bengaluruರಾಜಕೀಯ

ಸಂಸದ ಸುಧಾಕರ್‌ಗೆ ವಿಶ್ವನಾಥ್ ಬೆಂಬಲಿಗರಿಂದ ಘೇರಾವ್; ಹೊಡೆದಾಟಕ್ಕೆ ತಲುಪಿದ ವಾಗ್ವಾದ!

battle between MP sudhakar and MLA vishwanath followers

ಬೆಂಗಳೂರು: ಯಲಹಂಕದಲ್ಲಿ ಕಮಲ ಪಾಳೆಯದ ಮುಖಂಡರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಬೆಂಬಲಿಗರ ನಡುವೆ ಯಲಹಂಕದ ಮಾಧ್ಯಮ ಕೇಂದ್ರದಲ್ಲಿ ಭಾರಿ ಜಟಾಪಟಿ ನಡೆದಿದೆ. ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂಸದ ಸುಧಾಕರ್ ಅವರನ್ನು ಶಾಸಕರ ಕಾರ್ಯಕರ್ತರು ತರಾಟೆಗೆ ತಗೊಂಡಿದ್ದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಉದ್ವಿಗ್ನ ಘಟನೆ ನಡೆದಿದೆ.

ಪ್ರೆಸ್‌ಮೀಟ್ ಗೆ ಶಾಸಕರ ಬೆಂಬಲಿಗರ ಎಂಟ್ರಿ!


ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಕುರಿತು ಯಲಹಂಕದ ಮಾಧ್ಯಮ ಕೇಂದ್ರದಲ್ಲಿ ಸಂಸದ ಡಾ. ಕೆ. ಸುಧಾಕರ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಧಾವಿಸಿದ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನಿಷ್ಠಾವಂತ ಕಾರ್ಯಕರ್ತರು ಪ್ರೆಸ್‌ಮೀಟ್ ಮಧ್ಯ ಪ್ರವೇಶಿಸಿ ಸಂಸದರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳೀಯ ಶಾಸಕರಾದ ಎಸ್.ಆರ್. ವಿಶ್ವನಾಥ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅವರಿಗೆ ಮಾಹಿತಿಯೇ ನೀಡದೆ ಯಲಹಂಕಕ್ಕೆ ಬಂದು ತಮ್ಮದೇ ಸಂಗಡಿಗರನ್ನು ಇಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸುತ್ತಿರುವುದು ಎಷ್ಟು ಸರಿ?” ಎಂದು ಕಾರ್ಯಕರ್ತರು ನೇರ ಪ್ರಶ್ನೆ ಹಾಕಿ ಆಕ್ರೋಶ ಹೊರಹಾಕಿದರು. ಈ ವೇಳೆ ಸಂಸದರ ಪರ ವಲಸಿಗ ಕಾರ್ಯಕರ್ತರು ಹಾಗೂ ಶಾಸಕರ ಪರ ನಿಷ್ಠಾವಂತ ಕಾರ್ಯಕರ್ತರ ನಡುವೆ ಭಾರಿ ವಾಗ್ವಾದ ನಡೆದು, ಸಂಸದರ ವಿರುದ್ಧ ಧಿಕ್ಕಾರ ಕೂಗಲಾಯಿತು.

ಜಟಾಪಟಿಯ ಇಲ್ಲಿದೆ ಹಿನ್ನೆಲೆ!

ಬಿಜೆಪಿಯ ಈ ಇಬ್ಬರು ನಾಯಕರ ನಡುವೆ ಕಳೆದ ಲೋಕಸಭಾ ಚುನಾವಣೆಯ ಸಮಯದಿಂದಲೇ ಶೀತಲ ಸಮರ ನಡೆಯುತ್ತಿತ್ತು. ಕಳೆದ ಲೋಕಸಭಾ ಚುನಾವಣೆ ವೇಳೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ತಮ್ಮ ಮಗನಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಕೊಡಿಸಲು ತೀವ್ರ ಕಸರತ್ತು ನಡೆಸಿದ್ದರು. ಆದರೆ ಹೈಕಮಾಂಡ್ ವಿಶ್ವನಾಥ್ ಮಗನಿಗೆ ಟಿಕೆಟ್ ತಪ್ಪಿಸಿ ವಲಸಿಗ ನಾಯಕ ಕೆ. ಸುಧಾಕರ್ ಅವರಿಗೆ ಬಿ-ಫಾರಂ ನೀಡಿತ್ತು. ಇದು ವಿಶ್ವನಾಥ್ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಯಲಹಂಕ ಕ್ಷೇತ್ರದಲ್ಲಿ ಶಾಸಕ ವಿಶ್ವನಾಥ್ ಅವರಿಗೆ ಟಾಂಗ್ ನೀಡಲು ಸಂಸದ ಸುಧಾಕರ್ ಅವರು ಬಮುಲ್ (BAMUL) ನಿರ್ದೇಶಕ ಕಡತನಮಲೆ ಸತೀಶ್ ಅವರನ್ನು ಪರ್ಯಾಯ ನಾಯಕನಾಗಿ ಬೆಳೆಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ವಿಶ್ವನಾಥ್ ಬೆಂಬಲಿಗರದ್ದಾಗಿದೆ.

ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಎರಡೂ ಬಣಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಚ್ಚೆತ್ತ ಯಲಹಂಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಕಾರ್ಯಕರ್ತರ ನಡುವಿನ ಗಲಾಟೆಯನ್ನು ತಡೆದು, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇತ್ತ ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರೂ ಇತ್ತ ಸಂಸದ ಸುಧಾಕರ್ ಅವರು ಮಾತ್ರ ಏನೂ ಮಾತನಾಡಲಾಗದೆ ಮೌನಕ್ಕೆ ಶರಣಾಗಿದ್ದರು. ಒಟ್ಟಿನಲ್ಲಿ ಯಲಹಂಕದಲ್ಲಿ ನಡೆದಿರುವ ಈ ಹೈಡ್ರಾಮಾ ಬಿಜೆಪಿಯೊಳಗಿನ ಆಂತರಿಕ ಭಿನ್ನಮತ ಹಾಗೂ ವಲಸಿಗ-ನಿಷ್ಠಾವಂತ ಕಾರ್ಯಕರ್ತರ ನಡುವಿನ ದ್ವೇಷವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.

#DrKSudhakar #SRViswanath #YelahankaBJPWar #BJPInternalFight #YelahankaNews #ChikkaballapurMP #KarnatakaPolitics #MigrantsVsLoyalists #PressMeetRow #YelahankaPolice #FreedomTVKannada #BreakingNews #NammaBengaluru

Comments (0)

Your email address will not be published. Required fields are marked *

Back to top button