ಸಂಪಾದಕೀಯ..

ನಮ್ಮ ಎಂಎಲ್ಎಗಳು ಅಸಲಿಗೆ ಏನೆಲ್ಲಾ ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ನಮ್ಮಂಥ ರಾಜಧಾನಿ ಕೇಂದ್ರಿತ ಪತ್ರಕರ್ತರಿಗೆ ಗೊತ್ತಿರುವುದಿಲ್ಲ. ಏಕೆಂದರೆ ಆ ಎಂಎಲ್ಎಗೆ ಎಷ್ಟು ಗ್ರಾಂಟ್ ಬಂದಿದೆ, ಅದರಲ್ಲಿ ಆತನ ಪರ್ಸೆಂಟೇಜ್ ಎಷ್ಟು ಎಂದಷ್ಟೇ ಅಂದಾಜಿಸಿ ಸುಮ್ಮನಾಗುತ್ತೇವೆ. ಉಳಿದಂತೆ ಅವನ ಕ್ಷೇತ್ರದಲ್ಲಿ ಬೇರೆ ಬೇರೆ ಇಲಾಖೆಯ ಎಷ್ಟು ಪ್ರಾಜೆಕ್ಟ್ಗಳು ಬಂದಿವೆ, ಅದರಲ್ಲಿ ಕಮಾಯಿಸಿದ ಪರ್ಸೆಂಟೇಜ್ ಎಷ್ಟು? ಕ್ಷೇತ್ರದಲ್ಲಿ ಆತ ಮಾಡಿಸಿದ ವರ್ಗಾವಣೆ ದುಡಿಮೆ ಎಷ್ಟು? ಹಳೆಯ ಹಗರಣ ಕೆದಕಿ ಕಟಾಯಿಸಿದ್ದೆಷ್ಟು? ಬೇರೆ ಇಲಾಖೆಗಳ ಫೈಲ್ ಹಿಡಿದು ಮಾಡಿದ ಬ್ರೋಕರೇಜ್ ಎಷ್ಟು? ಮಾಡುತ್ತಿರುವ ಕಾರ್ಯಕ್ರಮಗಳೆಷ್ಟು? ಆತನ ಬಳಿ ಎಷ್ಟು ಜನ ಕರ ಸಂಗ್ರಾಹಕರಿದ್ದಾರೆ? ಮಂತ್ಲಿ ದುಡಿಮೆ ಎಷ್ಟಿರಬಹುದು, ಖರ್ಚು ಎಷ್ಟು? ಆತ ಆಡಳಿತ ಯಂತ್ರ ಬಳಸಿ ಎದುರಾಳಿಗಳನ್ನು ಹೇಗೆ ಮಟ್ಟಹಾಕುತ್ತಾನೆ? ಮುಂದೆಯೂ ಮತ್ತೆ ಗೆಲ್ಲಲು ಏನೇನು ಮಾಡುತ್ತಿದ್ದಾನೆ ಎಂಬುದೆಲ್ಲದರ ಅಂದಾಜು ನಮಗೆ ಇರುವುದಿಲ್ಲ..
ಈಗ ಇಬ್ಬರು ಎಂಎಲ್ಎಗಳ ಇಂದಿನ ಹೇಳಿಕೆ ಬಗ್ಗೆ ಚರ್ಚೆ ಮಾಡೋಣ. ಮಂಡ್ಯ ಕಾಂಗ್ರೆಸ್ ಎಂಎಲ್ಎ ಶ್ರೀಯುತ ಗಣಿಗ ರವಿ ಕುಮಾರ್ ಅವರ ಬಾಯಲ್ಲಿ ಬೆಂಕಿ ಉಗುಳಿ ಸದ್ದು ಮಾಡಿದ್ದಾರೆ. “ಮಂಡ್ಯ ವಿವಿ ಮುಚ್ಚಲು ಮುಂದಾದರೆ ಬೆಂಕಿ ಹಚ್ಚಿಸುತ್ತೇನೆ. ರಸ್ತೆಯಲ್ಲಿ ಓಡಾಡೋಕೆ ಬಿಡಲ್ಲ” ಎಂದಿದ್ದಾರೆ. “ಮಂಡ್ಯ ಯೂನಿವರ್ಸಿಟಿ ಕ್ಯಾನ್ಸಲ್ ಆದರೆ ಮೈಸೂರಿನ ಗುಲಾಮರಾಗ್ತೇವೆ” ಎಂದು ಅಬ್ಬರಿಸಿದ್ದಾರೆ. ಕ್ರಿಮಿನಲ್ ಕೇಸ್ಗೆ ಅರ್ಹವಾದ ಮಾತುಗಳು, ಎಂಎಲ್ಎ ಬಾಯಲ್ಲಿ ಸಹಜ ನುಡಿಗಳಾಗಿ ಹೊಮ್ಮಿರುವುದು ನಮ್ಮ ರಾಜಕಾರಣಿಗಳ ಸಂದಾಯದ ಮನಸ್ಥಿತಿಗೆ ಕನ್ನಡಿ ಹಿಡಿದಿವೆ. ಜೊತೆಗೆ ಮಂಡ್ಯದಲ್ಲಿ ವಿವಿ ಹೋದರೆ ಮೈಸೂರಿನ ಗುಲಾಮರಾಗ್ತೇವೆ ಎನ್ನುವ ಮಾತು, ಇವರ ಶ್ರೇಷ್ಠ ದರ್ಜೆಯ ಚಿಂತನೆಯನ್ನು ಜಾಹೀರು ಮಾಡಿದೆ. ಇಂಥ ಮಹೋನ್ನತ ಚಿಂತನೆಯುಳ್ಳ ಜನ ಪ್ರತಿನಿಧಿಯನ್ನು ಪಡೆದ ಮಂಡ್ಯದ ಜನರು ಧನ್ಯರು…
ಇನ್ನು ಕೆ.ಆರ್. ಪೇಟೆ ಎಂಎಲ್ಎ ಎಚ್ಟಿ ಮಂಜು ಎನ್ನುವ ಮಹನೀಯರು, ಭ್ರೂಣ ಹತ್ಯೆಗೆ ಸಹಕರಿಸಿದ ವೈದ್ಯರನ್ನು ಜೈಲಿಗಟ್ಟಿದ್ದು ಸರಿಯಲ್ಲ ಎಂದು ವಾದಿಸಿದ್ದಾರೆ. ಸಣ್ಣ ನಿರ್ಲಕ್ಷ್ಯಕ್ಕೆ ವೈದ್ಯರನ್ನು ಅರೆಸ್ಟ್ ಮಾಡಬಾರದಿತ್ತು ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಲೋಕಾಯುಕ್ತ ವರದಿ ಬಳಿಕ ವೈದ್ಯಕೀಯ ವೃತ್ತಿಗೆ ದ್ರೋಹ ಬಗೆದ ವೈದ್ಯರನ್ನು ದಸ್ತಗಿರಿ ಮಾಡಿದ್ದು ತಪ್ಪು ಎನ್ನುವ ಮೂಲಕ ಗೌರವಾನ್ವಿತ ಮಂಜು ಅವರಿಗೆ ಭ್ರೂಣಹತ್ಯೆ ಎಂಬುದು ಅಪರಾಧವೂ ಅಲ್ಲ, ಪಾಪವೂ ಅಲ್ಲ…!. ಭ್ರೂಣ ಹತ್ಯೆ ರಾಜ್ಯದಲ್ಲಿ ತೀವ್ರವಾಗಿದೆ. ಪರಿಣಾಮ ಬಹುತೇಕ ಸಮುದಾಯಗಳಲ್ಲಿ ಮದುವೆಗೆ ವಧು ಸಿಗುತ್ತಿಲ್ಲ. ಪರಿಣಾಮ ವಧು ದಕ್ಷಿಣೆ ಕೊಟ್ಟರೂ ಹೆಣ್ಣು ಸಿಗದೆ ಸಮಾಜದ ನೆಮ್ಮದಿ ಹಾಳಾಗಿದೆ. ಲಿಂಗಾನುಪಾತ ಕುಸಿತದಲ್ಲಿ ಮಂಡ್ಯ ಜಿಲ್ಲೆ ಇಡೀ ರಾಜ್ಯದಲ್ಲೇ ಕಳಪೆಯಾಗಿದೆ. ಲಿಂಗ ಅಸಮಾನತೆ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕಾಯಿದೆ ತಂದಿದೆ. ಆದರೂ ಐದು-ಹತ್ತು ಸಾವಿರದ ಆಸೆಗೆ ಬಿದ್ದು ವೈದ್ಯರು ಭ್ರೂಣ ಹತ್ಯೆಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಇವರಿಗೆ ಇಂಥ ಶಾಸಕರ ಪರೋಕ್ಷ ಬೆಂಬಲ ಇರುವುದು ದುರಂತವೇ ಸರಿ.
ನಮ್ಮ ನಾಯಕರು ಲಿಟಿಗೇಷನ್ ದಂಧೆ, ಮೀಡಿಯೇಷನ್ ಬಿಸಿನೆಸ್, ಫಾರಿನ್ ಸರ್ವಿಸ್ನಲ್ಲಿ ಮುಳುಗಿರುತ್ತಾರೆ. ಆದಷ್ಟು ಬೇಗ ಸಾವಿರ ಕೋಟಿ ಕ್ಲಬ್ ಸೇರಲು ಸರ್ಕಸ್ ಮಾಡುತ್ತಿರುತ್ತಾರೆ. ಈ ಹಾದಿಯಲ್ಲಿ ಧರ್ಮ ಸೂಕ್ಷ್ಮದ ಬಲು ದುಂಡಾವರ್ತಿ, ಜನ ಸೇವೆ ಬದಲು ಧನ ದಾಹ, ಕಾನೂನು ಬದಲು ವೈಯಕ್ತಿಕ ಪುಢಾರಿಗಿರಿ ವಿಜೃಂಭಿಸುತ್ತಿದೆ. ಇಂಥಹವರನ್ನು ಗುರುತಿಸಿ ಎಲ್ಲ ಪಕ್ಷಗಳ ಹೈಕಮಾಂಡ್ಗಳು ಟಿಕೆಟ್ ಕೊಡಬಾರದು. ಜನರೂ ಬೆಂಬಲಿಸಬಾರದು. ರಾಜಕಾರಣಿಗಳು ಪ್ರೌಢತೆ ಬೆಳೆಸಿಕೊಳ್ಳಬೇಕು. ಜನ ಕೊಟ್ಟ ಅಧಿಕಾರವನ್ನು ವಿನಯದಿಂದ ಅನುಭವಿಸಬೇಕು. ಅಧಿಕಾರ ನೆತ್ತಿಗೇರಿ ತಲೆ ನಿಲ್ಲದಂತಾಡಿದರೆ, ಜನಾರ್ದನ ರೆಡ್ಡಿ, ವಿನಯ್ ಕುಲಕರ್ಣಿ, ಪ್ರಜ್ವಲ್ ರೇವಣ್ಣ, ಪಪ್ಪಿಗಳಾಗಬೇಕಾದೀತು.




