ಡಿಕೆಶಿ ರಾಜ್ಯ ಮೆಚ್ಚುವ ಮಗನಾಗಲಿ-ನೊಣವಿನಕೆರೆ ಶ್ರೀಗಳ ಆಶೀರ್ವಚನ!

ಚಿತ್ರದುರ್ಗ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಎಲ್ಲಾ ವರ್ಗ ಹಾಗೂ ಧರ್ಮಗಳ ಜನರ ಪ್ರೀತಿಯ ಮಗನಾಗಿ ಆಡಳಿತ ನಡೆಸಲಿ ಎಂದು ತುಮಕೂರು ಜಿಲ್ಲೆಯ ಪ್ರಸಿದ್ಧ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಶುಭ ಹಾರೈಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಮಾದನಾಯಕನಹಳ್ಳಿ ಗ್ರಾಮದಲ್ಲಿ ನಡೆದ ಲಿಂಗೈಕ್ಯ ಕೊಟ್ರುಸ್ವಾಮಿ ಹಾಗೂ ಲಿಂಗೈಕ್ಯ ಸಾರಂಗಜ್ಜನವರ ಕರ್ತೃ ಗದ್ದುಗೆಗಳ ಪುನಃ ನಿರ್ಮಾಣ ಲೋಕಾರ್ಪಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮಠದೊಂದಿಗಿರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿ ಆಶೀರ್ವದಿಸಿದರು.

ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿ ಹೊಣೆಗಾರಿಕೆ ವಹಿಸಿಕೊಳ್ಳುತ್ತಿರುವುದು ಅತ್ಯಂತ ವಿಶೇಷ ಎಂದು ಶ್ರೀಗಳು ಹೇಳಿದರು. “ಡಿ.ಕೆ. ಶಿವಕುಮಾರ್ ಅವರು ನಮ್ಮ ಮಠದ ಹೆಮ್ಮೆಯ ಮಗನಾಗಿದ್ದಾರೆ. ಮಠದ ಮೇಲೆ ಅಪಾರ ಶ್ರದ್ಧಾ ಭಕ್ತಿ ಇಟ್ಟುಕೊಂಡು ನಡೆದುಕೊಂಡಿದ್ದಾರೆ. ವೀರ ಗಂಗಾಧರ ಶಿವಾಚಾರ್ಯರ ಕೃಪಾಶೀರ್ವಾದದಿಂದ ಇಂದು ಅವರಿಗೆ ಈ ಅತ್ಯುನ್ನತ ರಾಜಯೋಗ ಲಭಿಸಿದೆ. ಅವರ ಕಚೇರಿಯಲ್ಲೂ ಸದಾ ನೊಣವಿನಕೆರೆ ಅಜ್ಜಯ್ಯನವರ ಭಾವಚಿತ್ರವಿರುತ್ತದೆ. ಭಕ್ತಾದಿಗಳ ಸಂಕಲ್ಪದಂತೆ ಇಂದು ಎಲ್ಲರಿಗೂ ಜಯ ಸಿಕ್ಕಿದ ಸಂತೋಷವಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ರಾಜಯೋಗದ ಮುಹೂರ್ತದಲ್ಲಿ ಪ್ರಮಾಣವಚನ!
ಇಂದು ಮಧ್ಯಾಹ್ನ ನಿಗದಿಯಾಗಿರುವ ಶುಭ ಮುಹೂರ್ತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮೀಜಿ, ಈ ಅವಧಿಯು ಅತ್ಯಂತ ಪರಿಪೂರ್ಣವಾಗಿದೆ ಎಂದರು. ಅಲ್ಲದೆ, ನೂತನ ಮುಖ್ಯಮಂತ್ರಿಗೆ ಜನಸೇವೆ ಮಾಡುವ ಸದ್ಬುದ್ಧಿಯನ್ನು ಭಗವಂತ ಕರುಣಿಸಲಿ ಎಂದು ಹಾರೈಸುತ್ತಾ ಪ್ರಮುಖ ಆಶಯಗಳನ್ನು ವ್ಯಕ್ತಪಡಿಸಿದರು.ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಅವರ ಸೇವೆ ಅತ್ಯಂತ ಸರಳ, ಸಜ್ಜನಿಕೆಯಿಂದ ಕೂಡಿರಲಿ ಹಾಗೂ ಜನಸಾಮಾನ್ಯರಿಗೆ ತೃಪ್ತಿ ನೀಡುವಂತಿರಲಿ. ರಾಜ್ಯದ ಬೆನ್ನೆಲುಬಾಗಿರುವ ರೈತರು, ವರ್ತಕರು, ದೇಶ ಕಾಯುವ ಸೈನಿಕರು, ಮಹಿಳೆಯರು, ಯುವಕರು ಹಾಗೂ ರಾಜಕೀಯ ಮುತ್ಸದ್ದಿಗಳನ್ನು ಒಟ್ಟಿಗೆ ಕರೆದೊಯ್ಯುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ.
“ಡಿ.ಕೆ. ಶಿವಕುಮಾರ್ ಅವರ ಮೇಲೆ ಸದಾ ಶ್ರೀಮಠದ ಹಾಗೂ ಗುರುಗಳ ಆಶೀರ್ವಾದದ ಹಸ್ತ ಇರಲಿದೆ. ಗುರುಗಳು ನುಡಿದ ಮುಹೂರ್ತವು ರಾಜಯೋಗ ತರಲಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಪ್ರಮಾಣವಚನ ಸಮಾರಂಭಕ್ಕೆ ನಾವೂ ಸಹ ಸಾಕ್ಷಿಯಾಗಲಿದ್ದೇವೆ,” ಎಂದು ಕಾಡಸಿದ್ದೇಶ್ವರ ಶ್ರೀಗಳು ತಿಳಿಸಿದರು.
#DKShivakumar #DKSCMSwearingIn #NonavinakereSri #Chitradurga #KadasiddeshwaraMatha #NonavinakereAjjayya #KarnatakaNewCM #NutanCMSOath #FreedomTV #KarnatakaPolitics




