
ಮೈಸೂರು: ರಾಜ್ಯದಲ್ಲಿ ತಾರಕಕ್ಕೇರಿರುವ ಸಿಎಂ ಬದಲಾವಣೆ ಪ್ರಹಸನ ಹಾಗೂ ಸರ್ಕಾರದ ಆಡಳಿತ ವೈಖರಿ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಬಾಂಬ್ ಮೇಲೆ ಬಾಂಬ್ ಹಾಕಿದ್ದಾರೆ. “ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ. ಮುಸ್ಲಿಂ ಓಲೈಕೆಗಾಗಿ ಕ್ರಿಮಿನಲ್ ಕೇಸ್‌ಗಳನ್ನು ವಾಪಸ್ ಪಡೆಯುತ್ತಿರುವ ಇದು ಕಾಂಗ್ರೆಸ್ ಸರ್ಕಾರವಲ್ಲ, ಇದು ತಾಲಿಬಾನ್ ಸರ್ಕಾರ” ಎಂದು ಕಿಡಿಕಾರಿದ್ದಾರೆ.

ಆನೆ ಈದೈತೆ ನೋಡ ನೋಡ!
ಕಾಂಗ್ರೆಸ್ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾಗಿರುವ ಕುರಿತು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯದ ಬಾಣಗಳನ್ನು ಎಸೆದಿದ್ದಾರೆ.: “ಸಿದ್ದರಾಮಯ್ಯ ಹೋಗಿ ಡಿ.ಕೆ. ಶಿವಕುಮಾರ್ ಬಂದರೆ ‘ಹೋದ್ಯಾ ಪಿಚಾಚಿ ಅಂದ್ರೆ ಬಂದ್ಯಾ ಗವಾಕ್ಷಿ’ ಅಂದ ಹಾಗೆ ಅಷ್ಟೇ! ಅತ್ತು ಕರೆದು, ಡೆಲ್ಲಿಯಲ್ಲಿ ಎಲ್ಲರನ್ನೂ ಭೇಟಿಯಾಗಿ ಡಿಕೆಶಿ ಸಿಎಂ ಆಗ್ತಿದ್ದಾರೆ. ಆನೆ ಮರಿ ಹಾಕೋಕೆ 24 ತಿಂಗಳು ಬೇಕು, ಹಾಗೆಯೇ ಹೈಕಮಾಂಡ್ ಸಿಎಂ ಬದಲಾವಣೆಗೆ ಇಷ್ಟು ಕಾಲ ತೆಗೆದುಕೊಂಡಿದ್ದಾರೆ.
ದಲಿತರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ 20 ವರ್ಷಗಳಿಂದ ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡಿದೆ. ದಲಿತರು ಸಿಎಂ ಆಗಬೇಕಾದ ಸಮಯದಲ್ಲಿ ದಲಿತರಿಗೆ ಸಮಾಧಿ ಕಟ್ಟಿ ಸಿದ್ದರಾಮಯ್ಯ ಸಿಎಂ ಆದರು. ಈ ಹಿಂದೆ ಜಿ. ಪರಮೇಶ್ವರ್ ಅವರನ್ನು ಸಂಚು ಮಾಡಿ ಸೋಲಿಸಲಾಯಿತು ಎಂದರು
ದಲಿತ ನಾಯಕರು ಸೀಡ್‌ಲೆಸ್ ಕಡಲೆಕಾಯಿ!
ಕಾಂಗ್ರೆಸ್‌ನಲ್ಲಿರುವ ದಲಿತ ನಾಯಕರಿಗೆ ‘ನಮಗೆ ಸಿಎಂ ಸ್ಥಾನ ಕೊಡಿ’ ಎಂದು ಕೇಳುವ ತಾಕತ್ತೇ ಇಲ್ಲ, ಅವರೆಲ್ಲ ಸೀಡ್‌ಲೆಸ್ ಬೀಜಗಳಿದ್ದಂತೆ. ಎನ್. ರಾಚಯ್ಯ, ಬಸವಲಿಂಗಪ್ಪ, ಶ್ರೀನಿವಾಸ ಪ್ರಸಾದ್, ಖರ್ಗೆ, ಮುನಿಯಪ್ಪ ಅವರಿಂದ ಹಿಡಿದು ಪರಮೇಶ್ವರ್‌ವರೆಗೂ ಕಾಂಗ್ರೆಸ್ ಎಲ್ಲರಿಗೂ ಅಗೋ ನೋಡು ನಕ್ಷತ್ರ ಎಂದು ವಂಚಿಸಿದೆ. ದಲಿತರು ಇನ್ಮುಂದೆ ಯಾರೂ ಸಚಿವ ಸ್ಥಾನ ತಗೆದುಕೊಳ್ಳದೆ ಪ್ರತಿಭಟಿಸಬೇಕು.” ಎಂದು ಕುಟುಕಿದರು.
ದಲಿತ ಮಕ್ಕಳ ಅನ್ನ ಕಿತ್ತು ತಿಂದ ಮಹದೇವಪ್ಪ!”
ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವೈಫಲ್ಯಗಳ ಪಟ್ಟಿಯನ್ನೇ ಛಲವಾದಿ ಬಿಚ್ಚಿಟ್ಟಿದ್ದಾರೆ. “5 ವರ್ಷ ಗ್ಯಾರೆಂಟಿ ಕೊಡ್ತೀವಿ ಅಂದವರು 3 ವರ್ಷಕ್ಕೇ ಮುಗಿಸುವ ಲಕ್ಷಣ ಕಾಣ್ತಿದೆ. ಗೃಹಲಕ್ಷ್ಮಿಯ 5 ಸಾವಿರ ಕೋಟಿ ಹಣ ಎಲ್ಲಿಗೆ ಹೋಯ್ತು? 3 ತಿಂಗಳಿಂದ ಜನರಿಗೆ ಹಣ ತಲುಪಿಲ್ಲ. ಕೇಂದ್ರದ ಮೋದಿ ಸರ್ಕಾರ 10 ಕೆಜಿ ಅಕ್ಕಿ ಕೊಡ್ತಿದ್ದರೆ, ರಾಜ್ಯ ಸರ್ಕಾರ ಯಾಕೆ ಕೊಡ್ತಿಲ್ಲ ಎಂದು ಕೇಳಿದರೆ ಮಾಧ್ಯಮಗಳನ್ನೇ ಆಹಾರ ಸಚಿವ ಮುನಿಯಪ್ಪ ಗದರುತ್ತಾರೆ.” ಎಂದರು.
ಪರಿಶಿಷ್ಟ ಜನಾಂಗದ ಎಸ್‌ಸಿಪಿ/ಟಿಎಸ್‌ಪಿ ಹಣಕ್ಕೆ ಸರ್ಕಾರ ಕನ್ನ ಹಾಕಿದೆ. ಹಾಸ್ಟೆಲ್‌ಗಳಲ್ಲಿ ದಲಿತರ ಮಕ್ಕಳಿಗೆ ದವಸ ಧಾನ್ಯ ಸಿಗುತ್ತಿಲ್ಲ. ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ದಲಿತರ ಸಂಕಷ್ಟ ಕಾಣಿಸುತ್ತಿಲ್ಲವೇ? ಅವರಿಗೆ ಇಲಾಖೆ ನಿಭಾಯಿಸಲು ಆಗ್ತಿಲ್ಲ. ಒಳಮೀಸಲಾತಿಯಲ್ಲೂ ರೋಸ್ಟರ್ ಬಿಂದು ಸರಿಪಡಿಸದೇ ವಿದ್ಯಾವಂತ ಯುವಕರನ್ನು ಬೀದಿಗೆ ತಳ್ಳಿದ್ದಾರೆ.
ಮೈಸೂರು ವಿವಿ ಮಹಾ ಹಗರಣ!
ಶಿಕ್ಷಣ ಕ್ಷೇತ್ರದ ದಯನೀಯ ಸ್ಥಿತಿಯ ಕುರಿತು ಮಾತನಾಡಿದ ಛಲವಾದಿ, ಮೈಸೂರು ವಿವಿಯ ಕುಲಸಚಿವೆ (Registrar) ಎಂ.ಕೆ. ಸವಿತಾ ಅವರ ವಿರುದ್ಧ ಗಂಭೀರ ಆರೋಪ ಮಾಡಿದರು. “ಕುಲಸಚಿವರಾಗಿರುವ ಅವರೇ ಅದೇ ವಿವಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ, ತಮ್ಮ ಫೈಲ್‌ಗಳಿಗೆ ಅವರೇ ಸಹಿ ಮಾಡಿಕೊಳ್ಳುತ್ತಿದ್ದಾರೆ! ವಿಶ್ವವಿದ್ಯಾಲಯಗಳಲ್ಲಿ ದುಡ್ಡಿಲ್ಲ, 170 ಜನರಲ್ಲಿ ಕೇವಲ 20 ಜನರಿಗೆ ಮಾತ್ರ ಶಿಷ್ಯವೇತನ ನೀಡಲಾಗಿದೆ. ಕುಲಪತಿಗಳು, ಕುಲಸಚಿವರು ಕೇವಲ ಬಿಲ್ಡಿಂಗ್ ಕಟ್ಟಿ ಹಣ ಮಾಡಲು ನಿಂತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
2028 ಕ್ಕೆ ದಲಿತ ಸಿಎಂ- ಬಿಜೆಪಿಯಲ್ಲಿ ಮಾತ್ರ!
2028ರ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆದ್ದು ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಛಲವಾದಿ ಅವರಿಗೆ ಮಾಧ್ಯಮಗಳು “ಬಿಜೆಪಿ ಅಧಿಕಾರಕ್ಕೆ ಬಂದರೆ ದಲಿತರನ್ನು ಸಿಎಂ ಮಾಡುತ್ತೀರಾ?” ಎಂದು ಪ್ರಶ್ನಿಸಿದಾಗ ರೋಚಕ ಉತ್ತರ ನೀಡಿದರು.”ನಮ್ಮ ಪಕ್ಷದಲ್ಲಿ ಯಾರೂ ಕೇಳದಿದ್ದರೂ ಎಲ್ಲವನ್ನೂ ತಾವಾಗಿಯೇ ಕೊಡ್ತಾರೆ. ದಲಿತರು ಸಿಎಂ ಆಗಬೇಕೆಂಬ ಪವಾಡ ಏನಿದ್ದರೂ ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ! ಕಾಂಗ್ರೆಸ್‌ನ ಆಂತರಿಕ ಕಚ್ಚಾಟದಿಂದ ನಮಗೆ ಯಾವುದೇ ಆತುರವಿಲ್ಲ, ಜನರೇ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ.”
ಸಿಎಂ ಕುರ್ಚಿ ಬದಲಾವಣೆಯ ಹೊತ್ತಲ್ಲೇ ಛಲವಾದಿ ನಾರಾಯಣಸ್ವಾಮಿ ಅವರು ದಲಿತ ಅಸ್ತ್ರವನ್ನು ಪ್ರಯೋಗಿಸುವ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ ವೋಟ್ ಬ್ಯಾಂಕ್‌ಗೆ ಭಾರಿ ಪೆಟ್ಟು ನೀಡಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ ಹಾಗೂ ಮುಸ್ಲಿಂ ಓಲೈಕೆಯ ತಾಲಿಬಾನ್ ಸರ್ಕಾರ ಎಂದು ಕರೆದಿರುವುದು ಮುಂದಿನ ದಿನಗಳಲ್ಲಿ ತೀವ್ರ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗುವ ಮುನ್ಸೂಚನೆ ನೀಡಿದೆ.
#FreedomTV #ChalavadiNarayanaswamy #MysoreNews #KarnatakaPolitics #CongressvsBJP #DalitCM #Siddaramaiah #DKShivakumar #TalibanGovernment #GuaranteeScheme #HCMahadevappa #MUDAScam #BreakingNews #KannadaNews




