Editorial

ಸಂಪಾದಕೀಯ…

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಯುಗಕ್ಕೆ ಅತ್ಯಂತ ನಾಟಕೀಯ ಅಂತ್ಯ ಹಾಡಲಾಗಿದ್ದು, ಇದನ್ನು ಬೇರೆ ಯಾವ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮೊದಲ ಅವಧಿಯಲ್ಲಿ ‘ಅಹಿಂದ’ ನಾಯಕ, ‘ಜನತಾ ಪರಿವಾರದ’ ಕುಡಿ ಎಂದು ಕರೆಸಿಕೊಂಡಿದ್ದ ಸಿದ್ದರಾಮಯ್ಯ, ಎರಡನೇ ಅವಧಿಯ ಕೊನೆಗೆ ‘ಜಾತಿವಾದಿ’, ‘ದುರಹಂಕಾರಿ’, ‘ವಂಶಾಡಳಿತದ ಪ್ರತಿಪಾದಕ’ ಎಂಬ ಕಳಂಕ ಹೊತ್ತುಕೊಂಡು ಮನೆಯ ದಾರಿ ಹಿಡಿಯುತ್ತಿದ್ದಾರೆ. ಇದು ಹೈಕಮಾಂಡ್ ನೀಡಿದ ‘ಗೌರವಯುತ ನಿರ್ಗಮನ’ ಅಲ್ಲ, ಬದಲಾಗಿ ‘ಹೀನಾಯ ವಿದಾಯ’. ಮಗನ ರಾಜಕೀಯ ಪ್ರವೇಶ, ಸ್ವಜಾತಿ ಅಧಿಕಾರಿಗಳ ಮೇಲಾಟ, ಎಗ್ಗಿಲ್ಲದ ಭ್ರಷ್ಟಾಚಾರ, ಆಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದು, ಮಾಧ್ಯಮಗಳ ಜೊತೆ ಸಮರ ಹಾಗೂ ವಯೋಸಹಜ ನಿತ್ರಾಣ – ಇವೆಲ್ಲವೂ ಸೇರಿ ಅವರನ್ನು ಜನರಿಂದ ದೂರ ಮಾಡಿತ್ತು. ಗ್ಯಾರಂಟಿಗಳ ಹೆಸರಲ್ಲಿ ರಾಜ್ಯದ ಬೊಕ್ಕಸ ಬರಿದು ಮಾಡಿ, ಆರ್ಥಿಕತೆಯನ್ನು ಹಳ್ಳಕ್ಕೆ ತಳ್ಳಿದ ‘ದುಂದುಗಾರಿಕೆ’ಯೇ ಅವರ ಆಡಳಿತದ ಮೈಲಿಗಲ್ಲಾಗಿದ್ದು, ಅಂದು ‘ಭಾಗ್ಯ’ ಕೊಟ್ಟ ಸಿದ್ದರಾಮಯ್ಯ ಕೊನೆಗೆ ‘ದುರ್ಭಾಗ್ಯ’ದ ಸಿಎಂ ಆಗಿ ಹೊರನಡೆಯುತ್ತಿದ್ದಾರೆ.

ಸಿದ್ದರಾಮಯ್ಯ ನಿರ್ಗಮನದ ನಂತರ ಈಗ ಡಿ.ಕೆ. ಶಿವಕುಮಾರ್ ಸರದಿ ಬಂದಿದ್ದು, ಇದು ಸಂಭ್ರಮದ ಪಟ್ಟಾಭಿಷೇಕ ಅಲ್ಲ, ಬದಲಿಗೆ ಅಗ್ನಿಪರೀಕ್ಷೆ. ಪಕ್ಷವನ್ನು ಸಾವಿರ ಬಾರಿ ಸಾವಿನ ದವಡೆಯಿಂದ ಪಾರು ಮಾಡಿದ ಚಾಣಕ್ಯ ‘ಟ್ರಬಲ್ ಶೂಟರ್’ ಶಕ್ತಿ ಅವರಲ್ಲಿದೆ. ಜೋಲಿ ಹೊಡೆಯದ, ಕಾಲಹರಣ ಮಾಡದ ‘ಎಸ್ ಅಂದ್ರೆ ಎಸ್’ ಎನ್ನುವ ಕಠಿಣ ನಿರ್ಧಾರ ಶಕ್ತಿ ಹಾಗೂ ಇಂಧನ-ನೀರಾವರಿ ಖಾತೆಗಳನ್ನು ಗೆಲ್ಲಿಸಿದ ಆಡಳಿತದ ಅನುಭವದ ಟ್ರ್ಯಾಕ್ ರೆಕಾರ್ಡ್ ಅವರ ಬೆನ್ನಿಗಿದೆ. ಕಾರ್ಯಕರ್ತರ ನಾಡಿಮಿಡಿತ ಅರಿತ, ಜನರ ಜೊತೆ ನೇರ ಸಂಪರ್ಕ ಇರುವ ಮಾಸ್ ಲೀಡರ್ ಆಗಿರುವ ಇವರು ‘ಬ್ರ್ಯಾಂಡ್ ಬೆಂಗಳೂರು’ ಮತ್ತು ನಗರಗಳ ಅಭಿವೃದ್ಧಿಯ ವಿಷನ್ ಹೊಂದಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರೇ, ನೀವು ಈ ಆರು ತಪ್ಪುಗಳನ್ನು ಮಾಡಿದರೆ ನಿಮ್ಮದೂ ‘ಹೀನಾಯ ವಿದಾಯ’ ಖಚಿತವಾಗುತ್ತದೆ.

ಮೊದಲನೆಯದಾಗಿ, ED-CBI ಕೇಸ್‌ಗಳ ಸುಳಿಯಲ್ಲಿರುವ ನೀವು ‘ಕರಪ್ಷನ್ ಕಿಂಗ್’ ಪಟ್ಟ ಹಾಗೂ ‘ಬಿಸಿನೆಸ್‌ಮ್ಯಾನ್’ ಇಮೇಜ್ ಕಿತ್ತೊಗೆದು, ಮೊದಲ ದಿನವೇ ಭ್ರಷ್ಟರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಿದೆ. ಎದುರಾಳಿಗಳನ್ನು ಮುಗಿಸುವ ‘ಸೇಡಿನ ರಾಜಕಾರಣ’ದ ಚಾಳಿ ಬಿಟ್ಟು, ನಿಮ್ಮ ‘ಟ್ರಬಲ್ ಶೂಟರ್’ ಶಕ್ತಿಯನ್ನು ರಾಜ್ಯದ ಸಮಸ್ಯೆ ಬಗೆಹರಿಸಲು ಬಳಸಬೇಕು. ನಿಮ್ಮನ್ನು ಮುಗಿಸಬಲ್ಲ ‘ಕುಡಿತ’ದ ವಿಡಿಯೋಗಳಂತಹ ವೈಯಕ್ತಿಕ ದೌರ್ಬಲ್ಯಕ್ಕೆ ಮಣಿಯದೆ, ಸಿಎಂ ಆದ ಮೇಲೆ ‘ಸ್ಥಿಮಿತ’ ಕಾಯ್ದುಕೊಳ್ಳುವುದೇ ನಿಮ್ಮ ದೊಡ್ಡ ಆಸ್ತಿಯಾಗಬೇಕು. ರಾಜ್ಯದ ಅಭಿವೃದ್ಧಿ ಎಂದರೆ ಪ್ರಾಫಿಟ್‌ ಅಂಡ್‌ ಲಾಸ್‌ ವ್ಯವಹಾರವಲ್ಲ ಎಂಬುದನ್ನು ಅರಿಯಿರಿ. ‘ಡೀಲ್’ ಮನಸ್ಥಿತಿ ಬಿಟ್ಟು ನಿಮ್ಮ ‘ಯೋಜನಾ ಶಕ್ತಿ’ಯನ್ನು ಜನಸೇವೆಗೆ ತಿರುಗಿಸಿ. ಗ್ಯಾರಂಟಿಯನ್ನು ಸ್ಕ್ರೀಮ್‌ ಲೈನ್‌ ಮಾಡುವ ಧೈರ್ಯ ತೋರಿ. ಆರ್ಥಿಕ ಶಿಸ್ತು ತಂದು ನಿಮ್ಮ ‘ನಿರ್ಧಾರ ಶಕ್ತಿ’ಯನ್ನು ಬೊಕ್ಕಸ ತುಂಬಲು ಬಳಸಿ. ಇಲ್ಲದಿದ್ದರೆ 2028ಕ್ಕೆ ಜನ ನಿಮ್ಮನ್ನು ಓಡಿಸುತ್ತಾರೆ. ಕೊನೆಯದಾಗಿ, ಸಿದ್ದರಾಮಯ್ಯ ಮಾಡಿದಂತೆ ಮಾಧ್ಯಮಗಳ ವಿರುದ್ಧ ಸೇಡಿಗೆ ನಿಲ್ಲಬೇಡಿ. ಅಧಿಕಾರಿಗಳನ್ನು ಕಾಲಕಸದಂತೆ ಕಾಣಬೇಡಿ. ಟೀಕೆ ಸಹಿಸಿ IAS ಲಾಬಿಗೆ ಕಡಿವಾಣ ಹಾಕಿ.

ಇಲ್ಲದಿದ್ದರೆ ಸಿದ್ದರಾಮಯ್ಯಗೆ ಹೈಕಮಾಂಡ್ ನೀಡಿದ ‘ಹೀನಾಯ ವಿದಾಯ’ದ ಗತಿ ನಾಳೆ ನಿಮಗೂ ಬರಬಹುದು, ಏಕೆಂದರೆ ಅಧಿಕಾರ ಶಾಶ್ವತವಲ್ಲ. ನಿಮ್ಮಲ್ಲಿರುವ ಶಕ್ತಿ, ಧೈರ್ಯ ಮತ್ತು ಅನುಭವವನ್ನು ಜಾತಿ, ಹಣ ಅಥವಾ ಸೇಡಿಗೆ ಬಳಸದೆ ಭವ್ಯ ಕರ್ನಾಟಕವನ್ನು ಕಟ್ಟಲು ಬಳಸಿ, ‘ಡೀಲ್ ಮಾಸ್ಟರ್’ ಇಮೇಜ್‌ನಿಂದ ‘ಸ್ಟೇಟ್ಸ್‌ಮನ್’ ಇಮೇಜ್‌ಗೆ ಬದಲಾಗಬೇಕಿದೆ. ಜನ ನಿಮಗೆ ಒಂದು ಕೊನೆಯ ಅವಕಾಶವನ್ನು ಕೊಡುತ್ತಿದ್ದು, ಅದನ್ನು ಹಾಳು ಮಾಡಿಕೊಂಡರೆ ಇತಿಹಾಸ ನಿಮ್ಮನ್ನೂ ಕ್ಷಮಿಸುವುದಿಲ್ಲ. ಜವಾಬ್ದಾರಿಯಿಂದ ಆಳಿ, ಕರ್ನಾಟಕವನ್ನು ಉಳಿಸಿ.

– ಪ್ರಧಾನ ಸಂಪಾದಕರು, Freedom TV


Comments (0)

Your email address will not be published. Required fields are marked *

Back to top button