ಮಲ್ಲಾಬಾದ್ ಏತ ನೀರಾವರಿ; 147 ಕೋಟಿ ರೂಪಾಯಿ ಗತಂ..ಗತಂ!
Mallabad Lift irrigation project is very poor says Farmers

ಕಲಬುರಗಿ: ರೈತರ ಪಾಲಿಗೆ ವರದಾನವಾಗಬೇಕಿದ್ದ ಕೃಷ್ಣಾ ಭಾಗ್ಯ ಜಲನಿಗಮದ ಪ್ರಮುಖ ನೀರಾವರಿ ಯೋಜನೆಯೊಂದು ಈಗ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿರುವ ಗಂಭೀರ ಅನುಮಾನ ಈಗ ಕಲ್ಯಾಣ ಕರ್ನಾಟಕ ಭಾಗದ ರೈತರಲ್ಲಿ ಮೂಡಿದೆ. ಬರೋಬ್ಬರಿ 147 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಷ್ಠಿತ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಉಪಕಾಲುವೆ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಕಳಪೆತನ ಎದ್ದು ಕಾಣುತ್ತಿದ್ದು, ಸ್ಥಳೀಯ ರೈತರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಉಗ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಸಾವಿರಾರು ರೈತರ ಕನಸಿಗೆ ತಣ್ಣೀರೆರಚಿದ ‘ಬಾಲಾಜಿ ಕನ್ಸ್ಟ್ರಕ್ಷನ್’!
ಜೇವರ್ಗಿ, ಯಡ್ರಾಮಿ ಹಾಗೂ ಶಹಾಪೂರ್ ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ನೀರುಣಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಉಪಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 144 ಕಿಲೋಮೀಟರ್ ಉದ್ದದ ಈ ಕಾಲುವೆ ಸಿದ್ಧಗೊಂಡರೆ, 87 ಕ್ಕೂ ಅಧಿಕ ಗ್ರಾಮಗಳ ಬರೋಬ್ಬರಿ 33,870 ಹೆಕ್ಟೇರ್ ಪ್ರದೇಶದ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಆದರೆ, ಈ ಯೋಜನೆಯ ಗುತ್ತಿಗೆ ಪಡೆದಿರುವ ‘ಬಾಲಾಜಿ ಕನ್ಸ್ಟ್ರಕ್ಷನ್’ ಸಂಸ್ಥೆಯು ತನ್ನ ಕಳಪೆ ಕೆಲಸದ ಮೂಲಕ ರೈತರಿಗೆ ನೀರು ತಲುಪುವ ಮುನ್ನವೇ ಅವರ ಕನಸಿಗೆ ಕೊಳ್ಳಿ ಇಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.
ಒಂದೂವರೆ ಕಿಲೋಮೀಟರ್ ಕಳಪೆ ಕಾಮಗಾರಿ!
ಫ್ರೀಡಂ ಟಿವಿ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಗುತ್ತಿಗೆದಾರರು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳ ಶಾಮೀಲಾತಿ ಎದ್ದು ಕಾಣುತ್ತಿದೆ. ಉಪಕಾಲುವೆಯ ನಿರ್ಮಾಣದಲ್ಲಿ ಯಾವುದೇ ಗುಣಮಟ್ಟದ ಸಿಮೆಂಟ್ ಬಳಸುತ್ತಿಲ್ಲ. ಜಲ್ಲಿಕಲ್ಲು ಹಾಗೂ ಮರಳಿನ (ಉಸುಕು) ಪ್ರಮಾಣದಲ್ಲಿ ಭಾರಿ ವಂಚನೆ ಮಾಡಲಾಗುತ್ತಿದೆ. ಕೇವಲ ಕಣ್ಣೊರೆಸುವ ತಂತ್ರವಾಗಿ ಒಂದೂವರೆ ಕಿಲೋಮೀಟರ್ ಉದ್ದದ ಉಪಕಾಲುವೆಯನ್ನು ತರಾತುರಿಯಲ್ಲಿ, ಅತ್ಯಂತ ಕಳಪೆಯಾಗಿ ನಿರ್ಮಿಸಿ ಕೈತೊಳೆದುಕೊಳ್ಳಲಾಗುತ್ತಿದೆ. ಸ್ಥಳದಲ್ಲಿ ನಿಂತು ಗುಣಮಟ್ಟ ಪರಿಶೀಲಿಸಬೇಕಾದ ನೀರಾವರಿ ಇಲಾಖೆಯ ಅಧಿಕಾರಿಗಳು ಭ್ರಷ್ಟರಿಂದ ಹಣ ಪಡೆದು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.
“ಇದು ನಮ್ಮ ಭಾಗದ ರೈತರ ಬದುಕಿನ ಪ್ರಶ್ನೆ. ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಯನ್ನು ಇಷ್ಟು ಕಳಪೆಯಾಗಿ ಮಾಡಿದರೆ, ನೀರು ಬಿಟ್ಟ ತಕ್ಷಣ ಕಾಲುವೆ ಒಡೆದು ಹೋಗುತ್ತದೆ. ಭ್ರಷ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಿದ್ದೇವೆ.” ಎಂದು ಸ್ಥಳೀಯ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬರಪೀಡಿತ ಜೇವರ್ಗಿ ಮತ್ತು ಯಡ್ರಾಮಿ ಭಾಗದ ರೈತರಿಗೆ ಹಸಿರು ಸಿರಿ ತರಬೇಕಾದ ಯೋಜನೆ, ಕಮಿಷನ್ ದಂಧೆಗೆ ಬಲಿಯಾಗುತ್ತಿರುವುದು ದುರಂತ. ರೈತರ ತೆರಿಗೆ ಹಣದಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಬಾಲಾಜಿ ಕನ್ಸ್ಟ್ರಕ್ಷನ್ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕಿದೆ. ಕೃಷ್ಣಾ ಭಾಗ್ಯ ಜಲನಿಗಮದ ಉನ್ನತ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಮರುಕಾಮಗಾರಿಗೆ ಆದೇಶಿಸುವರೇ ಕಾದುನೋಡಬೇಕಿದೆ.
#FreedomTV #MallahabadLiftIrrigation #KalaburagiNews #FarmersProtest #CorruptionScam #KBJNL #Jevargi #Yadrami #BalajiConstruction #FakeWork #KarnatakaPolitics #BreakingNews #KannadaNews


