
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಅಕ್ರಮ ದಂಧೆಕೋರರನ್ನು ಸಾಕ್ಷ್ಯ ಸಮೇತ ಹಿಡಿದುಕೊಟ್ಟರೂ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ವಿಶ್ವನಾಥಪುರ ಪೊಲೀಸರು, ನನ್ನ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಹಾಗೂ ಯುವ ವಕೀಲ ನಿಖಿಲ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂದೆ ಒಬ್ಬಂಟಿಯಾಗಿ ಧರಣಿ ಕುಳಿತಿದ್ದಾರೆ. ನ್ಯಾಯಪರವಾಗಿ ಧ್ವನಿ ಎತ್ತಿದರೆ ಅಂತಹ ವ್ಯಕ್ತಿಗಳ ಧ್ವನಿಯನ್ನು ಪೊಲೀಸರು ಅಡಗಿಸಲು ಮುಂದಾಗಿರುವುದು ಪ್ರಜಾಪ್ರಭುತ್ವಕ್ಕೇ ಕಳಂಕ ಎಂದು ವಕೀಲರು ಅಳಲು ತೋಡಿಕೊಂಡಿದ್ದಾರೆ.

ತಡರಾತ್ರಿಯಲ್ಲಿ ಕಬ್ಬಿಣದ ದಂಧೆ!
ಕಳೆದ ತಿಂಗಳು 4ನೇ ತಾರೀಕು ರಾತ್ರಿ 11 ಗಂಟೆಯ ಸುಮಾರಿಗೆ ವಿಶ್ವನಾಥಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಂಧೆಕೋರರು ಆಂಧ್ರಪ್ರದೇಶದ ಹಿಂದೂಪುರದಿಂದ ಅಕ್ರಮವಾಗಿ ಲಾರಿಗಳಲ್ಲಿ ಕಬ್ಬಿಣದ ಲೋಡ್ ತಂದು ಖಾಸಗಿ ಜಮೀನೊಂದರಲ್ಲಿ ಅನ್ ಲೋಡ್ ಮಾಡುತ್ತಿದ್ದರು. ಈ ಬಗ್ಗೆ ನಿಖಿಲ್ ಅವರಿಗೆ ಖಚಿತ ಮಾಹಿತಿ ಸಿಕ್ಕ ತಕ್ಷಣ, ಅವರು ಸ್ಥಳಕ್ಕೆ ಧಾವಿಸಿ ಅಕ್ರಮ ಕಬ್ಬಿಣ ತುಂಬಿದ್ದ ಲಾರಿಗಳನ್ನು ಹಾಗೂ ಆರೋಪಿಗಳನ್ನು ಸಾಕ್ಷ್ಯ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಪೊಲೀಸರ ಅದಕ್ಷತೆ- ರಾತ್ರೋರಾತ್ರಿ ಲಾರಿಗಳು ರಿಲೀಸ್!
“ಅಕ್ರಮ ದಂಧೆಯನ್ನು ಬೆನ್ನಟ್ಟಿ ಸಾಕ್ಷ್ಯ ಸಮೇತ ಹಿಡಿದು ಪೊಲೀಸರ ವಶಕ್ಕೆ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ವಿಶ್ವನಾಥಪುರ ಪೊಲೀಸರು ಮರುದಿನವೇ ಅಕ್ರಮವಾಗಿ ಕಬ್ಬಿಣ ತುಂಬಿದ್ದ ಲಾರಿಗಳನ್ನು ಮತ್ತು ಆರೋಪಿಗಳನ್ನು ಯಾವುದೇ ಕ್ರಮ ಜರುಗಿಸದೇ ಬಿಟ್ಟು ಕಳುಹಿಸಿದ್ದಾರೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳಲು ಪೊಲೀಸರು ತನಗೆ ಒತ್ತಡ ಹೇರಿದ್ದರು. ಆದರೆ ನಾನು ಕಾನೂನುಬಾಹಿರ ರಾಜಿಗೆ ಒಪ್ಪದ ಕಾರಣ, ನನ್ನ ಮೇಲೆಯೇ ದ್ವೇಷ ಸಾಧಿಸಲು ಹಾಗೂ ನಾನು ಧ್ವನಿ ಎತ್ತದಂತೆ ಮಾಡಲು ಬೇಕೆಂದೇ ನನ್ನ ಮೇಲೆ ಎಫ್‌ಐಆರ್ (FIR) ದಾಖಲಿಸಿದ್ದಾರೆ” ಎಂದು ವಕೀಲ ನಿಖಿಲ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
“ಅಕ್ರಮ ಮಾಡುವವರ ಬೆನ್ನಿಗೆ ವಿಶ್ವನಾಥಪುರ ಪೊಲೀಸ್ ಇಲಾಖೆ ನಿಂತಿದೆ. ಹಗಲು ದರೋಡೆ ಇವರ ನಿರಂತರ ಕಾಯಕ. ಅಕ್ರಮ ದಂಧೆಕೋರರನ್ನು ಹಿಡಿದುಕೊಟ್ಟಿದ್ದಕ್ಕೆ ನನಗೆ ಸಿಕ್ಕ ಬಹುಮಾನ ಸುಳ್ಳು ಕೇಸು! ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.ಹಾಗಾಗಿ ಈ ಪ್ರಜಾಪ್ರಭುತ್ವದಲ್ಲಿ ನನಗೆ ನ್ಯಾಯ ಸಿಗುವವರೆಗೂ ಹೋರಾಟದಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ನಿಖಿಲ್ ಗುಡುಗಿದ್ದಾರೆ.
ತಾವು ಮಾಡಿದ ಸಾಮಾಜಿಕ ಕಾರ್ಯಕ್ಕೆ ನ್ಯಾಯ ಸಿಗಲೇಬೇಕು ಎಂದು ಪಟ್ಟು ಹಿಡಿದಿರುವ ವಕೀಲ ನಿಖಿಲ್, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗ ಏಕಾಂಗಿಯಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಪ್ರಜೆಗಳು ಧರಣಿಯ ಭಾಗವೆಂಬಂತೆ ನಿಂತು ವೀಕ್ಷಿಸುತ್ತಿದ್ದಾರೆ. ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸರೇ ಅಕ್ರಮ ಮಾಡುವವರ ಪರವಾಗಿ ನಿಂತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಕೀಲನ ಈ ಒಬ್ಬಂಟಿ ಹೋರಾಟಕ್ಕೆ ದೇವನಹಳ್ಳಿಯೆಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
#Devanahalli #BengaluruRural #VishwanathapuraPolice #AdvocateProtest #SoloProtest #PoliceHighhandedness #IllegalIronSmuggling #CorruptionAllegation #JusticeForNikhil #FreedomTV #FreedomTVNews #KannadaNews




