ಕಾಂಗ್ರೆಸ್ನಲ್ಲಿ ಮುಂದುವರಿದ ಸಚಿವ ಸ್ಥಾನದ ಬಂಡಾಯ – ಇಂದು ದೆಹಲಿಗೆ ಡಿಕೆಶಿ ಭೇಟಿ!
The rebellion over ministerial posts continues in the Congress - DKSH expedition to Delhi today!

ಬೆಂಗಳೂರು : ಡಿಕೆ ಸರ್ಕಾರದಲ್ಲಿ ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆಯ ಅಸಮಾಧಾನದ ಕಿಚ್ಚು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದರ ನಡುವೆಯೇ ಹೈಕಮಾಂಡ್ ನಾಯಕರ ಜೊತೆ ಮಹತ್ವದ ಚರ್ಚೆ ನಡೆಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಚಿವ ಸ್ಥಾನ ಮತ್ತು ಪ್ರಭಾವಿ ಖಾತೆಗಳ ಹಂಚಿಕೆ ವಿಚಾರದಲ್ಲಿ ಸಚಿವರ, ಶಾಸಕರ ಅಸಮಾಧಾನ ಮುಂದುವರಿದಿದೆ. ಹಳೇ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಿರುವ ಬಗ್ಗೆ ಪಕ್ಷದೊಳಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ಮಟ್ಟದಲ್ಲೇ ಅಂತಿಮ ತೆರೆ ಎಳೆಯಲು ಡಿ.ಕೆ. ಶಿವಕುಮಾರ್ ದೆಹಲಿ ದಂಡಯಾತ್ರೆ ಕೈಗೊಂಡಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಮುಖ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಡಿಕೆಶಿ ಭೇಟಿ ಮಾಡಲಿದ್ದಾರೆ.
ಕೆಲವು ಹಾಲಿ ಸಚಿವರ ರಾಜೀನಾಮೆ ಪಡೆದು, ಸಚಿವ ಸಂಪುಟಕ್ಕೆ ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸರ್ಕಾರದ ಪ್ರಮುಖ ಹಾಗೂ ಪ್ರಭಾವಿ ಖಾತೆಗಳನ್ನು ಪಡೆದುಕೊಳ್ಳಲು ಶಾಸಕರಿಂದ ತೀವ್ರ ಲಾಬಿ ಮುಂದುವರಿದಿದೆ.
ಹೈಕಮಾಂಡ್ ನಾಯಕರ ಜೊತೆಗಿನ ಇಂದಿನ ಸಭೆಯ ಬಳಿಕ ರಾಜ್ಯ ರಾಜಕಾರಣದಲ್ಲಿ ಯಾವ ಮಹತ್ವದ ಬದಲಾವಣೆಗಳಾಗಲಿವೆ ಮತ್ತು ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.




