ಸಂಪಾದಕೀಯ..

ರಾಜಕಾರಣ ಎಂಬುದು ಜಾತಿಬಲ, ತೋಳ್ಬಲ, ಹಣಬಲಗಳ ಸಂಗಮವಾಗಿ ಬಹಳ ವರ್ಷಗಳಾಗಿವೆ. ಎಂಎಲ್‌ಎ ಆಗಬೇಕಾದರೆ ಕ್ಷೇತ್ರದಲ್ಲಿ ತನ್ನ ಜಾತಿಯ ಮತದಾರರು ಹೆಚ್ಚಾಗಿರಬೇಕು. ಅವರು ತನ್ನ ಪರವಾಗಿರಬೇಕು. ಅವರು ತನ್ನ ಪರವಾಗಿರಬೇಕಾದರೆ ತಾನು ಜಾತಿವಾದಿ ಆಗಬೇಕು. ಬೇರೆ ಜಾತಿಯವರ ವಿರುದ್ಧ ಕೆಲಸ ಮಾಡಬೇಕು. ಆದರೆ ಬಹಿರಂಗವಾಗಿ ಜಾತಿ ಮೀರಿದವನಂತೆ ವರ್ತಿಸಬೇಕು. ಹೀಗೆ ಪ್ರಬಲ ಜಾತಿಯ ಮನ ಗೆದ್ದರೆ ಒಂದು ಹಂತದ ಎಕ್ಸಾಮ್ ಪಾಸ್ ಆದಂತೆ. ಇನ್ನು ತನ್ನದೇ ಜಾತಿಯ ಮತ್ತೊಬ್ಬ ಎದುರಾಳಿ ಹುಟ್ಟಿಕೊಳ್ಳದಂತೆ ನೋಡಿಕೊಳ್ಳಬೇಕು. ಬೇರೆ ಲೀಡರ್‌ಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಎದುರಾಳಿಯ ಮಾನಹಾನಿ, ಧನಹಾನಿ, ಕಡೆಗೆ ಪ್ರಾಣಹಾನಿಗೂ ಮುಂದಾಗಬೇಕು ಎಂಬ ಹತ್ಯಾ ರಾಜಕಾರಣಕ್ಕೆ ತಪರಾಕಿ ಬಿದ್ದಿದೆ.
ತನ್ನ ಎದುರಾಳಿಯಾಗಿ ಬೆಳೆಯುತ್ತಾನೆಂಬ ಭಯದಿಂದ ಯೋಗೇಶ್ ಗೌಡ ಎಂಬ ಬಿಜೆಪಿ ನಾಯಕನನ್ನು ಸುಪಾರಿ ಕೊಟ್ಟು ಕೊಲ್ಲಿಸಿದ್ದ ಕಾಂಗ್ರೆಸ್ ಶಾಸಕ ಧಾರವಾಡದ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನೂ ೧೬ ಜನರಿಗೂ ಇದೇ ಶಿಕ್ಷೆ ವಿಧಿಸಿ ಕೋರ್ಟ್ ಮಹತ್ವದ ಸಂದೇಶವೊಂದನ್ನು ರವಾನಿಸಿದೆ.ಒಂದಷ್ಟು ದಿನ ಜೈಲಲ್ಲಿದ್ದು ವಾಪಸ್ ಬಂದಿದ್ದ ಕುಲಕರ್ಣಿ ಇತ್ತೀಚೆಗೆ ಮಾತನಾಡುತ್ತಿದ್ದರು. ತನ್ನ ಅನುಪಸ್ಥಿತಿಯಲ್ಲಿ ಕ್ಷೇತ್ರ ನೋಡಿಕೊಂಡ ತನ್ನ ಪತ್ನಿಯನ್ನು ಸಮರ್ಥಿಸಿ ಮೀಡಿಯಾದವರನ್ನು ಬಯ್ಯುತ್ತಿದ್ದರು. “ನಾವು ಕಷ್ಟದಲ್ಲಿದ್ದೇವೆ, ಮೀಡಿಯಾದವರು ಸೂಕ್ಷ್ಮ ಮರೆತು ವರ್ತಿಸಿದ್ದಾರೆ” ಎಂದು ಪಾಠ ಮಾಡುತ್ತಿದ್ದರು. ಅಲ್ಲಿ ಅವರ ದುರಹಂಕಾರ ಎದ್ದು ಕಾಣುತ್ತಿತ್ತು. ತಾನು ಮಾತನಾಡುತ್ತಿರುವುದು ರಾಜ್ಯದ ಜನರ ಎದುರು ಎಂಬ ವಿಷಯ ಅವರಿಗೆ ಗೊತ್ತಿರಲಿಲ್ಲ.

ಈಗಲಾದರೂ ಕುಲಕರ್ಣಿಗೆ ತನ್ನ ಕುಕೃತ್ಯದ ಫಲವಾಗಿಯೇ ಮಾಧ್ಯಮ ತನ್ನನ್ನು ಹೀಗೆ ನಡೆಸಿಕೊಂಡಿದೆ ಎಂಬ ಅರ್ಥವಾಗಲಿ ಎಂದು ಆಶಿಸೋಣ. ಇದು ತನ್ನ ಅಧಿಕಾರ, ಹಣ, ಜಾತಿಯ ಕಾರಣಕ್ಕೆ ಬೇರೆಯವರ ಮೇಲೆ ಬರ್ಬರವಾಗಿ ವರ್ತಿಸುವ ರಾಜಕೀಯ ನಾಯಕರಿಗೆ ಎಚ್ಚರಿಕೆಯಾಗಿದೆ.ಎಂಎಲ್‌ಎಗಳು ಬಹಿರಂಗವಾಗಿ ಜಾತಿವಾದ ಮಾಡುವುದು ನಡೆಯುತ್ತಿದೆ. ತನ್ನ ಜಾತಿಯ ಜನರಿಗೆ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಕೊಡುವ ನೀಚತನವೂ ಮನೆಮಾಡಿದೆ. ಜೊತೆಗೆ ತಮಗೆ ಆಗದವರನ್ನು ಸುಳ್ಳು ಕೇಸುಗಳನ್ನು ಹಾಕಿ ಹಿಮ್ಮೆಟ್ಟಿಸುವ ಹೀನ ಕೃತ್ಯ ಎಸಗುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗಿದೆ. ಸಾಮಾನ್ಯರ ಆಸ್ತಿಗೆ ಫೇಕ್ ಲಿಟಿಗೇಷನ್ ಕ್ರಿಯೇಟ್ ಮಾಡಿ ನರಕವೂ ಇಲ್ಲ, ಸ್ವರ್ಗವೂ ಇಲ್ಲದಂತೆ ಮಾಡುವ ಪಾಪಿಷ್ಠ ಕೃತ್ಯ ಎಸಗುತ್ತಿರುವ ನಮ್ಮ ರಾಜಕಾರಣಿಗಳು ನಿತ್ಯ ಕಾನೂನು ಭಂಗದಲ್ಲಿ ತೊಡಗಿದ್ದಾರೆ. ಇವರಿಗೆ ಕಾನೂನಿನ ಬಗ್ಗೆ ಕನಿಷ್ಠ ಭಯವೂ ಇಲ್ಲ.
ಅಷ್ಟೇ ಅಲ್ಲ, ಸ್ಥಳೀಯ ಅಧಿಕಾರ ಶಾಹಿಯನ್ನು ತಮ್ಮ ತೀಟೆಗಳಿಗೆ ಬಳಸಿಕೊಳ್ಳುವ ರಾಜಕಾರಣಿಗಳ ಕುಚೇಷ್ಟೆ ಮೀರಿದೆ. ನಮ್ಮ ನೌಕರಶಾಹಿಯೂ ರಾಜಕಾರಣಿಗಳ ಚಮಚಾಗಿರಿ ಮಾಡಿಕೊಂಡು ತಮ್ಮ ವಿರೋಧಿಗಳನ್ನು, ಜನಸಾಮಾನ್ಯರನ್ನು ಹಿಂಸೆಮಾಡುತ್ತಿರುವ ಬೆಳವಣಿಗೆ ನಿರಂತರವಾಗಿ ನಡೆಯುತ್ತಿದೆ. ತಾವೇನು ಮಾಡಿದರೂ ನಡೆಯುತ್ತದೆ ಎನ್ನುವ ಅಹಂಕಾರ ಈ ರಾಜಕಾರಣಿಗಳಲ್ಲಿ ಮನೆಮಾಡಿದೆ.ಇಂಥ ಹಲಾಲುಕೋರ ರಾಜಕಾರಣಿಗಳಿಗೆ ಜನಪ್ರತಿನಿಧಿಗಳ ಕೋರ್ಟ್ ಪಾಠ ಕಲಿಸುವ ಮೂಲಕ ಜನಸಾಮಾನ್ಯರಲ್ಲಿ ಭರವಸೆ ಹುಟ್ಟಿಸಿದೆ. ಜೊತೆಗೆ ಹಂತಕ ರಾಜಕಾರಣವನ್ನು ಹಿಮ್ಮೆಟ್ಟಿಸುವ ಶಕ್ತಿ ಕಾನೂನಿಗೆ ಇದೆ ಎಂಬ ಸಂದೇಶವನ್ನು ರವಾನಿಸಿದೆ. ಈ ನಿಟ್ಟಿನಲ್ಲಿ ಸಿಬಿಐ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಿಗೆ ಸಮಾಜ ಅಭಾರಿಯಾಗಬೇಕು. ಪುಂಡ ರಾಜಕಾರಣಿಗಳು ತಾವು ಎಲ್ಲ ಜನರ ಸೇವಕರು ಎಂದು ತಿಳಿದುಕೊಳ್ಳಬೇಕು. ತಮ್ಮ ತೀಟೆಗಳಿಗಾಗಿ ಜಾತಿ, ಹಣ, ತೋಳ್ಬಲ ಬಳಸಿದರೆ ಗಂಭೀರ ಪರಿಣಾಮಗಳ ಗ್ಯಾರಂಟಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.


