ಪಶು ವಿವಿ 45 ಕೋಟಿ ಹಗರಣ- ಮಾಜಿ VC ಸೇರಿ 6 ಮಂದಿ ಬಂಧನ!
corrupted officers caought by Lokayukta in Bidar Animal husbandry university

ಬೀದರ್: ಶಿಕ್ಷಣದ ಹೆಸರಿನಲ್ಲಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣವನ್ನು ನಕಲಿ ಬಿಲ್ ಸೃಷ್ಟಿಸಿ ಲೂಟಿ ಮಾಡಿದ್ದ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಮಹಾ ಭ್ರಷ್ಟರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸುಮಾರು 45 ಕೋಟಿ ರೂಪಾಯಿಗಳ ಬೃಹತ್ ಹಗರಣದ ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿ ವಿವಿಯ ಮಾಜಿ ಕುಲಪತಿ (VC) ಸೇರಿದಂತೆ ಆರು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಕ್ಷಣ, ಸಂಶೋಧನೆಯ ಹಣ ಗುಳುಂ!
ಈ ಬೃಹತ್ ಲೂಟಿಯ ಕಥೆ ನಡೆದದ್ದು 2017-18ರ ಅವಧಿಯಲ್ಲಿ. ಬೀದರ್‌ನ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಯಾವುದೇ ಕಾಮಗಾರಿ ಅಥವಾ ಕೆಲಸಗಳು ನಡೆಯದಿದ್ದರೂ, ಹಣದಾಸೆಗಾಗಿ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಕೈಜೋಡಿಸಿದ್ದರು ಸರ್ಕಾರದ ಕಣ್ಣಿಗೆ ಮಣ್ಣೆರಚಲು ನಕಲಿ ದಾಖಲೆ ಹಾಗೂ ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ಅಂದಾಜು 45 ಕೋಟಿ ರೂಪಾಯಿಗೂ ಅಧಿಕ ಹಣ ಎಗರಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ.
ಲೋಕಾ ಬೇಟೆಗೆ ಬಲಿಯಾದ ‘ಮಹಾ’ ಭ್ರಷ್ಟರು
| ಕ್ರ.ಸಂ. | ಆರೋಪಿಗಳ ಹೆಸರು | ಹಗರಣ ನಡೆದ ಅವಧಿಯಲ್ಲಿದ್ದ ಹುದ್ದೆ / ಪಾತ್ರ | ಸದ್ಯದ ಸ್ಥಿತಿ |
| 1 | ಎಚ್.ಡಿ. ನಾರಾಯಣಸ್ವಾಮಿ | ಪಶು ವಿವಿಯ ಅಂದಿನ ಕುಲಪತಿ (VC) | ನಿವೃತ್ತ / ನ್ಯಾಯಾಂಗ ಬಂಧನದಲ್ಲಿ |
| 2 | ಕೆ.ಎಲ್. ಸುರೇಶ್ | ಅಂದಿನ ಕಂಟ್ರೋಲರ್ (ಹಣಕಾಸು ನಿಯಂತ್ರಕರು) | ನಿವೃತ್ತ / ನ್ಯಾಯಾಂಗ ಬಂಧನದಲ್ಲಿ |
| 3 | ಮೃತ್ಯುಂಜಯ ಹಿರೇಮಠ | ಪ್ರಥಮ ದರ್ಜೆ ಸಹಾಯಕ (FDA) | ನ್ಯಾಯಾಂಗ ಬಂಧನದಲ್ಲಿ |
| 4 | ಬೊಪಣ್ಣ | ಬೆಂಗಳೂರು ಎಂಟರ್‌ಪ್ರೈಸಸ್ ಸಂಸ್ಥೆಯ ಮಾಲೀಕ | ನ್ಯಾಯಾಂಗ ಬಂಧನದಲ್ಲಿ |
| 5 | ಮಂಜುನಾಥ | ಬೆಂಗಳೂರು ಎಂಟರ್‌ಪ್ರೈಸಸ್ ಸಂಸ್ಥೆಯ ಪಾಲುದಾರ (Partner) | ನ್ಯಾಯಾಂಗ ಬಂಧನದಲ್ಲಿ |
| 6 | ರಾಮಗೊಂಡ | ಸರ್ಕಾರದ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡು ಇತರೆ ಆರೋಪಿಗಳಿಗೆ ವಿತರಿಸಿದ ವ್ಯಕ್ತಿ | ನ್ಯಾಯಾಂಗ ಬಂಧನದಲ್ಲಿ |
ಆರೋಪಿಗಳಿಗೆ ಜೈಲು- ಖಾಕಿ ಸಿಂಗಂಗಳಿಗೆ ಶ್ಲಾಘನೆ!
ಬಂಧಿತ ಆರೂ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ಇಂದು ವೈದ್ಯಕೀಯ ತಪಾಸಣೆಯ ಬಳಿಕ ಜೆಎಂಎಫ್‌ಸಿ (JMFC) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆಯ ಗಾಂಭೀರ್ಯತೆಯನ್ನು ಪರಿಗಣಿಸಿದ ನ್ಯಾಯಾಲಯವು ಎಲ್ಲಾ ಆರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಹಗರಣಕ್ಕೆ ತಾರ್ಕಿಕ ಅಂತ್ಯ ಹಾಡಲು ಲೋಕಾಯುಕ್ತ ಹಿರಿಯ ಅಧಿಕಾರಿಗಳು ಸ್ಕೆಚ್ ಹಾಕಿದ್ದರು. ಲೋಕಾಯುಕ್ತ ಎಡಿಜಿಪಿ ಮನೀಷ್ ಕರಬಿಕರ್, ಐಜಿಪಿ ಡಾ. ಎ.ಎಸ್. ಸುಬ್ರಮಣ್ಣೇಶ್ವರ ಹಾಗೂ ಎಸ್‌ಪಿಗಳಾದ ಬದ್ರಿನಾಥ ಮತ್ತು ಸಿದ್ದರಾಜು ಅವರ ನೇರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇನ್ನು ಫೀಲ್ಡಿಗಿಳಿದು ಕಾರ್ಯಾಚರಣೆ ನಡೆಸಿದ ಬೀದರ್ ಲೋಕಾಯುಕ್ತ ಡಿಎಸ್‌ಪಿಗಳಾದ ಹನುಮಂತರಾಯ ಮತ್ತು ಸಂತೋಷ್ ರಾಠೋಡ್ ನೇತೃತ್ವದ ತಂಡ ಅಂತಿಮವಾಗಿ ಕಿಂಗ್‌ಪಿನ್‌ಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ವಿದ್ಯಾ ದೇಗುಲದಲ್ಲಿ ಕುಳಿತು ಸರ್ಕಾರದ ಹಣವನ್ನು ಸ್ವಾರ್ಥಕ್ಕೆ ಬಳಸಿಕೊಂಡವರ ವಿರುದ್ಧ ಲೋಕಾಯುಕ್ತ ಪೊಲೀಸರು ಬೀಸಿರುವ ಈ ಚಾವಟಿ ಏಟಿನಿಂದ ರಾಜ್ಯದ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಎದೆ ನಡುಗುತ್ತಿದೆ.ನಿವೃತ್ತಿಯಾಗುತ್ತೇವೆ ಕಾನೂನು ಏನು ಮಾಡುತ್ತದೆ ಎಂಬ ಹಳದಿ ಪ್ರಪಂಚದಲ್ಲಿದ್ದ ನಿವೃತ್ತ ವಿಸಿಯ ಬಂಧನ ಇತರರಿಗೆ ಪಾಠವಾಗಿದೆ.
#FreedomTV #Bidar #BidarUniversityScam #LokayuktaArrest #CorruptionScam #HDNarayanaswamy #VeterinaryUniversity #LokayuktaRaid #BreakingNews #KarnatakaNews #GovernmentFundsLoot #AntiCorruption #BidarNews




