
ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಪ್ರಸಿದ್ಧ ಲಾಡ್ಲೇ ಮಶಾಕ್ ದರ್ಗಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ ಜರುಗಿತು. ಶಿವಾಜಿ ಬ್ರಿಗೇಡ್ ಹಾಗೂ ವಿವಿಧ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಬೀದಿಗಿಳಿದು ಸರ್ಕಾರದ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ (DC) ಕಚೇರಿಯವರೆಗೆ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಮೆರವಣಿಗೆ ಮಾಡಲು ಪ್ರತಿಭಟನಾಕಾರರು ಮುಂದಾದರು. ಆದರೆ, ಅಣಕು ಶವಯಾತ್ರೆಗೆ ಪೊಲೀಸರು ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ-ನೊತ್ತಾಟ ಉಂಟಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಾಗ ಪೊಲೀಸರು ಅಣಕು ಶವವನ್ನು ವಶಕ್ಕೆ ಪಡೆದರು.

ಆಂದೋಲದ ಕರುಣೇಶ್ವರ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಈ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಯಿತು. ಸರ್ಕಾರದ ನಡೆ ಮುಸ್ಲಿಂ ಧರ್ಮೀಯರ ಓಲೈಕೆ ರಾಜಕಾರಣವಾಗಿದೆ ಎಂದು ಆರೋಪಿಸಿದ ಸ್ವಾಮೀಜಿ, ಗಲಭೆಕೋರರನ್ನು ರಕ್ಷಿಸುತ್ತಿರುವ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
ಲಾಡ್ಲೇ ಮಶಾಕ್ ದರ್ಗಾ ಗಲಭೆ!
2022 ರ ಮಾರ್ಚ್ 1 ರಂದು ಮಹಾಶಿವರಾತ್ರಿಯ ಪವಿತ್ರ ದಿನದಂದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂ ಧರ್ಮೀಯರು ತೆರಳಿದ್ದರು. ಪೂಜೆ ಸಲ್ಲಿಸಿ ವಾಪಸ್ ಬರುತ್ತಿದ್ದ ಭಕ್ತರ ಮೇಲೆ ಕಿಡಿಗೇಡಿಗಳು ಭೀಕರ ಕಲ್ಲು ತೂರಾಟ ನಡೆಸಿದ್ದರು. ಅಂದು ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ಆಗಮಿಸಿದ್ದ ಅಂದಿನ ಜಿಲ್ಲಾಧಿಕಾರಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP), ಕೇಂದ್ರ ಸಚಿವರು ಹಾಗೂ ಬಿಜೆಪಿ ಮುಖಂಡರ ವಾಹನಗಳ ಮೇಲೆಯೂ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದರು. ಈ ಇಡೀ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 150 ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹಾಗೂ ಮುಖಂಡರ ವಿರುದ್ಧ 13 ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು.
ಕೆಂಡವಾದ ಹಿಂದೂ ಸಂಘಟನೆಗಳು!
ಸಚಿವ ಸಂಪುಟ ಸಭೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಶಿಫಾರಸಿನ ಮೇರೆಗೆ ಈ ಗಲಭೆ ಪ್ರಕರಣದ ಎಲ್ಲಾ ಕೇಸ್‌ಗಳನ್ನು ವಾಪಸ್ ಪಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಸರ್ಕಾರದ ಈ ದಿಢೀರ್ ನಿರ್ಧಾರಕ್ಕೆ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ.ಪೊಲೀಸರು ಮತ್ತು ಜನಪ್ರತಿನಿಧಿಗಳ ಮೇಲೆಯೇ ಹಲ್ಲೆ ನಡೆಸಿದ ಗಂಭೀರ ಪ್ರಕರಣಗಳನ್ನು ರಾಜಕೀಯ ಕಾರಣಗಳಿಗಾಗಿ ಹಿಂಪಡೆದಿರುವುದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದೆ. ತಕ್ಷಣವೇ ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
#KalaburagiProtest #LadleMashakDargah #AlandRiots #CaseWithdrawal #SiddaramaiahGovt #ShivajiBrigade #SiddalingaSwamiji #ShivalingaPoojaControversy #KalaburagiNews #KarnatakaPolitics #FreedomTV




