Editorial

ಸಂಪಾದಕೀಯ

Editorial

ಬಲಿ ಕೊಡುವುದು ಕುರಿ-ಕೋಳಿಗಳನ್ನೇ ಹೊರತು ಹುಲಿ-ಸಿಂಹ-ನರಿ-ತೋಳಗಳನ್ನಲ್ಲ ಎಂಬ ಮಾತು ಇಂದು ಕಾಂಗ್ರೆಸ್‌ನಲ್ಲಿ ಜೀವಂತವಾಗಿ ಕಾಣುತ್ತಿದೆ. ವಾಲ್ಮೀಕಿ ನಿಗಮ ಹಣದುರ್ಬಳಕೆ ಪ್ರಕರಣದಲ್ಲಿ ಎರಡನೇ ಬಾರಿ ಸಚಿವರಾಗಿದ್ದ ಬಿ.ನಾಗೇಂದ್ರ ಅವರನ್ನು ರಾಜೀನಾಮೆ ಕೊಡಿಸಿ, ಕಾಂಗ್ರೆಸ್ ಸರ್ಕಾರ ತನ್ನ ಆಂತರಿಕ ರಾಜಕೀಯದ “ಬಲಿದಾನ” ಪ್ರದರ್ಶನ ಮಾಡಿದೆ.

ಇದು ಕೇವಲ ಬಿಜೆಪಿಯ ಬಳ್ಳಾರಿ ಪಾದಯಾತ್ರೆಯಿಂದ ಮುಜುಗರವಾಗಿ ಮಾಡಿದ ಕ್ರಮವಲ್ಲ. ನಾಗೇಂದ್ರರನ್ನು ಬಲಿಕೊಟ್ಟು ಅತೃಪ್ತರನ್ನು ಸಮಾಧಾನಪಡಿಸುವ, ಸಿದ್ದರಾಮಯ್ಯ-ಡಿಕೆಶಿ ಕೋಲ್ಡ್‌ವಾರ್‌ನಲ್ಲಿ ಒಂದು ಸುಲಭ ತುಂಡು ಮಾಂಸವನ್ನು ಎಸೆಯುವ ತಂತ್ರ.

ಈಗ ಕುಮಾರಸ್ವಾಮಿಯವರು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೇಮಕಾತಿ ಹಗರಣ ನಡೆದಿದೆ ಎಂದಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಮೇಲೆ ರಾಜೀನಾಮೆ ಒತ್ತಡ ಬಂದಿದೆ, ಬಿಜೆಪಿ ಕೂಡ ಕೂಗುತ್ತಿದೆ. ಒಂದು ವೇಳೆ ಕಲಬುರಗಿ ಪಾದಯಾತ್ರೆ ನಡೆದರೂ ಪ್ರಿಯಾಂಕ್ ರಾಜೀನಾಮೆ ಕೊಡಿಸುವುದೇ? ಖಂಡಿತ ಇಲ್ಲ. ಅವರ ತಂದೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು, ಪಕ್ಷದಲ್ಲಿ ಪ್ರಭಾವದ ಪರ್ವತ. ಸತೀಶ್ ಜಾರಕಿಹೊಳಿ ಬಗ್ಗೆ ಆಗ್ರಹ ಬಂದರೂ ವಾತಾವರಣ ಬೇರೆಯೇ ಇರುತ್ತದೆ. ಏಕೆಂದರೆ ಅವರು ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ನಾಗೇಂದ್ರರಂತಹ ಸಣ್ಣ ನಾಯಕರು ಮಾತ್ರ “ಸುಲಭ ಬಲಿ”.

ನಾಗೇಂದ್ರ ರಾಜೀನಾಮೆ ಕೊಡದಿದ್ದರೆ ಪಕ್ಷಕ್ಕೆ ಅಷ್ಟೇನೂ ಡ್ಯಾಮೇಜ್ ಆಗುತ್ತಿರಲಿಲ್ಲ. ಆದರೆ ಒಕ್ಕಲಿಗರ ಕೃಷ್ಣಪ್ಪ ಅಥವಾ ಕುರುಬರ ಬಸವರಾಜ ಶಿವಣ್ಣನವರಿಗೆ ಸ್ಥಾನ ಕೊಡುವ ಲೆಕ್ಕಾಚಾರದಲ್ಲಿ ವಾಲ್ಮೀಕಿ ಸಮುದಾಯದ ನಾಯಕನನ್ನು ಬಲಿಕೊಟ್ಟಿದ್ದಾರೆ. ಬಳ್ಳಾರಿ ಭಾಗ ಮತ್ತು ವಾಲ್ಮೀಕಿ ಸಮುದಾಯದಲ್ಲಿ ಕಾಂಗ್ರೆಸ್ ಈಗ ಎಡವಿದೆ, ಮುಂದಿನ ಚುನಾವಣೆ ಹೊತ್ತಲ್ಲಿ ಇದು ಗೊತ್ತಾಗಲಿದೆ.

ಲಿಂಗಾಯತ ನಾಯಕರು ಮಠಮಾನ್ಯಗಳ ಅಂಗಳದಲ್ಲಿ, ಜಾತಿ ವೇದಿಗಳಲ್ಲಿ, ವೈವಾಹಿಕ ಸಂಬಂಧಗಳಲ್ಲಿ ಒಂದಾಗುತ್ತಾರೆ. ಒಕ್ಕಲಿಗ ಮುಖಂಡರೂ ಹಲವು ವಿಚಾರಗಳಲ್ಲಿ ಪಕ್ಷಾತೀತವಾಗಿ ಕೈಜೋಡಿಸುತ್ತಾರೆ. ಆದರೆ ಸಣ್ಣಪುಟ್ಟ ಜಾತಿಗಳ ನಾಯಕರಲ್ಲಿ? ದ್ವೇಷ ಹೊಗೆಯಾಡುತ್ತದೆ. ಅವರು ಮೇಲ್ಜಾತಿ ನಾಯಕರ ಅಣತಿಯಂತೆ ತಮ್ಮವರನ್ನೇ ಮುಗಿಸಲು ಮುಂದಾಗುತ್ತಾರೆ. ಸಮುದಾಯದ ಜನರಲ್ಲೂ ರಾಜಕೀಯ ಪ್ರಜ್ಞೆ, ಪೊಲಿಟಿಕಲ್ ಮೆಚ್ಯೂರಿಟಿ ಇನ್ನೂ ಕಡಿಮೆ. ಪ್ರಜಾತಂತ್ರದಲ್ಲಿ ಸಣ್ಣ ಜಾತಿಗಳ ನಾಯಕರಿಗೂ ಪ್ರಾತಿನಿಧ್ಯ ಸಿಗಬೇಕು ಎನ್ನುವುದು ಕೇವಲ ಮಾತು. ನಿಜವಾದ ಅಧಿಕಾರವಂತರು ಯಾರನ್ನು ಬಲಿಕೊಡಬೇಕು ಎಂದು ನಿರ್ಧರಿಸುತ್ತಾರೆ. ಸಣ್ಣಪುಟ್ಟ ಜಾತಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಯುವುದು ಇನ್ನೂ ಎಷ್ಟು ಕಾಲ ಕಾಯಬೇಕು?ಕಾಂಗ್ರೆಸ್‌ನಲ್ಲಿ “ನ್ಯಾಯ” ಎನ್ನುವುದು ಜಾತಿ-ಪ್ರಭಾವ-ಶಕ್ತಿಯ ಲೆಕ್ಕಾಚಾರ. ನಾಗೇಂದ್ರರಂತಹವರು ಬಲಿಯಾಗುತ್ತಾರೆ. ಇದೇ ಇಂದಿನ ರಾಜಕೀಯದ ಕಹಿ ಸತ್ಯ.

Comments (0)

Your email address will not be published. Required fields are marked *

Back to top button