BELAGAVIರಾಜಕೀಯ

ಆಸೀಫ್ ಸೇಠ್‌ ಸಚಿವ, ಸತೀಶ್ ಜಾರಕಿಹೊಳಿ ಡಿಸಿಎಂ ಸ್ಥಾನಕ್ಕಾಗಿ ಅಲ್ಪಸಂಖ್ಯಾತರ ಬೃಹತ್ ಸಭೆ!

Minority leaders protest and had meeting to get Ministership for Asif Sait and DCM for Satish Jarakiholi

ಬೆಳಗಾವಿ: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಜಿದ್ದಾಜಿದ್ದಿನ ನಡುವೆಯೇ, ಇತ್ತ ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಸ್ಲಿಂ ಸಮುದಾಯದ ನಾಯಕರು ಭರ್ಜರಿ ರಾಜಕೀಯ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಪಟ್ಟ ನೀಡಬೇಕು ಎಂದು ಆಗ್ರಹಿಸಿ ಕಿತ್ತೂರು ಕರ್ನಾಟಕ ಅಲ್ಪಸಂಖ್ಯಾತ ಒಕ್ಕೂಟದಿಂದ ಬೃಹತ್ ಸಭೆ ಮತ್ತು ಜಂಟಿ ಸುದ್ದಿಗೋಷ್ಠಿ ನಡೆಸಲಾಗಿದೆ.

2,500 ಜಮಾತ್ ಮುಖಂಡರ ಸಭೆ!


ಈ ಮಹತ್ವದ ಸಭೆಯಲ್ಲಿ ಸುಮಾರು ಎರಡುವರೆ ಸಾವಿರಕ್ಕೂ ಹೆಚ್ಚು ಜಮಾತ್ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಪ್ರಮುಖವಾಗಿ ನಾಲ್ಕು ನಿರ್ಣಯಗಳನ್ನು ಕೈಗೊಂಡಿದ್ದಾರೆ.ಉತ್ತರ ಕರ್ನಾಟಕ ಭಾಗದಲ್ಲಿ ಈವರೆಗೂ ಮುಸ್ಲಿಂ ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲ. ಹೀಗಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಲೇಬೇಕು. ಸತೀಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ (DCM) ಸ್ಥಾನ ಹಾಗೂ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನವನ್ನು ನೀಡಬೇಕು. ಮುಸ್ಲಿಂ ಸಮುದಾಯದ ಹಾಲಿ ನಾಯಕರನ್ನು ಕೈಬಿಟ್ಟು ಸಚಿವ ಸ್ಥಾನ ಕೊಡಿ ಎನ್ನುವ ಬೇಡಿಕೆಯಿಲ್ಲ. ಹಿಂದೆ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಐದು ಜನ ಮುಸ್ಲಿಂ ಸಚಿವರಿದ್ದರು. ಅದೇ ಮಾದರಿಯನ್ನು ಈ ಬಾರಿಯೂ ಅನುಸರಿಸಬೇಕು. ಮೊದಲು ಸತೀಶ್ ಜಾರಕಿಹೊಳಿ ಅವರ ಬಳಿ ನಿಯೋಗ ಕೊಂಡೊಯ್ದು, ಬಳಿಕ ಅವರ ನೇತೃತ್ವದಲ್ಲೇ ಮುಖ್ಯಮಂತ್ರಿಗಳ ಬಳಿ ತೆರಳಿ ಮನವಿ ಸಲ್ಲಿಸುವುದು.

“ನಮ್ಮನ್ನು ಬರೀ ವೋಟ್ ಬ್ಯಾಂಕ್ ಮಾಡಿಕೊಳ್ಳಬೇಡಿ” – ಮುಖಂಡರ ಆಕ್ರೋಶ


ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಲಾಲ್ ಸಾಬ್ ಸಿದ್ದಾಪುರ ಮತ್ತು ಲಾಲ್ ಸಾಬ್ ಪಟೇಲ್ ಜಂಟಿಯಾಗಿ ಮಾತನಾಡಿ ಕಾಂಗ್ರೆಸ್ ಹೈಕಮಾಂಡ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ. “ನಮ್ಮನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಬೇಡಿ, ನಮ್ಮ ಸಮುದಾಯದವರಿಗೂ ಉನ್ನತ ಹುದ್ದೆಗಳನ್ನು ನೀಡಿ ಗೌರವಿಸಿ” ಎಂದು ಒತ್ತಾಯಿಸಿದ್ದಾರೆ.”ನಾಳೆಯ ದಿನ ಸುದಿನವಾಗಿದ್ದು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಅವರ ಆಶೀರ್ವಾದ ಸದಾ ಮುಸ್ಲಿಂ ಸಮುದಾಯದ ಮೇಲಿರಲಿ. ನಮ್ಮ ಈ ನ್ಯಾಯಸಮ್ಮತ ಬೇಡಿಕೆಯನ್ನು ಈಡೇರಿಸಿದರೆ, ಮುಂದಿನ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಒಟ್ಟು 18 ಸ್ಥಾನಗಳ ಪೈಕಿ 17 ಸ್ಥಾನಗಳನ್ನು ಕಾಂಗ್ರೆಸ್ ಮುಡಿಗೆ ತರುತ್ತೇವೆ” ಎಂದು ಮುಖಂಡರು ಭರವಸೆ ನೀಡಿದ್ದಾರೆ.

ಬೆಳಗಾವಿ ರಾಜಕಾರಣದ ಈ ಹೊಸ ಒತ್ತಡ ತಂತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಹೇಗೆ ಪ್ರತಿಕ್ರಿಯಿಸಲಿದೆ? ಹೊಸ ಕ್ಯಾಬಿನೆಟ್‌ನಲ್ಲಿ ಆಸೀಫ್ ಸೇಠ್‌ಗೆ ಸ್ಥಾನ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

#AsifSait #SatishJarkiholi #DKShivakumar #KarnatakaPolitics #KitturKarnataka #BelagaviNews #MuslimCommunityDemand #CabinetExpansion #CongressGovernment #FreedomTVNews #KarnatakaNewCM #BelagaviPolitics

Comments (0)

Your email address will not be published. Required fields are marked *

Back to top button