Ballaryರಾಜಕೀಯ

ಸಿಎಂ ಬದಲಾವಣೆ ಗೊತ್ತಿಲ್ಲ- ಮಾರ್ಮಿಕವಾಗಿ ನುಡಿದ ಶಾಸಕ ಭರತ್ ರೆಡ್ಡಿ!

CM changing news Iam unaware said MLA Bharat reddy

ಬಳ್ಳಾರಿ: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಆಂತರಿಕ ಚಟುವಟಿಕೆಗಳು ಗರಿಗೆದರಿರುವ ಬೆನ್ನಲ್ಲೇ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಈ ಕುರಿತು ಅಚ್ಚರಿಯ ಹಾಗೂ ರಾಜತಾಂತ್ರಿಕ ಹೇಳಿಕೆ ನೀಡಿದ್ದಾರೆ. “ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಿರುವುರ ಬಗ್ಗೆ ನನಗೇನೂ ಗೊತ್ತಿಲ್ಲ, ನಾನೂ ಮಾಧ್ಯಮಗಳಲ್ಲಿ ನೋಡಿಯೇ ಆ ಬಗ್ಗೆ ತಿಳಿದುಕೊಂಡೆ” ಎಂದು ಭರತ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಡೆ ಹಾಗೂ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಹೈಕಮಾಂಡ್ ನದ್ದೇ ಅಂತಿಮ ತೀರ್ಪು!

ಸಿಎಂ ಬದಲಾವಣೆ ಪ್ರಕ್ರಿಯೆ ನಮ್ಮಂತಹ ಶಾಸಕರ ವ್ಯಾಪ್ತಿಯಲ್ಲಿ ನಡೆಯುವಂಥದ್ದಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರು ಕುಳಿತು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಹೈಕಮಾಂಡ್ ಯಾರ ಹೆಸರು ಹೇಳುತ್ತದೆಯೋ ನಾವು ಅವರ ಪರವಾಗಿ ಇರುತ್ತೇವೆ. ನಾಳೆ ನಡೆಯಲಿದೆ ಎನ್ನಲಾಗಿರುವ ಶಾಸಕಾಂಗ ಪಕ್ಷದ (CLP) ಸಭೆಯ ಬಗ್ಗೆ ನನಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಅಥವಾ ಆಹ್ವಾನ ಬಂದಿಲ್ಲ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ.

ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ ಮುಂದಿನ ಸಿಎಂ ಯಾರು? ಎಂಬ ಕ್ಲಿಷ್ಕರ ಪ್ರಶ್ನೆಗೆ ಉತ್ತರಿಸಲು ಶಾಸಕರು ನಿರಾಕರಿಸಿದರು. “ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲ ನಿಜವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ದೆಹಲಿ ಮಟ್ಟದಲ್ಲಿ ಅಷ್ಟೊಂದು ದೊಡ್ಡ ನೆಟ್‌ವರ್ಕ್ ಇಲ್ಲ” ಎಂದು ನಗುತ್ತಲೇ ಜಾರಿಕೊಂಡರು.

“ನಾಗೇಂದ್ರ ಅಣ್ಣನಿಗೆ ಸಚಿವ ಸ್ಥಾನ ಕೊಡಿ, ಹೊಸಬರಿಗೂ ಅವಕಾಶ ಸಿಗಲಿ!”
ಸಿಎಂ ಬದಲಾವಣೆ ಚರ್ಚೆಯ ನಡುವೆಯೇ ಸಚಿವ ಸಂಪುಟ ಪುನಾರಚನೆಯ ಬೇಡಿಕೆಯನ್ನೂ ಭರತ್ ರೆಡ್ಡಿ ಹೈಕಮಾಂಡ್ ಮುಂದಿಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ಕೋಟಾದಿಂದ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎನ್ನುವುದು ನಮ್ಮ ಜಿಲ್ಲೆಯ ಪ್ರಮುಖ ಬೇಡಿಕೆಯಾಗಿದೆ.
ಸಚಿವ ಸಂಪುಟದಲ್ಲಿ ಈ ಬಾರಿ ಹೊಸ ಮುಖಗಳಿಗೆ ಆದ್ಯತೆ ನೀಡಬೇಕು. ಆದರೆ, ಈ ಹೊಸಬರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ಮಂಡ್ಯ ರವಿ ಪ್ರಕಾಶ್, ಶರತ್ ಬಚ್ಚೇಗೌಡ ಹಾಗೂ ನಯನಾ ಮೋಟಮ್ಮ ಅವರಂತಹ ಯುವ ನಾಯಕರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ನಮ್ಮ ಆಶಯ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಜಟಾಪಟಿ ತುತ್ತತುದಿಗೆ ತಲುಪಿದ್ದರೂ, ಶಾಸಕ ಭರತ್ ರೆಡ್ಡಿ ಅವರು ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗುವುದಾಗಿ ಹೇಳುವ ಮೂಲಕ ಅತ್ಯಂತ ಸುರಕ್ಷಿತವಾದ ನಿಲುವು ತಳೆದಿದ್ದಾರೆ. ಆದರೆ, ಇದೇ ನೆಪದಲ್ಲಿ ಜಿಲ್ಲೆಯ ನಾಯಕ ನಾಗೇಂದ್ರ ಅವರಿಗೆ ಹಾಗೂ ತಮ್ಮ ಯುವ ಶಾಸಕರ ಗುಂಪಿಗೆ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹೇರಲು ಅವರು ಮರೆತಿಲ್ಲ!

#FreedomTV #KarnatakaPolitics #NaraBharatReddy #CMChangeKarnataka #CongressHighCommand #Siddaramaiah #DKShivakumar #BellaryNews #CabinetExpansion #KannadaNews #BreakingNews

Comments (0)

Your email address will not be published. Required fields are marked *

Back to top button