Editorial

ಸಂಪಾದಕೀಯ

ಡಿಕೆ ಅವರನ್ನು ಜನ ಸ್ವೀಕರಿಸಿದ್ದಾರಾ..?

ಪ್ರಧಾನಿ ಮೋದಿ ಅವರ ಜತೆ ವೇದಿಕೆ ಹಂಚಿಕೊಂಡಿರುವುದು ತಮ್ಮ ಭಾಗ್ಯ ಎಂದು ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಇದಕ್ಕೂ ಮುನ್ನ ಅವರು ಬರ ಪ್ರವಾಸದ ವೇಳೆ ವಿಪಕ್ಷ ಶಾಸಕರ ಜತೆ ಪ್ರಗತಿ ಪರಿಶೀಲನೆ ನಡೆಸಿ ಸುದ್ದಿಯಾದರು. ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಕರೆಸಿ ಸಭೆ ನಡೆಸುವ ಮೂಲಕ ಮತ್ತೆ ವಿಭಿನ್ನತೆ ಮರೆದರು. ತಮ್ಮ ಪಕ್ಷದ ಶಾಸಕರು ಭೇಟಿಯಾಗಲು ಬಂದರೆ ಅವರಿಗೆ ಟಿಪಿಯಲ್ಲಿ ಅಪಾಯಿಂಟ್‌ಮೆಂಟ್‌ ತಗೋಬೇಕು ಎಂದು ಪರೋಕ್ಷವಾಗಿ ಸೂಚನೆ ಕೊಟ್ಟಿರುವ ಸಿಎಂ ಅವರು ವಿಪಕ್ಷಗಳ ನಾಯಕರ ಭೇಟಿ ಅವರ ಯೋಗಕ್ಷೇಮ ವಿಚಾರಿಸಲು ಭಾರಿ ಪ್ರೀತಿ ತೋರುತ್ತಿದ್ದಾರೆ. ಇದು ಸ್ವಪಕ್ಷೀಯ ನಾಯಕರ ಬೇಗುದಿಗೆ ಕಾರಣವಾಗಿದೆ. ಸಿದ್ದು ಪಾಳಯದ ಹುಡುಗರು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಮೋದಿಗೆ ಬಕೆಟ್‌ ಹಿಡಿದಿದ್ದು ಅತಿಯಾಯಿತು ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅನುಪಸ್ಥಿತಿ ಎದ್ದುಕಾಣುವಂತೆ ಡಿಕೆ ನಡೆದುಕೊಳ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ.

ತನ್ನ ಪಕ್ಷದಲ್ಲಿ ಸಿಎಂಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಸಿಎಂ ಆಗಿ ಒಂದೂವರೆ ತಿಂಗಳಾದರೂ ವಿಸ್ತರಣೆಗೆ ಅವಕಾಶ ಕೊಡುತ್ತಿಲ್ಲ. ಹಾಲಿ ಸಂಪುಟದಲ್ಲಿ ಇರುವ ಎಲ್ಲರೂ ಒಂದಷ್ಟು ಮಂದಿ ಸಿದ್ದು ಶಿಷ್ಯರು, ಮತ್ತಷ್ಟು ಮಂದಿ ಡಿಕೆ ಬಗೆಗೆ ಅಸಹನೆ ಇಟ್ಟುಕೊಂಡವರು. ಸಿದ್ದು, ಡಿಕೆ ಇಬ್ಬರಿಗೂ ಅವಕಾಶ ಕೊಡಬಾರದು ಎಂದು ವಾದಿಸಿರುವ ತೃತೀಯ ಗುಂಪಿನ ಜನರು. ಇಂಥ ಹೊತ್ತಲ್ಲಿ ಡಿಕೆ ಅವರು ವಿಪಕ್ಷಗಳ ನೇತಾರರಿಗೆ ಟ್ರೀಟ್‌ ಕೊಡುವಲ್ಲಿ ಭಾರೀ ಆಸಕ್ತಿ ತೋರುತ್ತಿದ್ದಾರೆ. ಇದೊಂದು ರೀತಿಯಲ್ಲಿ ಮನೆಯಲ್ಲಿ ನೆಮ್ಮದಿ ಇಲ್ಲದ ಗಂಡಸು ಬಾರು ಕ್ಲಬ್ಬುಗಳಲ್ಲಿ ಹೆಚ್ಚು ಕಾಲ ಕಳೆವಂತೆ ಎಂದು ಕೈ ಪಡೆಯ ಡಿಕೆ ವಿರೋಧಿಗಳು ವ್ಯಾಖ್ಯಾನ ಮಾಡ್ತಿದ್ದಾರೆ. ಈವರೆಗೆ ಇಲ್ಲದ ಮುತ್ಸದ್ದಿತನ ದಕ್ಕಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂಬುದೂ ಇದೆ.

ಸಿದ್ದರಾಮಯ್ಯ ಬಿಜೆಪಿಗರು ಮತ್ತು ಪ್ರಧಾನಿಗಳಿಂದ ಒಂದು ಅಂತರ ಕಾಯ್ದುಕೊಂಡಿದ್ದರು. ಜತೆಗೆ ಮೊದಲ ಅವಧಿಯಲ್ಲಿ ಅಹಿಂದ ಪಾಲಿಟಿಕ್ಸ್‌ ಮಾಡಿ ಮೇಲ್ಜಾತಿಗಳ ವಿರೋಧ ಕಟ್ಟಿಕೊಂಡಿದ್ದರು. ಬಿಜೆಪಿಯ ಸಿದ್ಧಾಂತ ಹತ್ತಿಕ್ಕಲು ಯತ್ನ ಮಾಡಿದ್ದರು. ಬಿಜೆಪಿಗರ ಪಾಲಿಗೆ ಕಾಂಗ್ರೆಸ್‌ ಆಡಳಿತ ಶತ್ರುವೆಂಬಂತೆ ಬಿಂಬಿತವಾಗಿತ್ತು. ಆದರೆ ಡಿಕೆ ಯದ್ದು ಸಂಪೂರ್ಣ ಭಿನ್ನ. ಸಿದ್ದು ಹಾದಿಗೆ ವಿರುದ್ಧ ದಾರಿಯಲ್ಲಿ ಸಾಗುತ್ತಿರುವ ಡಿಕೆಗೆ ಬಿಜೆಪಿ ನಾಯಕರು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ದೆಹಲಿಯ ಚಾಣಾಕ್ಷ ರಾಜಕಾರಣಿ ಅವಳಿ ನಗರದ ಪ್ರಹ್ಲಾದ್‌ ಚಾ.. ಕೂಡಾ ಮೆಚ್ಚಿರುವುದು ಗಮನಿಸಬೇಕಾದ ಅಂಶ. ಈ ಮೂಲಕ ಬಿಜೆಪಿಗರು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಹಂಗಿಸುತ್ತಿದ್ದಾರೆ.

ಡಿಕೆ ಅವರ ಈ ನಡೆ ಪರೋಕ್ಷವಾಗಿ ಸಿದ್ದರಾಮಯ್ಯರಿಗೆ ಟಕ್ಕರ್‌ ಕೊಟ್ತಿರುವಂತೆಯೂ ಕಾಣುತ್ತಿದೆ. ಇನ್ನು ಡಿಕೆ ಶಿವಕುಮಾರ್‌ ವಾರದ ಏಳೂ ದಿನ ಕೆಲಸ ಮಾಡ್ತಿದ್ದಾರೆ. ತಮ್ಮ ಇಮೇಜ್‌ ಬದಲಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಮುಂದೆಯೂ ಅವಕಾಶ ಸಿಕ್ರೆ ಸಿಎಂ ಗಾದಿಗೆ ಟವಲ್‌ ಹಾಕಲು ಹೊರಟಿದ್ದಾರೆ. ಹಲವು ದಶಕಗಳ ಈಚೆಗೆ ಒಮ್ಮೆಯೂ ರಾಜ್ಯದಲ್ಲಿ ಎರಡನೇ ಬಾರಿಗೆ ಸರ್ಕಾರ ರಚಿಸಿದ ಪಕ್ಷವಿಲ್ಲ. ಇದನ್ನು ಸುಳ್ಳಾಗಿಸಿ ಅವರು ಮತ್ತೆ ಕುರ್ಚಿ ಹಿಡಿವ ಆಸೆಯಲ್ಲಿ ಹೊಸ ಹೊಸ ವಿಚಾರ ಮಂಡಿಸುತ್ತಿದ್ದಾರೆ. ಆದರೆ ಜನ ಇನ್ನೂ ಡಿಕೆ ಅವರನ್ನು ಸಿಎಂ ಆಗಿ ಸ್ವೀಕರಿಸಿದ್ದಾರೆಯೇ ಎಂಬ ಪ್ರಶ್ನೆಗೆ ಭಾಗಶಃ ಎಂಬ ಉತ್ತರ ಸಿಕ್ಕರೆ ಅಚ್ಚರಿಯಿಲ್ಲ. ಜನರಿಂದ ಸಿಎಂ ಎನಿಸಿಕೊಳ್ಳಲು ಇವೆಲ್ಲ ಬಿಟ್ಟು ಬೇರೆಯದ್ದೇ ಕೆಲಸಗಳನ್ನು ಸಿಎಂ ಮಾಡಬೇಕು. ಅವರ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕಾದ ಹಲವು ವಿಚಾಗರಳ ಬಗ್ಗೆ ಅವರು ಧ್ಯಾನಿಸಬೇಕು..

Comments (0)

Your email address will not be published. Required fields are marked *

Back to top button