bengaluruKalburgiರಾಜಕೀಯ

ನನಗೆ ಸಚಿವ ಸ್ಥಾನ ಸಿಗಲಿದೆ-ಶಾಸಕ ಅಜಯ್ ಸಿಂಗ್!

MLA Ajay singh confident on getting Ministership in the state govt

ಕಲಬುರಗಿ/ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿರುವ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್ ರಚನೆ ಹಾಗೂ ಅಧಿಕಾರ ಹಂಚಿಕೆಯ ಚರ್ಚೆಗಳು ತೀವ್ರಗೊಂಡಿವೆ. ಈ ಕುರಿತು ಜೇವರ್ಗಿ ಶಾಸಕ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಡಾ. ಅಜಯ್ ಸಿಂಗ್ ಅವರು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಂಪುಟ ಪುನರ್ ರಚನೆಯಾಗುವ ಕುರಿತು ಕಳೆದ ಆರು ತಿಂಗಳಿನಿಂದ ಕೇಳುತ್ತಲೇ ಇದ್ದೇವೆ. ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನರ್ ರಚನೆ ಮಾಡುವುದಾಗಿ ವರಿಷ್ಠರು ಮೊದಲೇ ಹೇಳಿದ್ದರು. ಅದರಂತೆ ಈಗ ಹೈಕಮಾಂಡ್ ಸಿಎಂ ಮತ್ತು ಡಿಸಿಎಂ ಅವರನ್ನು ದೆಹಲಿಗೆ ಕರೆಸಿಕೊಂಡಿದೆ” ಎಂದರು.

ಹೆಚ್ಚು ಬಾರಿ ಗೆದ್ದವರಿಗೆ ಸಚಿವ ಸ್ಥಾನ ನನಗೂ ಭರವಸೆಯಿದೆ!


“ಪಕ್ಷದಲ್ಲಿ ಮೂರು ಹಾಗೂ ನಾಲ್ಕು ಬಾರಿ ಗೆದ್ದಿರುವ ಸಾಕಷ್ಟು ಹಿರಿಯ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ನಾನು ಕೂಡ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಯಶಸ್ವಿಯಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಹೈಕಮಾಂಡ್ ಈ ಬಾರಿ ನನಗೂ ಒಂದು ಅವಕಾಶ ನೀಡುತ್ತದೆ ಎಂಬ ವಿಶ್ವಾಸ ಖಂಡಿತವಾಗಿ ನನಗಿದೆ. ಮುಂಬರುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ” ಎಂದು ಅಜಯ್ ಸಿಂಗ್ ಆಶಯ ವ್ಯಕ್ತಪಡಿಸಿದರು.

ಇದೇ ವೇಳೆ, “2028ರ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲು ನಾವು ಈಗಿನಿಂದಲೇ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲಗಳಿಲ್ಲ, ಗೊಂದಲವಿದೆ ಎಂದು ಹೇಳುವುದು ವಿರೋಧ ಪಕ್ಷಗಳ ಕೆಲಸವಷ್ಟೇ” ಎಂದು ಟಾಂಗ್ ನೀಡಿದರು.

ಇಂಧನ, ಗ್ಯಾಸ್ ಬೆಲೆ ಏರಿಕೆ: ಮೋದಿ ಆಡಳಿತದ ವಿರುದ್ಧ ವಾಗ್ದಾಳಿ
ದೇಶದಲ್ಲಿ ನಿರಂತರವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಗಳ ಕುರಿತು ಮಾತನಾಡಿದ ಅಜಯ್ ಸಿಂಗ್, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. “ಹಿಂದೆ ಯುಪಿಎ ಸರ್ಕಾರವಿದ್ದಾಗ ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗಿ ಪ್ರತಿಭಟನೆ ನಡೆಸಿದ್ದರು. ಆಗ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 400 ರೂಪಾಯಿ ಇತ್ತು. ಇವತ್ತು ಗ್ಯಾಸ್ ಬೆಲೆ 1000 ರೂಪಾಯಿ ದಾಟಿದೆ. ಕಳೆದ 12 ವರ್ಷಗಳ ತಮ್ಮ ಆಡಳಿತದಲ್ಲಿ ದೇಶದ ಜನರಿಗೆ ಅವರು ಏನು ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು ಕಿಡಿಕಾರಿದರು.

“ಒಂದು ಸಮುದಾಯದ ಮತ ರದ್ಧತಿಗೆ SIR!
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ (CLP) ಚರ್ಚೆಯಾದ ಎಸ್‌ಐಆರ್ ವಿಷಯದ ಕುರಿತು ಮಾಹಿತಿ ನೀಡಿದ ಅವರು, “ರಾಜ್ಯದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಟಾರ್ಗೆಟ್ ಮಾಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಅಧಿಕಾರ ಅಥವಾ ವ್ಯವಸ್ಥೆ ದುರ್ಬಳಕೆಯಾಗಬಾರದು ಎಂಬ ಕಾರಣಕ್ಕೆ ನಮ್ಮ ಸರ್ಕಾರ ಒಂದು ವಿಶೇಷ ಕಮಿಟಿಯನ್ನು ರಚನೆ ಮಾಡಿದೆ. ನಿನ್ನೆಯ ಸಭೆಯಲ್ಲೂ ಇದೇ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ” ಎಂದು ಸ್ಪಷ್ಟಪಡಿಸಿದರು.

6ನೇ ಗ್ಯಾರಂಟಿಯಾಗಿ ‘ಭೂ ಗ್ಯಾರಂಟಿ’: “ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಕಳೆದ ಮೂರು ವರ್ಷಗಳಲ್ಲಿ ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ನಮ್ಮ ಗ್ಯಾರಂಟಿ ಯೋಜನೆಗಳು ತಲುಪಿವೆ. ಈ 5 ಗ್ಯಾರಂಟಿಗಳ ಜೊತೆಗೆ, ನಾವು 6ನೇ ಗ್ಯಾರಂಟಿಯಾಗಿ ‘ಭೂ ಗ್ಯಾರಂಟಿ’ಯನ್ನು ಕೂಡ ಜನರಿಗೆ ನೀಡಿದ್ದೇವೆ” ಎಂದು ಅಜಯ್ ಸಿಂಗ್ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದರು.

#AjaySingh #Siddaramaiah #DKShivakumar #CabinetReshuffle #CongressChaloDelhi #KarnatakaPolitics #FuelPriceHike #GuaranteeSchemes #FreedomTV #KannadaNews #BengaluruPolitics

Comments (0)

Your email address will not be published. Required fields are marked *

Back to top button