bengaluruರಾಜಕೀಯ

ದೇವೇಗೌಡರ ಕಾಲಿಗೆ ಬಿದ್ದ ಭಾವಿ ಸಿಎಂ ಡಿ.ಕೆ. ಶಿವಕುಮಾರ್‌!

DKS bows down to Devegowda feet

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇಂದು ಅತ್ಯಂತ ಅಪರೂಪದ ಹಾಗೂ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಇಂದು ಸಂಜೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಿ, ಜೆಡಿಎಸ್ ಪರಮೋಚ್ಛ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ, ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

ರಾಜಕೀಯ ವೈಷಮ್ಯಗಳನ್ನು ಬದಿಗಿಟ್ಟು, ಹಿರಿಯ ನಾಯಕರನ್ನು ಗೌರವಿಸುವ ಮೂಲಕ ಡಿಕೆಶಿ ಅವರು ರಾಜ್ಯ ರಾಜಕಾರಣದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೊಡ್ಡಗೌಡರ ಅಧಿಕೃತ ನಿವಾಸಕ್ಕೆ ಖುದ್ದಾಗಿ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರನ್ನು ಹೆಚ್.ಡಿ. ದೇವೇಗೌಡರು ಪ್ರೀತಿಯಿಂದ ಬರಮಾಡಿಕೊಂಡರು. ಈ ವೇಳೆ ಹಿರಿಯ ನಾಯಕನಿಗೆ ಅತ್ಯಂತ ಗೌರವಪೂರ್ವಕವಾಗಿ ನಮಸ್ಕರಿಸಿದ ಡಿಕೆಶಿ, ಅವರ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದರು. ಇಂದು ಸಂಜೆ ನಡೆಯಲಿರುವ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕೆಂದು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.

ಇದೇ ಸಂದರ್ಭದಲ್ಲಿ, “ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸುಗಮ ಆಡಳಿತಕ್ಕಾಗಿ ನಿಮ್ಮಂತಹ ಹಿರಿಯರ ಮಾರ್ಗದರ್ಶನ ಮತ್ತು ಸಹಕಾರ ನನ್ನ ಮೇಲೆ ಸದಾ ಇರಬೇಕು” ಎಂದು ಡಿ.ಕೆ. ಶಿವಕುಮಾರ್ ಕೋರಿದರು.

ಗಾಜಿನ ಮನೆಯಲ್ಲಿ ಅದ್ಧೂರಿ ಪ್ರಮಾಣವಚನ!
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿರುವ ಈ ಅದ್ಧೂರಿ ಕಾರ್ಯಕ್ರಮವು ಇಂದು ಸಂಜೆ ಲೋಕಭವನದ ಭವ್ಯ ಗಾಜಿನ ಮನೆಯಲ್ಲಿ (Glass House) ಜರುಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜ್ಯದ ಇಬ್ಬರೂ ದೈತ್ಯ ಹಿರಿಯ ನಾಯಕರಾದ ಬಿಎಸ್ವೈ ಹಾಗೂ ದೇವೇಗೌಡರನ್ನು ಖುದ್ದಾಗಿ ಆಹ್ವಾನಿಸುವ ಮೂಲಕ ಡಿಕೆಶಿ ಎಲ್ಲರ ಗಮನ ಸೆಳೆದಿದ್ದಾರೆ.

1985 ರ ರಾಜಕೀಯ ಎದುರಾಳಿ; 2026 ರಲ್ಲಿ ಮಾರ್ಗದರ್ಶಕ!


ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಇತಿಹಾಸವನ್ನು ಕೆದಕಿದರೆ ಈ ಭೇಟಿ ಸಾಂಪ್ರದಾಯಿಕವಾಗಿ ಅತ್ಯಂತ ಮಹತ್ವದ್ದಾಗಿದೆ. 1985ರಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲೇ ಇದೇ ಹೆಚ್.ಡಿ. ದೇವೇಗೌಡರ ವಿರುದ್ಧ ಸಾತನೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಡಿಕೆ ಶಿವಕುಮಾರ್‌ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಅಂದು ಪ್ರಬಲ ಎದುರಾಳಿಯಾಗಿದ್ದ ನಾಯಕನ ಮನೆಗೆ ಇಂದು ಮುಖ್ಯಮಂತ್ರಿಯಾಗಿ ಹೋಗಿ ಆಶೀರ್ವಾದ ಪಡೆದಿರುವುದು ವಿಶೇಷ.

ವಿರೋಧ ಪಕ್ಷಗಳ ಪ್ರಬಲ ನಾಯಕರನ್ನು ಖುದ್ದಾಗಿ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವ ಡಿಕೆಶಿ ಅವರ ಈ ನಡೆ, ಮುಂಬರುವ ದಿನಗಳಲ್ಲಿ ರಾಜ್ಯವನ್ನು ಯಾವುದೇ ಸವಾಲುಗಳಿಲ್ಲದೆ ಮುನ್ನಡೆಸಲು ಹೂಡಿರುವ ಪ್ರಬುದ್ಧ ರಾಜತಾಂತ್ರಿಕ ತಂತ್ರಗಾರಿಕೆಯಾಗಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

#DKShivakumar #HDDevegowda #KarnatakaPolitics #CMSwearingIn #DKSMeetsHDD #Padmanabhanagar #GlassHouse #KarnatakaNewCM #FreedomTV #PoliticalHarmony

Comments (0)

Your email address will not be published. Required fields are marked *

Back to top button