ಜಮ್ಮು-ಕಾಶ್ಮೀರದಲ್ಲಿ ಬಸ್ ಅಪಘಾತ – 39 ಅಮರನಾಥ ಯಾತ್ರಿಕರಿಗೆ ಗಾಯ!

ಶ್ರೀನಗರ : ಅಮರನಾಥ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಯಾತ್ರಿಕರಿದ್ದ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮನೆಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ 39 ಯಾತ್ರಿಕರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಗಂಡೇರ್ಬಾಲ್ ಜಿಲ್ಲೆಯ ಕಂಗನ್ ಪ್ರದೇಶದ ಹರಿಗನ್ವಾನ್ ಬಳಿ ಸಂಭವಿಸಿದೆ.
ಅಮರನಾಥ ಗುಹಾ ದೇವಾಲಯದಲ್ಲಿ ಬಾಬಾ ಬರ್ಫಾನಿಯ ದರ್ಶನ ಪಡೆದು ಯಾತ್ರಿಕರು ಬಸ್ನಲ್ಲಿ ಹಿಂತಿರುಗುತ್ತಿದ್ದರು. ಹರಿಗನ್ವಾನ್ ಬಳಿಯ ತಿರುವಿನಲ್ಲಿ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದಲ್ಲಿದ್ದ ಖಾಲಿ ಮನೆಗೆ ನುಗ್ಗಿದೆ.
ಅದೃಷ್ಟವಶಾತ್, ಬಸ್ ಸಮೀಪದಲ್ಲೇ ಹರಿಯುತ್ತಿದ್ದ ಉಕ್ಕಿ ಹರಿಯುವ ಸಿಂಧ್ ನದಿಗೆ ಬೀಳದೆ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ಮನೆಯೊಳಗೆ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.
ಘಟನೆ ತಿಳಿದ ತಕ್ಷಣವೇ ಸ್ಥಳೀಯ ನಿವಾಸಿಗಳು, ಜಮ್ಮು-ಕಾಶ್ಮೀರ ಪೊಲೀಸರು, ಐಟಿಬಿಪಿ , ಸಿಆರ್ಪಿಎಫ್ ಹಾಗೂ ಭಾರತೀಯ ಸೇನೆಯ ಪಡೆಗಳು ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳು ಹಾಗೂ ‘ಸ್ಕಿಮ್ಸ್’ ಆಸ್ಪತ್ರೆಗೆ ದಾಖಲಿಸಲಾಗಿದೆ.




