ಸಿಜೆಪಿ ಪ್ರತಿಭಟನೆ – ದೆಹಲಿಯ 16 ಮೆಟ್ರೋ ಸ್ಟೇಷನ್ ಬಂದ್!
CJP Protest – 16 Delhi Metro Stations Closed!

ನವದೆಹಲಿ : ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ ವಿರೋಧಿಸಿ ಸಿಜೆಪಿ ಪ್ರತಿಭಟನೆ ಮುಂದುವರೆಸಿರುವ ನಡುವೆ ಭದ್ರತಾ ಕಾರಣದಿಂದಾಗಿ ದೆಹಲಿಯ ಪ್ರಮುಖ 16 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಭದ್ರತಾ ಹಿತದೃಷ್ಟಿಯಿಂದ ದೆಹಲಿಯ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಹಾಗೂ ಮಂಡಿ ಹೌಸ್ ಸೇರಿದಂತೆ ಒಟ್ಟು 16 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಇಂದು ಬೆಳಿಗ್ಗೆಯಿಂದಲೇ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಬೃಹತ್ ವಿದ್ಯಾರ್ಥಿ ಪ್ರತಿಭಟನೆ ನಡೆಯುತ್ತಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಆದೇಶದವರೆಗೆ ಈ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಮುಚ್ಚಿರಲಿವೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (DMRC) ಸ್ಪಷ್ಟಪಡಿಸಿದೆ.
ಲೋಕ ಕಲ್ಯಾಣ ಮಾರ್ಗ, ರಾಜೀವ್ ಚೌಕ್, ಪಟೇಲ್ ಚೌಕ್, ರಾಮಕೃಷ್ಣ ಆಶ್ರಮ ಮಾರ್ಗ, ಬಾರಾಖಂಬಾ ರೋಡ್, ಸುಪ್ರೀಂ ಕೋರ್ಟ್, ಸೇವಾ ತೀರ್ಥ, ಜನಪಥ್, ಮಂಡಿ ಹೌಸ್, ಸೆಂಟ್ರಲ್ ಸೆಕ್ರೆಟರಿಯೇಟ್, ಐಟಿಒ, ದೆಹಲಿ ಗೇಟ್, ಇಂದ್ರಪ್ರಸ್ಥ, ಖಾನ್ ಮಾರ್ಕೆಟ್, ಜೋರ್ ಬಾಗ್, ಶಿವಾಜಿ ಸ್ಟೇಡಿಯಂ ಅನ್ನು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಬಂದ್ ಮಾಡಲಾಗಿದೆ.
ಪ್ರಯಾಣಿಕರಿಗೆ ನಿರಾಳ : ಇಂಟರ್ಚೇಂಜ್ ಸೌಲಭ್ಯ ಲಭ್ಯ
ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದ್ದರೂ, ಪ್ರಯಾಣಿಕರ ಅನುಕೂಲಕ್ಕಾಗಿ ರಾಜೀವ್ ಚೌಕ್, ಮಂಡಿ ಹೌಸ್ ಮತ್ತು ಸೆಂಟ್ರಲ್ ಸೆಕ್ರೆಟರಿಯೇಟ್ ನಿಲ್ದಾಣಗಳಲ್ಲಿ ಬೇರೆ ಮಾರ್ಗಗಳಿಗೆ ರೈಲು ಬದಲಾಯಿಸುವ ಸೌಲಭ್ಯವು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು DMRC ತಿಳಿಸಿದೆ.




