
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ನೂತನ ವಿವೇಕ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿದರು. ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿಗೆ ಮೈಸೂರಿನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಮಂಡಕಹಳ್ಳಿ ಹೆಲಿಪ್ಯಾಡ್‌ನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಓವಲ್ ಮೈದಾನಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ರಸ್ತೆ ಬದಿಯಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಮತ್ತು ಸಾರ್ವಜನಿಕರು ಪ್ರಧಾನಿ ಪರ ಜಯಘೋಷಗಳನ್ನು ಕೂಗಿ ಬರಮಾಡಿಕೊಂಡರು.
ಬಳಿಕ ಪ್ರಧಾನಿ ಮೋದಿ ಅವರು ಮೈಸೂರಿನ ದೇವರಾಜ ಮೊಹಲ್ಲಾದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ತೆರಳಿ, ಅಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭವ್ಯವಾದ ವಿವೇಕ ಸ್ಮಾರಕವನ್ನು ಉದ್ಘಾಟಿಸಿದರು. ನಂತರ ಆಶ್ರಮದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ನಮಿಸಿ ಪೂಜೆ ಸಲ್ಲಿಸಿದರು.
ಸ್ಮಾರಕದ ಆವರಣದಲ್ಲಿ ಬಿಲ್ವಪತ್ರೆ ಸಸಿ ನೆಡುವ ಮೂಲಕ ಪ್ರಧಾನಿ ಮೋದಿ ಅವರು ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಉಪಸ್ಥಿತರಿದ್ದು ಸಾಥ್ ನೀಡಿದರು. ಬಳಿಕ ಪ್ರಧಾನಿ ಮೋದಿ ಆಶ್ರಮದೊಳಗೆ ಕೆಲಕಾಲ ಮೌನವಾಗಿ ಧ್ಯಾನ ಮಾಡಿದರು.




