ಕೋಟೆಹುಂಡಿ ಮಹದೇವ್ ಮೇಲೆ ಹಲ್ಲೆ; MLC ಎಚ್.ವಿಶ್ವನಾಥ್ ವಿರುದ್ಧ FIR-ತಿರುಗೇಟು ನೀಡಿದ ಹಳ್ಳಿ ಹಕ್ಕಿ!
FIR on MLC vishwanath by Kotehundi Mahadev

ಮೈಸೂರು: ಹಿರಿಯ ರಾಜಕಾರಣಿ, MLC ಹೆಚ್. ವಿಶ್ವನಾಥ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಹಾಗೂ ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್ ಮೈಸೂರಿನಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ವಿಶ್ವನಾಥ್ ಅವರು ನಿಜವಾಗಿಯೂ ಸತ್ಯವಂತರಾಗಿದ್ದರೆ ಸತ್ಯವೇ ನಮ್ಮ ತಾಯಿತಂದೆ ಎಂದಲ್ಲಿ ಮೈಸೂರಿನ ಚಾಮುಂಡೇಶ್ವರಿ ತಾಯಿ ಸನ್ನಿಧಿಗೆ ಬಂದು ಆಣೆ ಮಾಡಲಿ” ಎಂದು ನೇರ ಸವಾಲು ಹಾಕಿದ್ದಾರೆ.

ರೂ.35 ಲಕ್ಷ ಸಾಲದ ಹೊರೆ ಇಟ್ಟ ವಿಶ್ವನಾಥ್!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟೆಹುಂಡಿ ಮಹದೇವ್, ಈ ಹಿಂದೆ ಎಚ್.ವಿ. ವಿಶ್ವನಾಥ್ ಅವರು ಸಂಸದರಾಗಿದ್ದ ಅವಧಿಯಲ್ಲಿ ನಡೆದ ಆರ್ಥಿಕ ವ್ಯವಹಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿಶ್ವನಾಥ್ ಗಾಗಿ ನಾನು ಹಿರಿಯ ನಾಯಕ ಎಂ.ಟಿ.ಬಿ. ನಾಗರಾಜ್ ಬಳಿ ಹೋಗಿ 35 ಲಕ್ಷ ರೂಪಾಯಿ ಹಣವನ್ನು ಕೊಡಿಸಿದ್ದೆ. ಆ ಮೊತ್ತದಲ್ಲಿ 12 ಲಕ್ಷ ರೂಪಾಯಿಯನ್ನು ನಾನು ಪಡೆದುಕೊಂಡಿದ್ದೆ.ಈ ವ್ಯವಹಾರ ನಡೆಯುವಾಗ ವಿಶ್ವನಾಥ್ ಮಗನು ಜೊತೆಯಲ್ಲಿದ್ದ.ಈಗ ಸಾಲ ನೀಡದೆ ಸತಾಯಿಸುತ್ತಿದ್ದು ಕೇಳಿದರೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು. “ನಾನು ವಿಶ್ವನಾಥ್ ಅವರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದಾಗಲೂ ನಾನು ಕಾಂಗ್ರೆಸ್‌ನಲ್ಲೇ ಉಳಿದೆ. ಈಗ ಹಣ ಕೇಳಿದ್ದಕ್ಕೆ ನನ್ನನ್ನು ‘ಸಿದ್ದರಾಮಯ್ಯ ಚೇಲಾ’ ಎನ್ನುತ್ತಾರೆ. ಈ ಹಣಕಾಸಿನ ವ್ಯವಹಾರಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಯತೀಂದ್ರ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ವಿಶ್ವನಾಥ್ ಅವರು ಎಂ.ಟಿ.ಬಿ ನಾಗರಾಜ್ ಅವರಿಗೆ ಕೊಡಬೇಕಿರುವ ಅಸಲು ಮತ್ತು ಬಡ್ಡಿಯನ್ನು ತಕ್ಷಣ ಚುಕ್ತಾ ಮಾಡಬೇಕು” ಎಂದು ಒತ್ತಾಯಿಸಿದರು.
ಜಲದರ್ಶನಿಯಲ್ಲಿ ಹಲ್ಲೆ – ಕೋರ್ಟ್ ಮೂಲಕ FIR!
“ಸಾಲದ ಪತ್ರವನ್ನು ಎಂ.ಟಿ.ಬಿ ನಾಗರಾಜ್ ಅವರಿಂದ ವಾಪಸ್ ಪಡೆದುಕೊಳ್ಳಬೇಕು, ದಯವಿಟ್ಟು ಹಣ ಕೊಡಿ” ಎಂದು ಕೇಳಲು ಮೈಸೂರಿನ ಜಲದರ್ಶಿನಿ ಗೆಸ್ಟ್ ಹೌಸ್‌ಗೆ ಹೋದಾಗ ವಿಶ್ವನಾಥ್ ನನ್ನನ್ನು ತೀವ್ರವಾಗಿ ನಿಂದಿಸಿ,ಹಲ್ಲೆ ನಡೆಸಿದ್ದರು. ಈ ವಯಸ್ಸಿನಲ್ಲಿ ನನ್ನ ತಾಯಿ ಮತ್ತು ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಮೈಸೂರು ಪೊಲೀಸರು ಈ ಬಗ್ಗೆ ಮೊದಲು ಎಫ್‌ಐಆರ್ ದಾಖಲಿಸಿಕೊಳ್ಳದ ಕಾರಣ, ನಾನು ಕೋರ್ಟ್ ಮೊರೆ ಹೋಗಿ ವಿಶ್ವನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.ಸಿಎಂ ಸಿದ್ದರಾಮಯ್ಯ,ಯತೀಂದ್ರ ಹೆಸರೆತ್ತಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೋಟೆಹುಂಡಿ ಮಹದೇವ್ ದೂರಿದರು.ಈ ಹಣದ ಭದ್ರತೆಗಾಗಿ ನಾನು ನನ್ನ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟಿದ್ದೇನೆ. ಆದರೆ, ವಿಶ್ವನಾಥ್ ಅವರು ಸಾಲ ತೀರಿಸದ ಕಾರಣ ಈಗ ಬಡ್ಡಿ ಬೆಳೆದು ಕೋಟ್ಯಂತರ ರೂಪಾಯಿ ಆಗಿದೆ. ಆಸ್ತಿ ವಿಚಾರವಾಗಿ ನನ್ನ ಅಕ್ಕ-ತಂಗಿಯರು ನನ್ನ ಮೇಲೆಯೇ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದಾರೆ ಎಂದು ಮಹದೇವ್ ಅಳಲು ತೋಡಿಕೊಂಡಿದ್ದಾರೆ.
ಇದು ಸಿಎಂ ಸಿದ್ದರಾಮಯ್ಯನ ಸಂಚು – ಹಳ್ಳಿ ಹಕ್ಕಿಯ ತಿರುಗೇಟು!
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಕುರಿತು ಎಚ್.ವಿ. ವಿಶ್ವನಾಥ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಇದು ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿರುವ ಸುಳ್ಳು ದೂರು” ಎಂದು ಸ್ಪಷ್ಟಪಡಿಸಿದ್ದಾರೆ. ನಾನ್ಯಾಕೆ ಸಾಲ ಪಡೆಯಲಿ? ಎಲ್ಲವೂ ಸುಳ್ಳು. ತಮ್ಮ ವಿರುದ್ಧ ಕೇಳಿಬಂದಿರುವ 55 ಲಕ್ಷ ರೂಪಾಯಿ ಸಾಲದ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.ನನ್ನ ರಾಜಕೀಯ ಬೆಳವಣಿಗೆ ಹಾಗೂ ವರ್ಚಸ್ಸಿಗೆ ಮಸಿ ಬಳಿಯಲು ಈ ಸುಳ್ಳು ಆರೋಪ ಹೊರಿಸಲಾಗುತ್ತಿದೆ” ಎಂದರು. ಈ ಇಡೀ ಪ್ರಕರಣದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.”ನಾನು ಸದಾ ರಾಜ್ಯ ಸರ್ಕಾರದ ತಪ್ಪು ನೀತಿಗಳ ವಿರುದ್ಧ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಾ, ಟೀಕೆಗಳನ್ನು ಮಾಡುತ್ತಾ ಬಂದಿದ್ದೇನೆ. ಇದನ್ನು ಸಹಿಸಿಕೊಳ್ಳಲು ಸಿದ್ದರಾಮಯ್ಯ ಮಹದೇವ್‌ನನ್ನು ದಾಳವಾಗಿ ಬಳಸಿಕೊಂಡು ನನ್ನ ವಿರುದ್ಧ ಈ ಸುಳ್ಳು ಕೇಸ್ ದಾಖಲಿಸಿದ್ದಾರೆ” ಎಂದು ವಿಶ್ವನಾಥ್ ಗುಡುಗಿದ್ದಾರೆ.
ನನ್ನ ಧ್ವನಿ ಅಡಗಿಸುವುದು ಅಸಾಧ್ಯ
“ಸುಳ್ಳು ಕೇಸ್ ದಾಖಲಿಸುವ ಮೂಲಕ ನನ್ನ ಧ್ವನಿಯನ್ನು ಅಡಗಿಸಬಹುದು, ಸತ್ಯದ ಪರವಾಗಿ ನಾನು ಆಡುವ ಮಾತುಗಳನ್ನು ನಿಲ್ಲಿಸಬಹುದು ಎಂದು ಸರ್ಕಾರ ಅಂದುಕೊಂಡಿದ್ದರೆ ಅದು ತಪ್ಪು. ನಾನು ಯಾವುದೇ ತಪ್ಪು ಮಾಡಿಲ್ಲ. ಇಂತಹ ಬೆದರಿಕೆಗಳಿಗೆಲ್ಲಾ ನಾನು ಹೆದರುವುದಿಲ್ಲ. ನನ್ನ ಧ್ವನಿಯನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಈ ರಾಜಕೀಯ ಪ್ರೇರಿತ ಸಂಚನ್ನು ನಾನು ಕಾನೂನು ಹೋರಾಟದ ಮೂಲಕವೇ ಎದುರಿಸುತ್ತೇನೆ” ಎಂದು ‘ಹಳ್ಳಿ ಹಕ್ಕಿಯ ಹಾಡು’ ಖ್ಯಾತಿಯ ವಿಶ್ವನಾಥ್ ಸವಾಲು ಹಾಕಿದ್ದಾರೆ.
#Hvishwanath #KotehundiMahadev #Mysuru #MLCVishwanath #FIRRegistered #MTBNagaraj #ChamundiHills #Siddaramaiah #YathindraSiddaramaiah #MysorePolitics #BreakingNews #FreedomTV




