
ಬೆಂಗಳೂರು/ನವದೆಹಲಿ: ಕರ್ನಾಟಕ ರಾಜಕಾರಣದಲ್ಲಿ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು (ಬುಧವಾರ) ಸಂಜೆ 4.05 ಕ್ಕೆ ರಾಜಭವನದ (ಲೋಕಭವನ) ಗಾಜಿನ ಮನೆಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಿಎಂ ಹಾಗೂ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ರಾಹುಲ್ ಗಾಂಧಿ ಅವರ ಸೂಚನೆಯ ಮೇರೆಗೆ ಸಿದ್ದರಾಮಯ್ಯ ಅವರು ಕಳೆದ ಗುರುವಾರ ದೆಹಲಿಯಲ್ಲಿ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಮಹತ್ವದ ಬದಲಾವಣೆ ನಡೆದಿದ್ದು, ಡಿ.ಕೆ. ಶಿವಕುಮಾರ್ ಅವರು 2028ರ ವಿಧಾನಸಭಾ ಚುನಾವಣೆಯವರೆಗೆ (ಉಳಿದ 1 ವರ್ಷ 10 ತಿಂಗಳ ಅವಧಿ) ಮುಖ್ಯಮಂತ್ರಿಯಾಗಿ ಮುನ್ನಡೆಯಲಿದ್ದಾರೆ.

ಮೊದಲ ಪಟ್ಟಿಯಲ್ಲಿರುವ ಬಲಾಢ್ಯರು, ಲಕ್ಷ್ಮಿ ಹೆಬ್ಬಾಳ್ಕರ್ ಔಟ್?
ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಸಮ್ಮುಖದಲ್ಲಿ ನಡೆದ ಮ್ಯಾರಥಾನ್ ಸಭೆಯಲ್ಲಿ 10 ರಿಂದ 15 ಸಚಿವರ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಶಿವಕುಮಾರ್, ಖರ್ಗೆ ಹಾಗೂ ಸಿದ್ದರಾಮಯ್ಯ ಬಣಗಳಿಗೆ ಸಮಾನ ಸಚಿವ ಸ್ಥಾನ ಹಂಚಿಕೆ ಮಾಡಲು ಹೈಕಮಾಂಡ್ ತೀರ್ಮಾನಿಸಿದೆ.ಸಂಪುಟ ಸೇರಲಿರುವ ಪ್ರಮುಖ ಸಂಭಾವ್ಯರುಗಳಲ್ಲಿ ಕೆ.ಜೆ. ಜಾರ್ಜ್, ಡಾ. ಜಿ. ಪರಮೇಶ್ವರ, ರಾಮಲಿಂಗ ರೆಡ್ಡಿ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್.ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಡಾ. ಯತೀಂದ್ರ ಸಿದ್ದರಾಮಯ್ಯ.ಕೆ.ಎಚ್. ಮುನಿಯಪ್ಪ (ಅಥವಾ ಅವರ ಪುತ್ರಿ ರೂಪಕಲಾ ಶಶಿಧರ್) ಇರಲಿದ್ದಾರೆ.
ಮೂಲಗಳ ಪ್ರಕಾರ, ಮೊದಲ ಪಟ್ಟಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸ್ಥಾನ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಈಶ್ವರ್ ಖಂಡ್ರೆ ಹೆಸರುಗಳು ಮುಂಚೂಣಿಗೆ ಬಂದಿವೆ. ಸಿದ್ದರಾಮಯ್ಯ ಆಪ್ತ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವ ಸಾಧ್ಯತೆ ಇದೆ. ಇತ್ತೀಚಿನ ಆಡಿಯೋ ಸೋರಿಕೆ ಆರೋಪದಿಂದಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಸಚಿವ ಸ್ಥಾನದ ಅವಕಾಶಗಳು ಕೈತಪ್ಪಿವೆ ಎನ್ನಲಾಗಿದೆ.
‘ಅಜ್ಜಯ್ಯ’ನ ಹೆಸರಲ್ಲಿ ಪ್ರಮಾಣ ವಚನ; ಸಿಂಗಾಪುರ ಮಾದರಿ ಬೆಂಗಳೂರು!
ತೀವ್ರ ಧಾರ್ಮಿಕ ನಂಬಿಕೆಯುಳ್ಳ ಡಿ.ಕೆ. ಶಿವಕುಮಾರ್ ಅವರು ತಾವು ಅಪಾರವಾಗಿ ನಂಬುವ ‘ಅಜ್ಜಯ್ಯ ಸ್ವಾಮಿ’ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ರಾಜ್ಯದ ಎಲ್ಲಾ ಧರ್ಮಗಳ ಪ್ರಮುಖ ಶ್ರೀಗಳು, ಧಾರ್ಮಿಕ ಮುಖಂಡರು ಭಾಗವಹಿಸಿ ಆಶೀರ್ವದಿಸಲಿದ್ದಾರೆ. ಇದೇ ವೇಳೆ, ಬೆಂಗಳೂರಿನ ಪೋಸ್ಟರ್ ಬಾಯ್ ಎಂದೇ ಕರೆಯಲ್ಪಡುವ ಡಿಕೆಶಿ ಸಿಎಂ ಆಗುತ್ತಿರುವುದಕ್ಕೆ ಉದ್ಯಮ ವಲಯ ಹರ್ಷ ವ್ಯಕ್ತಪಡಿಸಿದೆ. ಸಿಂಗಾಪುರ ಮಾದರಿಯಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಅವರ ಕನಸನ್ನು ನೋಡಿ, ಉದ್ಯಮಿಗಳು ಈಗಾಗಲೇ ಡಿಕೆಶಿ ಅವರನ್ನು ಮಾಜಿ ಸಿಎಂ ದಿವಂಗತ ಎಸ್.ಎಂ. ಕೃಷ್ಣ ಅವರಿಗೆ ಹೋಲಿಸುತ್ತಿದ್ದಾರೆ.
ಅಧಿಕಾರ ಪಡೆದ ಕೂಡಲೆ ಡಿಕೆಶಿ ನೀಡಲಿರುವ ಕಾಣಿಕೆ!
2013ರಲ್ಲಿ ಸಿದ್ದರಾಮಯ್ಯ ಸಿಎಂ ಆದ ತಕ್ಷಣ ‘ಅನ್ನಭಾಗ್ಯ’ ಘೋಷಿಸಿ ‘ಅನ್ನರಾಮಯ್ಯ’ ಎನಿಸಿಕೊಂಡಿದ್ದರು. ಅದೇ ಮಾದರಿಯಲ್ಲಿ ಡಿ.ಕೆ. ಶಿವಕುಮಾರ್ ಕೂಡ ಇಂದು ಮೂರು ಪ್ರಮುಖ ಗ್ಯಾರಂಟಿ ನೀಡುವ ಸಾಧ್ಯತೆಯಿದೆ.
ಶಕ್ತಿ ಯೋಜನೆಯ ಜನದಟ್ಟಣೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗಳಿಗಾಗಿ ವಿಶೇಷ ಉಚಿತ ಬಸ್ ಸೇವೆ. ಡೈರಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ 1 ರೂಪಾಯಿ ಹೆಚ್ಚುವರಿ ಪ್ರೋತ್ಸಾಹ ಧನ. ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕಾಲಮಿತಿಯ ನೇಮಕಾತಿ ಆದೇಶ ಈ ಮೂರು ಕೊಡುಗೆಗಳನ್ನು ನೀಡಲಿದ್ದಾರೆ ಎಂಬ ಮಾಹಿತಿಯಿದೆ. ರಾಜ್ಯ ಸಂಪುಟದಲ್ಲಿ ಒಟ್ಟು 34 ಸಚಿವ ಸ್ಥಾನಗಳಿದ್ದು, ಜೂನ್ 18 ರಂದು ನಡೆಯಲಿರುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಬಳಿಕ ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿದುಬಂದಿದೆ.
#FreedomTV #KarnatakaPolitics #DKShivakumar #DKSAsCM #KarnatakaCabinet #Siddaramaiah #CongressGovernment #Bengaluru #BreakingNews #KarnatakaNewCM




