bidar

BRIMS ವೈದ್ಯರ ಮೇಲೆ ಕುಡುಕರ ಹಲ್ಲೆ – ಬೃಹತ್ ಪ್ರತಿಭಟನೆ!

Assault on doctor in BRIMS Bidar protest by doctors

ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ರೋಗಿಗಳ ಪ್ರಾಣ ಉಳಿಸುವ ವೈದ್ಯರಿಗೇ ರಕ್ಷಣೆ ಇಲ್ಲದಂತಾಗಿದೆ. ತಡರಾತ್ರಿ ಕುಡಿದ ಅಮಲಿನಲ್ಲಿ ಬಂದ ಪುಂಡರ ಗುಂಪೊಂದು ಬ್ರಿಮ್ಸ್ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದೆ. ವೈದ್ಯರೆಂದರೆ ದೇವರ ಸಮಾನ! ದೇವರಿಗೇ ಬಾಸುಂಡೆ ಬರೋ ಹಾಗೆ ಹೊಡೆದಿರುವ ಘಟನೆಯನ್ನು ಖಂಡಿಸಿ ಬ್ರಿಮ್ಸ್ ಆಸ್ಪತ್ರೆಯ ವೈದ್ಯರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

1 ಗಂಟೆಯ ನಂತರ ಹೊಡಿಬಡಿ ಸ್ಟೋರಿ!


ಬೀದರ್‌ನ ವೈದ್ಯಕೀಯ ಮಹಾವಿದ್ಯಾಲಯ (ಬ್ರಿಮ್ಸ್) ಆವರಣದಲ್ಲಿ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಈ ಭೀಕರ ಘಟನೆ ನಡೆದಿದೆ. ಆಸ್ಪತ್ರೆಯ ಕ್ಯಾಜುವಲಿಟಿ ವಾರ್ಡ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ತುಕಾರಾಮ ಮಚ್ಚಂದ್ರ ಅವರ ಮೇಲೆ ದುಷ್ಕರ್ಮಿಗಳ ಗುಂಪು ಮನಬಂದಂತೆ ದಾಳಿ ಮಾಡಿದೆ.ಇನ್ನೋವಾ ಕಾರಿನಲ್ಲಿ ಬಂದ ರೋಗಿಯ ಸಂಬಂಧಿಕರು ಎನ್ನಲಾದ ಗುಂಪು, ಪೂರ್ಣ ಪ್ರಮಾಣದಲ್ಲಿ ಮದ್ಯ ಸೇವಿಸಿತ್ತು ಎನ್ನಲಾಗಿದೆ. ಕ್ಯಾಜುವಲಿಟಿ ವಾರ್ಡ್‌ಗೆ ನುಗ್ಗಿದ ಈ ಕುಡುಕರ ಗುಂಪು ಮೊದಲು ವೈದ್ಯರೊಂದಿಗೆ ವಾಗ್ವಾದಕ್ಕಿಳಿದಿದೆ. ತದನಂತರ ಡಾ. ತುಕಾರಾಮ ಅವರ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸಿದೆ. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ಡಾ. ತುಕಾರಾಮ ಅವರು ಸದ್ಯ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುಂಡರ ವಿರುದ್ಧ FIR ದಾಖಲು!
ವೈದ್ಯರ ಮೇಲೆ ನಡೆದ ಈ ಕುಕೃತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೀದರ್‌ನ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಾಳು ವೈದ್ಯರ ದೂರಿನ ಮೇರೆಗೆ ಪೊಲೀಸರು ಆರೋಪಿಗಳಾದ ಆದಿತ್ಯ,ವಿನೋದ ಚಾಂಚೋಳ, ಗೋವಿಂದ ಬೆನಕನಳ್ಳಿ,ಅನಿಲ ಬೆನಕನಳ್ಳಿ,ಮಹಾದೇವ ಬೆನಕನಳ್ಳಿ, ಬಾಲಾಜಿ ತಾಜಲಾಪೂರ,ಪವನ ಚಾಂಬೋಳ ಮತ್ತು ಇತರರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದು ಅವರ ಬಂಧಿಸಲು ಮುಂದಾಗಿದ್ದಾರೆ.

ನ್ಯಾಯ ಸಿಗೋವರೆಗೂ ಚಿಕಿತ್ಸೆಯಿಲ್ಲ!
ಬ್ರಿಮ್ಸ್ ವೈದ್ಯರ ಆಕ್ರೋಶ- ‘ವೈದ್ಯರ ಮೇಲೆ ನಡೆದ ಈ ಅಮಾನವೀಯ ಹಲ್ಲೆಯನ್ನು ಖಂಡಿಸಿ ಇಂದು ಬೆಳ್ಳಂಬೆಳಿಗ್ಗೆಯಿಂದಲೇ ಬ್ರಿಮ್ಸ್ ವೈದ್ಯರು ಸಂಪೂರ್ಣವಾಗಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಸ್ಪತ್ರೆಯ ಮುಂಭಾಗ ನೂರಕ್ಕೂ ಹೆಚ್ಚು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಜಮಾಯಿಸಿ, “ಬೇಕೇ ಬೇಕು ನ್ಯಾಯ ಬೇಕು” ಎಂದು ಆಕ್ರೋಶದ ಘೋಷಣೆಗಳನ್ನು ಕೂಗುತ್ತಿದ್ದಾರೆ.”ಜೀವ ಉಳಿಸುವ ವೈದ್ಯರ ಮೇಲೆ ಈ ರೀತಿ ಕುಡಿದ ಅಮಲಿನಲ್ಲಿ ಬಂದು ಗುಂಪು ದಾಳಿ ನಡೆಸಿದರೆ ನಾವು ನೆಮ್ಮದಿಯಿಂದ ಕೆಲಸ ಮಾಡುವುದಾದರೂ ಹೇಗೆ? ವಿನಾಕಾರಣ ಹಲ್ಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವವರೆಗೂ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ.” ಎಂದು — ಪ್ರತಿಭಟನಾ ನಿರತ ಬ್ರಿಮ್ಸ್ ವೈದ್ಯರು ಎಚ್ಚರಿಕೆ ನೀಡಿದರು.

ಆಸ್ಪತ್ರೆ ಆವರಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ವೈದ್ಯರ ದಿಢೀರ್ ಪ್ರತಿಭಟನೆಯಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

#Bidar #BRIMS #DoctorAssault #BidarNews #DoctorsProtest #CrimeNews #KarnatakaPolice #BidarNewTown #HospitalAttack #FreedomTV #FreedomTVNews #KannadaNews

Comments (0)

Your email address will not be published. Required fields are marked *

Back to top button