
ಕಲಬುರಗಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ, ಸಾಲಸೋಲ ಮಾಡಿ ಹಗಲಿರುಳು ಕಷ್ಟಪಟ್ಟು ಬೆಳೆದಿದ್ದ ಬಾಳೆ ತೋಟವೊಂದು ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ನೆಲಕಚ್ಚಿರುವ ಧಾರುಣ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಸಂಭವಿಸಿದೆ. ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಅನ್ನದಾತನ ಬದುಕು ಸಂಪೂರ್ಣ ಬರ್ಬಾದ್ ಆಗಿದ್ದು, ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಕೇವಲ ಒಂದು ದಿನದಲ್ಲೇ ರೈತ ಸಾಲಗಾರನಾದ ಈ ಧಾರುಣ ಘಟನೆ ತೊಗರಿ ನಾಡಿನ ಜನರ ಮನಸ್ಸುಗಳನ್ನು ಕರಗಿಸಿದೆ.ಮಳೆಯ ರೌದ್ರ ನರ್ತನದಿಂದ ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಜಲಪ್ರಳಯಕ್ಕೆ ಸೃಷ್ಟಿಯಾಗಿದೆ.

30 ಲಕ್ಷ ಬಾಳೆ ಹಾನಿ- ಸಾಲದ ಸುಳಿಯಲ್ಲಿ ಅನ್ನದಾತ!
ದೇಗಲಮಡಿ ಗ್ರಾಮದ ಪ್ರಗತಿಪರ ರೈತ ಸೋಮಶೇಖರ್ ಎಂಬುವವರು ಬ್ಯಾಂಕ್ ಹಾಗೂ ಖಾಸಗಿ ದಲ್ಲಾಳಗಳ ಬಳಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಅತ್ಯಂತ ಆಸೆಯಿಂದ ಶ್ರಮವಹಿಸಿ ತಮ್ಮ ಜಮೀನಿನಲ್ಲಿ ಬಾಳೆ ಬೆಳೆದಿದ್ದರು. ಫಸಲು ಕಟಾವಿಗೆ ಬಂದು ಇನ್ನೇನು ಕೈಗೆ ಹಣ ಸಿಗುವುದೆಂಬ ಮಹಾತ್ವಾಕಾಂಕ್ಷೆಯಲ್ಲಿದ್ದ ರೈತನಿಗೆ ವಿಧಿ ಬೇರೆ ಆಟವನ್ನೇ ತೋರಿಸಿದೆ. ತಡರಾತ್ರಿ ಬೀಸಿದ ಭೀಕರ ಬಿರುಗಾಳಿಗೆ ಇಡೀ ತೋಟದ ಬಾಳೆಗಿಡಗಳು ಬುಡಸಮೇತ ನೆಲಕ್ಕುರುಳಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಬರೋಬ್ಬರಿ 30 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಬೆಳೆ ನಾಶವಾಗಿದ್ದು, ರೈತ ಸೋಮಶೇಖರ್ ತಲೆಮೇಲೆ ಕೈ ಇಟ್ಟುಕೊಂಡು ಕೂತಿದ್ದ ದೃಶ್ಯ ಮನಕಲಕುವಂತಿದೆ.
ಸ್ಥಳಕ್ಕೆ ತೋಟಗಾರಿಕೆ ಅಧಿಕಾರಿಗಳು-20000 ಗಿಡಗಳು ನಾಶ!
ದೇಗಲಮಡಿ ಗ್ರಾಮದಲ್ಲಿ ಬಾಳೆ ತೋಟಗಳು ನಾಶವಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇಂದು ಜಂಟಿಯಾಗಿ ಬಾಧಿತ ಹೊಲಗಳಿಗೆ ಭೇಟಿ ನೀಡಿದರು. ನೆಲಕ್ಕುರುಳಿ ಬಿದ್ದಿರುವ ಬಾಳೆಗಿಡಗಳನ್ನು ವೀಕ್ಷಿಸಿ, ಹಾನಿಯ ತೀವ್ರತೆಯನ್ನು ಪರಿಶೀಲಿಸಿದ ಅಧಿಕಾರಿಗಳು ಸಂತ್ರಸ್ತ ರೈತರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.ತಾಲೂಕಿನಾದ್ಯಂತ ಪ್ರಾಥಮಿಕ ವರದಿಯ ಪ್ರಕಾರ ಸುಮಾರು 20,000ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಸಮವಾಗಿವೆ. ಇಲಾಖೆಯ ನಿಯಮಾವಳಿಗಳ ಪ್ರಕಾರ ಅಂದಾಜು ಹಾನಿಯ ಮೊತ್ತದ ಲೆಕ್ಕಾಚಾರ ಶುರುವಾಗಿದ್ದು, ಚಿಂಚೋಳಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ಸರ್ಕಾರದ ನೆರವಿಗಾಗಿ ಅನ್ನದಾತರ ಸಿಟ್ಟಿನ ಆಗ್ರಹ
“ನಾವು ರಕ್ತವನ್ನು ಸುರಿದು ದುಡಿದ ಬೆಳೆ ಕೇವಲ ಒಂದೇ ಗಂಟೆಯ ಮಳೆಗೆ ಮಣ್ಣು ಪಾಲಾಗಿದೆ. ಈಗ ಮಾಡಿರುವ ಸಾಲವನ್ನು ತೀರಿಸುವುದು ಹೇಗೆ? ಸಂಸಾರ ನಡೆಸುವುದು ಹೇಗೆ?” ಎಂದು ದೇಗಲಮಡಿ ಗ್ರಾಮದ ರೈತರಾದ ಸೋಮಶೇಖರ್ ಮತ್ತು ಶಿವಶರಣ ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯಾದ್ಯಂತ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಬಾಳೆ ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ತಕ್ಷಣವೇ ಧಾವಿಸಬೇಕು. ವಿಳಂಬ ಮಾಡದೇ ಜಂಟಿ ಸಮೀಕ್ಷೆ ನಡೆಸಿ, ಹೆಕ್ಟೇರ್ ಆಧಾರದ ಮೇಲೆ ಸೂಕ್ತ ಹಾಗೂ ವೈಜ್ಞಾನಿಕ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಚಿಂಚೋಳಿ ತಾಲೂಕಿನ ರೈತರು ಕಠಿಣವಾಗಿ ಆಗ್ರಹಿಸಿದ್ದಾರೆ.
#KalaburagiRain #ChincholiFarming #BananaCropLoss #KarnatakaFarmers #CropDamage #HorticultureDepartment #SiddaramaiahGovernment #FarmerCrisis #FreedomTV