bengaluruರಾಜಕೀಯ

ಡಿಕೆಶಿ ಸಂಪುಟದಲ್ಲಿ ಪರಮೇಶ್ವರ್ ಒಬ್ಬರೇ ಡಿಸಿಎಂ!

Parameshwar only DCM in DKS cabinet

ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ದೊಡ್ಡ ಬ್ರೇಕಿಂಗ್ ನ್ಯೂಸ್! ಇಂದು ಸಂಜೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಅವರ ರಾಜತಾಂತ್ರಿಕ ನಡೆಗೆ ಹೈಕಮಾಂಡ್ ಸಂಪೂರ್ಣ ಶರಣಾಗಿದೆ. ಹಿರಿಯ ದಲಿತ ನಾಯಕ, ತುಮಕೂರಿನ ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ (DCM) ಹುದ್ದೆ ನೀಡುವುದು ಈಗ ಬಹುತೇಕ ಖಚಿತವಾಗಿದೆ.
ಆರಂಭದಲ್ಲಿ ಕೇವಲ ಮುಖ್ಯಮಂತ್ರಿ ಹುದ್ದೆಯನ್ನಷ್ಟೇ ಸೃಷ್ಟಿಸಲು ಯೋಚಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಕೊನೆಗೂ ‘ಒಬ್ಬರೇ ಡಿಸಿಎಂ’ ಸೂತ್ರಕ್ಕೆ ಜೈ ಎಂದಿದೆ.

ಸಿದ್ದರಾಮಯ್ಯ ಪಟ್ಟಿಗೆ ಮಣಿದ ಹೈಕಮಾಂಡ್!


ಡಾ. ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಸಿಗುವಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಅತ್ಯಂತ ದೊಡ್ಡದಾಗಿದೆ. “ಪರಮೇಶ್ವರ್ ಅವರು ಸತತ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದವರು. ರಾಜ್ಯದ ಅತ್ಯಂತ ಪ್ರಭಾವಿ ದಲಿತ ನಾಯಕರಾಗಿರುವ ಅವರಿಗೆ ಗೌರವಯುತ ಸ್ಥಾನ ಸಿಗಲೇಬೇಕು” ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಗಟ್ಟಿಯಾದ ಪಟ್ಟು ಹಿಡಿದಿದ್ದರು. ಸಿದ್ದರಾಮಯ್ಯ ಅವರ ಈ ಭಾರಿ ಒತ್ತಡಕ್ಕೆ ಹೈಕಮಾಂಡ್ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ.

ಬೇರೆಯವರ ಡಿಸಿಎಂ ಕನಸಿಗೆ ನಿರಾಸೆ!
ಹೊಸ ಸಚಿವ ಸಂಪುಟದಲ್ಲಿ ಹಲವು ಪ್ರಭಾವಿ ನಾಯಕರು ಡಿಸಿಎಂ ಹುದ್ದೆಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ರಾಜ್ಯದಲ್ಲಿ ಅಧಿಕಾರದ ಹಲವು ಕೇಂದ್ರಗಳು ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅಂತಿಮವಾಗಿ ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ಈ ಜವಾಬ್ದಾರಿ ನೀಡಲು ಹೈಕಮಾಂಡ್ ಸಮ್ಮತಿಸಿದೆ. ಆ ಮೂಲಕ ಡಿಕೆಶಿ ಕ್ಯಾಬಿನೆಟ್‌ನಲ್ಲಿ ಪರಮೇಶ್ವರ್ ಸೆಕೆಂಡ್ ಇನ್ ಕಮಾಂಡ್ ಆಗಿ ಹೊರಹೊಮ್ಮಲಿದ್ದಾರೆ. ಆದರೆ ಡಿಸಿಎಂ ಕನಸು ಕಂಡಿದ್ದ ಹಲವು ಪ್ರಮುಖ ನಾಯಕರಿಗೆ ನಿರಾಸೆಯಾಗಿದ್ದು ಅವರ ಮುಂದಿನ ನಡೆ ಏನೆಂಬುದನ್ನು ಕಾದು ನೋಡಬೆಕು.

ದಲಿತ ಸಮುದಾಯದ ಅಸಮಾಧಾನಕ್ಕೆ ತೇಪೆ!
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ರೇಸ್‌ನಲ್ಲಿದ್ದ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿದ್ದಕ್ಕೆ ದಲಿತ ಸಮುದಾಯದಲ್ಲಿ ಕೊಂಚ ಅಸಮಾಧಾನವಿತ್ತು. ಅವರಿಗೆ ಕನಿಷ್ಠ ಡಿಸಿಎಂ ಸ್ಥಾನವನ್ನಾದರೂ ನೀಡಬೇಕು ಎಂದು ವಿವಿಧ ಮಠಾಧೀಶರು ಮತ್ತು ಅಭಿಮಾನಿ ಬಳಗ ತೀವ್ರ ಒತ್ತಡ ಹೇರಿತ್ತು. ಇದೀಗ ಹೈಕಮಾಂಡ್ ಈ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿದೆ.

ಅಂದಹಾಗೆ, ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಹೊಸದೇನಲ್ಲ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲೂ ಅವರು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.

#FreedomTV #KarnatakaPolitics #DKShivakumar #DrGParameshwara #Siddaramaiah #KarnatakaCabinet #DCMParameshwara #CongressHighCommand #BreakingNewsKarnataka #DalitLeader #KarnatakaGovernment

Comments (0)

Your email address will not be published. Required fields are marked *

Back to top button