ಸಂಪಾದಕೀಯ..

ಕೈಯಲ್ಲಿ ರಾಡು ಹಿಡಿದು ನುಗ್ಗುತ್ತಿರುವ ಇಡಿ (Enforcement Directorate), ಹಣಕಾಸು ಹಗರಣಗಳ ಬೇಟೆಗೆ ನಿಂತಿದೆ. ಇಡಿ ಏಟಿಗೆ ಬಿಜೆಪಿಯೇತರ ಲೀಡರ್‌ಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಹಲವರು ಬೆಚ್ಚಿಬಿದ್ದು ಬಿಜೆಪಿ ಸೇರಿದ್ದಾರೆ. ಹಲವರು “ಇಲ್ಲಿದ್ದರೆ ಕ್ಷೇಮವೋ, ಅಲ್ಲಿದ್ದರೆ ಹಿತವೋ” ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸೇರಿ ರೇಡ್ ಎದುರಿಸುತ್ತಿರುವ ಹಲವರಿಗೆ, ಕಾಂಗ್ರೆಸ್‌ನಲ್ಲಿದ್ದರೆ ಅಧಿಕಾರಯೋಗ ಬರುವ ಆಸೆ ಇನ್ನೂ ಉಳಿದಿದೆ. ಕಾಂಗ್ರೆಸ್ ನೆರಳಲ್ಲಿ ಕುಳಿತು ಭರ್ಜರಿ ಊಟ ಮಾಡುತ್ತಿರುವ ಜಮೀರ್, ನಾಗೇಂದ್ರ, ತುಕಾರಾಮ್, ನಲಪಾಡ್‌ಗಳು ಈಗ ಕಂಗಾಲಾಗಿದ್ದಾರೆ.
ಪ್ರತಿ ರೇಡು ನಡೆದಾಗಲೂ ಧುತ್ತನೆ ಜಿಗಿಯುವ ಪ್ರಿಯಾಂಕ್ ಖರ್ಗೆ, ಇಡಿ-ಸಿಬಿಐಗಳ ವಿರುದ್ಧ ಹೊಡೆಬಡಿಯ ದಾಂಡಿಗರು. ಅವರಿಗೆ ಆ ಧೈರ್ಯ ಎಲ್ಲಿಂದ ಬರುತ್ತದೆಯೋ ಗೊತ್ತಿಲ್ಲ. “ಇಡಿ, ಸಿಬಿಐ ಮತ್ತು ಬಿಜೆಪಿಯನ್ನು ಬೈಯದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಇಲ್ಲ” ಎಂದು ಅವರು ಭಾವಿಸಿದಂತಿದೆ.
ದೆಹಲಿಯ ಸಿಎಂ ಕೇಜ್ರಿವಾಲ್ ಮೇಲೂ ಇಡಿ-ಸಿಬಿಐ ದಾಳಿ ನಡೆಸಿ ಜೈಲಿಗೆ ಅಟ್ಟಿದ್ದವು. ಆದರೆ ಕಾಲದ ನಿಕಷದಲ್ಲಿ ಗೆದ್ದು ಬಂದ ಅವರು, ತಾವು ಶುದ್ಧಹಸ್ತರೆಂದು ಕೂಗಿ ಕೂಗಿ ಹೇಳುತ್ತಿದ್ದಾರೆ. ಇರುವಷ್ಟರಲ್ಲಿ ಲೂಟಿಯಿಂದ ದೂರವಿದ್ದವರನ್ನು ಕಟ್ಟಿ ಹಾಕುವಲ್ಲಿ ಇಡಿ-ಸಿಬಿಐಗಳು ಸದ್ಯಕ್ಕೆ ಸೋತಿವೆ.
ಇತ್ತೀಚೆಗೆ ನಲಪಾಡ್ ಮೇಲಿನ ದಾಳಿಯ ಬಳಿಕ ಕಾಂಗ್ರೆಸ್ ಡಾಕ್ಯುಮೆಂಟ್ ರಿಲೀಸ್ ಮಾಡಿ, “ಕಳೆದ ಎಂಟು ವರ್ಷಗಳಲ್ಲಿ ಒಟ್ಟು 121 ರಾಜಕಾರಣಿಗಳ ಮೇಲೆ ಇಡಿ ಮುಗಿಬಿದ್ದಿದೆ. ಅದರಲ್ಲಿ 115 ಜನ ನಮ್ಮವರೇ” ಎಂದು ಅಳುತ್ತಿದೆ. ಇಂದಿನ ಲೀಡರ್‌ಗಳ ಯಾವುದೇ ವ್ಯವಹಾರವನ್ನು ಮುಟ್ಟಿದರೂ, ಅವರನ್ನು ದಸ್ತಗಿರಿ ಮಾಡಬಹುದಾದ ಲೋಪಗಳು ಅವರ ಟ್ರಾನ್ಸಾಕ್ಷನ್‌ಗಳಲ್ಲಿ ಇರುತ್ತವೆ. ಇದು ಬಿಜೆಪಿ ಸೇರಿದಂತೆ ಎಲ್ಲ ಸಾಂಪ್ರದಾಯಿಕ ಪಕ್ಷಗಳ ರಾಜಕಾರಣಿಗಳಿಗೂ ಅನ್ವಯವಾಗುತ್ತದೆ.
ನಲಪಾಡ್ ದುರಂತ:
ಅವತ್ತು ರಾಜ ಕುಟುಂಬದ ಕುಡಿಗಳ ಸ್ನೇಹಿತ ವಿದ್ವತ್ ಲೇಲೆ ಉಷ್ಟ ಅಟ್ಟಹಾಸ ಗೈದಿದ್ದ ಬಿಡಿಎ ಅಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್, ಜೈಲು ಪಾಲಾಗಿದ್ದರು. ನಂತರ ಹೊರಬಂದು ಕಣ್ಣೀರು ಹಾಕಿದ್ದರು. ಇದೀಗ ಹ್ಯಾಕರ್ ಶ್ರೀಕಿ (Sriki) ಜೊತೆ ದಂಧೆ ಮಾಡಿ ಇಡಿ ಕೇಸು ಹೆಟ್ಟಿಸಿಕೊಂಡು ಮತ್ತೆ ರೋಡ್‌ನಲ್ಲಿ ನಿಂತು “ಅಂಬೋ” ಅನ್ನುತ್ತಿದ್ದಾರೆ. “ನನ್ನ ತಂದೆಗೆ ನನ್ನಿಂದ ನೋವಾಗುತ್ತಿದೆ” ಎಂದು ಲಬೋ ಎನ್ನುತ್ತಿದ್ದಾರೆ. ವಿದ್ವತ್ ಪ್ರಕರಣದಲ್ಲೇ ಬುದ್ಧಿ ಕಲಿಯಬೇಕಿದ್ದ ನಲಪಾಡ್, ದುಷ್ಟರ ಸಹವಾಸ ಮಾಡಿ, ರಾಂಗ್ ಅಡ್ವೈಸ್ ಮೂಲಕ ತಮ್ಮ ಕುಟುಂಬಸ್ಥರನ್ನೇ ಎಡವಟ್ಟಿಗೆ ದೂಡುತ್ತಿದ್ದಾರೆ ಎಂದು ಕಾಣುತ್ತಿದೆ.
ಕಾಂಗ್ರೆಸ್ಸಿಗರು ಹೇಳುವಂತೆ ಬಿಜೆಪಿ ಹುಡುಕಿ ಹುಡುಕಿ ಇಡಿ ಯನ್ನು ಕಳುಹಿಸುತ್ತಿರಬಹುದು. ಆದರೆ ಇವರು ಮಾಡಿರುವ ಎಡವಟ್ಟುಗಳೂ ಇದಕ್ಕೆ ಕಾರಣವಲ್ಲವೇ? ಬಿಜೆಪಿ ಈಗಾಗಲೇ ಅರ್ಧ ದೇಶ ಗೆದ್ದು ಮುನ್ನುಗ್ಗುತ್ತಿದೆ. ಬಿಜೆಪಿಯೇತರ ನಾಯಕರಿಗೂ ಬಿಜೆಪಿ ನಾಯಕರಿಗೂ ಅಂತಹ ದೊಡ್ಡ ವ್ಯತ್ಯಾಸವಿಲ್ಲ ಎನ್ನುವುದು ಸತ್ಯ. ಆದರೆ ಚುನಾವಣೆ ಗೆಲ್ಲಲು ಇಡಿ-ಸಿಬಿಐಯನ್ನು ಹೊತುಪಡಿಸಿ ಅದರ ಬಳಿ ಹಲವು ಅಸ್ತ್ರಗಳಿವೆ. ಹಾಗಾಗಿ ಮುಂದೆ ಬಿಜೆಪಿಯೂ ಸಹ ಇಡಿ-ಸಿಬಿಐ ಟೂಲ್ ಬಳಕೆಯ ಕಳಂಕದಿಂದ ಮುಕ್ತಿ ಪಡೆಯಲು ಯತ್ನ ಮಾಡಬೇಕು. ಇಲ್ಲದಿದ್ದರೆ ಜನರ ನಂಬಿಕೆ ಕಳೆದುಕೊಳ್ಳುವ ಅಪಾಯವಿದೆ. ರಾಜಕೀಯವಾಗಿ ಯಾರೇ ಇರಲಿ, ಅವರು ಮಾಡಿದ ತಪ್ಪುಗಳಿಗೆ ಜವಾಬ್ದಾರರಾಗಬೇಕು. ಆದರೆ ಆ ತನಿಖೆಗಳು ನ್ಯಾಯಸಮ್ಮತವಾಗಿ, ಪಕ್ಷಪಾತರಹಿತವಾಗಿ ನಡೆಯಬೇಕು. ಈ ರೇಡ್‌ಗಳು ನಿಜವಾಗಿ ಭ್ರಷ್ಟಾಚಾರದ ವಿರುದ್ಧದ ಹೋರಾಟವಾಬೇಕು, ರಾಜಕೀಯ ಆಯುಧವಾಗಬಾರದು. ಅದೇ ನಿಜವಾದ ಪ್ರಜಾತಾಂತ್ರಿಕ ಆಡಳಿತ.




