಟಿ ರೂಪಾಯಿ ದಾಟಿದೆ.”

ವಾಲ್ಮೀಕಿ ಅಭಿವೃದ್ಧಿ ನಿಗಮದ ಲೂಟಿ, ಮೂಡಾ (MUDA) ಹಗರಣ ಸೇರಿದಂತೆ ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತ ಮಿತಿಮೀರಿದೆ. ರಾಜ್ಯದ ಇತಿಹಾಸದಲ್ಲೇ ಎಂದೂ ಕಾಣದಂತೆ ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಅವರ ಬಳಿಕ ಮುಂದೆ ಯಾರೆ ಸಿಎಂ ಆದರೂ ಈ ಸರ್ಕಾರ ಹೆಚ್ಚು ದಿನ ಇರೋಲ್ಲ.. ಕಾಂಗ್ರೆಸ್‌ನ ಆಂತರಿಕ ಕಚ್ಚಾಟದಿಂದಲೇ ಸರ್ಕಾರ ಪತನಗೊಳ್ಳಲಿದ್ದು, ಜನರು ಚುನಾವಣೆಗೆ ಮಾನಸಿಕವಾಗಿ ಸಿದ್ದರಾಗಬೇಕು ಎಂದು ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ನಾವು ಶೀಘ್ರದಲ್ಲೇ ಜನತೆಯ ಮುಂದೆ ಹೋಗಲಿದ್ದೇವೆ.

“ರೈತರ ಸಂಕಷ್ಟ, ಗೊಬ್ಬರ ಕೊರತೆ- ಕೇಂದ್ರದ ಮೇಲೆ ಗೂಬೆ!”
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಿಂದಾಗಿ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಮುಂಗಾರು ಪೂರ್ವ ಅನಾಹುತಕ್ಕೆ ಲಕ್ಷಾಂತರ ಅಡಿಕೆ ಮರಗಳು ಧರೆಗುರುಳಿವೆ. ಆದರೆ ಯಾವೊಬ್ಬ ಸಚಿವರಾಗಲಿ, ರಾಜ್ಯ ಸರ್ಕಾರವಾಗಲಿ ರೈತರ ಕಷ್ಟ ಆಲಿಸಲು ಮುಂದಾಗಿಲ್ಲ. ರಾಜ್ಯ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ಈಗ ರೈತರಿಗೆ ರಸಗೊಬ್ಬರದ ಕೊರತೆ ಎದುರಾಗಿದೆ. ತನ್ನದೇ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ನಾಟಕವಾಡುತ್ತಿದೆ. ಈ ಎಲ್ಲಾ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಸೂಕ್ತ ಹೋರಾಟ ನಡೆಸಲಿದೆ.

ಪ್ರಧಾನಿ ಮೋದಿ ಸಾರ್ವಕಾಲಿಕ ದಾಖಲೆ!
ಇದೇ ವೇಳೆ ಕೇಂದ್ರ ಸರ್ಕಾರದ 12 ವರ್ಷಗಳ ಯಶಸ್ವಿ ಆಡಳಿತವನ್ನು ಶ್ಲಾಘಿಸಿದ ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಕೊಂಡಾಡಿದರು.ಪ್ರಧಾನಿ ಮೋದಿ ಅವರು ಆರಂಭದಲ್ಲಿ ಹತ್ತು ಹಲವು ಸವಾಲುಗಳನ್ನು ಎದುರಿಸಿದರೂ, ಹಂತ ಹಂತವಾಗಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಪಥಕ್ಕೆ ಕೊಂಡೊಯ್ದಿದ್ದಾರೆ. ಕಳೆದ 12 ವರ್ಷಗಳ ಸುದೀರ್ಘ ಅವಧಿಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ. ಪಿಎಂ ಮೋದಿ ಅವರು ದೇಶದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಗಳನ್ನು ಮುರಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ನಾಯಕತ್ವ ಬದಲಾವಣೆಯ ಗೊಂದಲವನ್ನು ಬಿಜೆಪಿ ತನಗೆ ಪೂರಕವಾಗಿ ಬಳಸಿಕೊಳ್ಳಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಸಿಎಂ ಬದಲಾವಣೆಯಾದ ತಕ್ಷಣವೇ ಕಾಂಗ್ರೆಸ್‌ನ ಆಂತರಿಕ ಭಿನ್ನಮತ ಮತ್ತಷ್ಟು ಸ್ಫೋಟಗೊಂಡು, ರಾಜ್ಯ ಮಧ್ಯಂತರ ಚುನಾವಣೆಯತ್ತ ಹೆಜ್ಜೆ ಇಡಲಿದೆ ಎಂಬ ವಿಜಯೇಂದ್ರ ಅವರ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ!

#FreedomTV #BYVijayendra #SiddaramaiahResignation #KarnatakaPolitics #CongressCrisis #MidTermPolls #ShimogaNews #PMModi #CorruptionScam #MUDAScam #FarmersDistress #BreakingNews #KannadaNews

Comments (0)

Your email address will not be published. Required fields are marked *

Back to top button