ಶಿಕ್ಷಣಕ್ಕೆ ಮೈಸೂರಿನ ಕೊಡುಗೆ ದೊಡ್ಡದು-ಮಧು ಬಂಗಾರಪ್ಪ!
Madhu bangarappa take suggestions from Devanooru Mahadev

ಮೈಸೂರು: ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತಂದಿರುವ ಕ್ರಾಂತಿಕಾರಕ ಬದಲಾವಣೆಗಳು, ಸರ್ಕಾರಿ ಶಾಲೆಗಳ ದಾಖಲಾತಿ ಹಾಗೂ ಹಿಜಾಬ್-ಕೇಸರಿ ಶಾಲು ವಿವಾದದ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಗರದಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಹಿರಿಯ ಸಾಹಿತಿ ದೇವನೂರು ಮಹಾದೇವ್ ಅವರನ್ನು ಭೇಟಿ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.”ಒಬ್ಬ ಶಿಕ್ಷಣ ಸಚಿವನಾಗಿ ಹಿರಿಯರಾದ ದೇವನೂರು ಮಹಾದೇವ್ ಅವರ ಮಾರ್ಗದರ್ಶನ ಹಾಗೂ ಸಲಹೆಗಳು ನನಗೆ ಬೇಕಿತ್ತು. ಅದಕ್ಕಾಗಿಯೇ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದೇನೆ.

ಹಿಂದೆ ನನ್ನ ನಿರ್ಧಾರಗಳ ಮೇಲೆ ಸಾಕಷ್ಟು ಟೀಕೆ-ಟಿಪ್ಪಣಿಗಳು ಬಂದಿದ್ದವು. ಆದರೆ, ಈ ಬಾರಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದೆ.ಇದಕ್ಕೆ ಶಿಕ್ಷಣತಜ್ಱರ ನೆರವು ಹಾಗೂ ಕಟ್ಟುನಿಟ್ಟಿನ ಬದಲಾವಣೆಗಳೇ ಕಾರಣ” ಎಂದರು.
ಶಿಕ್ಷಣ ಸುಧಾರಣೆ
“ಹಿಂದೆ ಶಿಕ್ಷಣ ವ್ಯವಸ್ಥೆ ಹದಗೆಟ್ಟಿತ್ತು, ಪರೀಕ್ಷಾ ಅಕ್ರಮಗಳಿಗೆ ದಾರಿ ಮಾಡಿಕೊಡುವಂತೆ ವೆಬ್‌ಕಾಸ್ಟ್ ಆಗುತ್ತಿತ್ತು. ಅದನ್ನು ನಾವು ಸಂಪೂರ್ಣವಾಗಿ ತಪ್ಪಿಸಿದ್ದೇವೆ. ಶಿಕ್ಷಣ ಇಲಾಖೆಯಲ್ಲಿ ಸಾಲು ಸಾಲು ಸುಧಾರಣೆಗಳನ್ನು ತಂದಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಈಗ ಶಿಕ್ಷಣದ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ. ಎಲ್ಲರಿಗೂ ಸಮಾನತೆ ಹಾಗೂ ಗುಣಮಟ್ಟದ ಶಿಕ್ಷಣ ಕೊಡುವುದು ನಮ್ಮ ಕರ್ತವ್ಯ. ಇನ್ನು, ಮಕ್ಕಳಿಗೆ ಕಲೆ, ನಾಟಕ ಹಾಗೂ ಸಾಹಿತ್ಯದ ಬಗ್ಗೆಯೂ ಪ್ರವೃತ್ತಿ ಮೂಡಿಸುವಂತೆ ಮತ್ತು ಕೆಪಿಎಸ್ (ಕರ್ನಾಟಕ ಪಬ್ಲಿಕ್ ಶಾಲೆ) ಶಿಕ್ಷಣದ ಬಲವರ್ಧನೆ ಕುರಿತು ದೇವನೂರು ಮಹಾದೇವ್ ಅವರು ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದಾರೆ” ಎಂದು ಸಚಿವರು ವಿವರಿಸಿದರು.
ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆ ಕಡ್ಡಾಯವಲ್ಲ!
ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಓದಬೇಕು ಎಂಬ ಚರ್ಚೆಯ ಕುರಿತು ಸ್ಪಷ್ಟನೆ ನೀಡಿದ ಸಚಿವರು, “ಇದನ್ನು ಕಾನೂನಾತ್ಮಕವಾಗಿ ಕಡ್ಡಾಯ ಮಾಡಲು ಬರುವುದಿಲ್ಲ. ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬುದು ಸಂಪೂರ್ಣವಾಗಿ ಪೋಷಕರು ಮತ್ತು ಮಕ್ಕಳ ಮೂಲಭೂತ ಹಕ್ಕಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟವಾದ ತೀರ್ಪು ನೀಡಿದೆ” ಎಂದರು.ಆದರೆ, ಕೇವಲ ಸರ್ಕಾರಿ ನೌಕರರು ಮಾತ್ರವಲ್ಲದೆ ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು ಎಂದು ನಾನು ಮನವಿ ಮಾಡುತ್ತೇನೆ.ಕನ್ನಡ ಭಾಷೆ ಮತ್ತು ಶಾಲೆಗಳನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಸಾಮೂಹಿಕ ಬದ್ಧತೆಯಾಗಬೇಕು ಎಂದು ಕರೆ ನೀಡಿದರು.
“ಬಿಜೆಪಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಕೇಸರಿ ಶಾಲು ಹಾಕಿಸಲಿ!”
ಶಾಲೆಗಳಿಗೆ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಕಳುಹಿಸುತ್ತೇವೆ ಎಂಬ ಬಿಜೆಪಿ ನಾಯಕರ ಸವಾಲಿನ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ. “ಬಿಜೆಪಿಯವರು ಯಾವುದನ್ನ ಹಿಜಾಬ್ ಅಂತ ಕರೀತಾರೋ, ಅದನ್ನ ನಾವು ‘ಸಮಾನತೆ’ ಅಂತೀವಿ. ಇಷ್ಟಕ್ಕೂ ಶಾಲೆಗಳಲ್ಲಿ ಕೇಸರಿ ಶಾಲು ರಾಜಕಾರಣ ಮಾಡಲು ಹೊರಟಿರುವ ಬಿಜೆಪಿ ನಾಯಕರು, ಮೊದಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ‘ಕೇಂದ್ರೀಯ ವಿದ್ಯಾಲಯ’ಗಳಲ್ಲಿ (Navodaya/Kendriya Vidyalayas) ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿಸಿ ಕರೆದುಕೊಂಡು ಬರಲಿ. ಅಲ್ಲಿ ಜಾರಿಗೊಳಿಸಿದ ಬಳಿಕ ನಮ್ಮ ರಾಜ್ಯದ ಶಾಲೆಗಳ ಬಗ್ಗೆ ಮಾತನಾಡಲಿ, ಆಮೇಲೆ ಅವರಿಗೆ ನಾನು ಸೂಕ್ತ ಉತ್ತರ ಕೊಡ್ತೀನಿ” ಎಂದು ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
#FreedomTV #MadhuBangarappa #Mysuru #DevanuruMahadeva #EducationDepartment #SSLCResults2026 #GovernmentSchools #KannadaSchools #HijabRow #KarnatakaPolitics #CongressVsBJP #KPSchools




