ಕ್ರೈಂ ಸ್ಟೋರಿ

ಜಾಗ ಬಿಡುವ ವಿಷಯಕ್ಕೆ ಜಗಳ, ತಂದೆ-ಮಗನಿಗೆ ಭೀಕರ ಚಾಕು ಇರಿತ!

Road fight in Anekal between two cars durnkurd stabs naveen by knife

ಆನೇಕಲ್ (ಬೆಂಗಳೂರು ಗ್ರಾಮಾಂತರ): ರಸ್ತೆ ಜಾಗ ಬಿಡುವ ಸಣ್ಣ ವಿಚಾರಕ್ಕೆ ಶುರುವಾದ ಗಲಾಟೆ ರಕ್ತಪಾತದಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಆನೇಕಲ್ – ಹೊಸೂರು ಮುಖ್ಯರಸ್ತೆಯ ವಿಶ್ವ ಚೇತನ ಕಾಲೇಜಿನ ಕೆಳ ತಿರುವಿನಲ್ಲಿ ನಡೆದಿದೆ. ಎದುರೆದುರು ಬಂದ ಕಾರುಗಳಿಗೆ ಜಾಗ ಬಿಡುವ ವಿಚಾರದಲ್ಲಿ ಕಿಡಿಗೇಡಿ ಯುವಕರು ತಂದೆ ಹಾಗೂ ಮಗನಿಗೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾರೆ. ಘಟನೆಯಲ್ಲಿ ಆನೇಕಲ್ ವಣಕನಹಳ್ಳಿ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ನವೀನ್ ಹಾಗೂ ಅವರ ಮಗ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಣ್ಣ ವಿಚಾರಕ್ಕೆ ಚೆಲ್ಲಿದ ರಕ್ತ!


ವಣಕನಹಳ್ಳಿ ವಾರ್ಡ್ ಸಭೆ ಮುಗಿಸಿ ನವೀನ್ ಅವರು ತಮ್ಮ ಕಾರಿನಲ್ಲಿ ಆನೇಕಲ್ ಮನೆಗೆ ಬಂದು, ಅಲ್ಲಿಂದ ತೋಟಕ್ಕೆ ತೆರಳುತ್ತಿದ್ದರು. ಸಂಜೆ ವೇಳೆ ವಿಶ್ವ ಚೇತನ ಕಾಲೇಜಿನ ಮುಂದಿನ ಇಕ್ಕಟ್ಟಾದ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಎದುರುಗಡೆಯಿಂದ ಫ್ರಾಂಕ್ಸ್ ಕಾರಿನಲ್ಲಿ ಇಬ್ಬರು ಯುವಕರು ಬಂದಿದ್ದಾರೆ. ರಸ್ತೆ ಚಿಕ್ಕದಾದ ಕಾರಣ, ಕಾರು ಚಲಿಸಲು ಜಾಗ ಕೊಡುವಂತೆ ನವೀನ್ ಕೇಳಿದ್ದಾರೆ. ಇದರಿಂದ ಕೆರಳಿದ ಫ್ರಾಂಕ್ಸ್ ಕಾರಿನಲ್ಲಿದ್ದ ಯುವಕರು ಏಕಾಏಕಿ ಕಾರಿನಿಂದ ಇಳಿದು ಅವ್ಯಾಚ್ಯ ಪದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಮಾತು ಬೆಳೆಯುತ್ತಿದ್ದಂತೆ ನಾರಾಯಣಪುರದ ಕಿರಣ್ ಎಂ ಎಂಬ ಯುವಕ ತನ್ನ ಬಳಿಯಿದ್ದ ಚಾಕುವಿನಿಂದ ನವೀನ್ ಅವರ ಮೇಲೆ ಮುಗಿಬಿದ್ದಿದ್ದಾನೆ.

ಮಗ ತಡೆಯದಿದ್ದರೆ ಪ್ರಾಣವೇ ಹೋಗುತ್ತಿತ್ತು!
ಆರೋಪಿ ಕಿರಣ್, ನವೀನ್ ಅವರ ಎಡ ಎದೆ, ಕಿಬ್ಬೊಟ್ಟೆ ಹಾಗೂ ಹೊಟ್ಟೆಯ ಭಾಗಕ್ಕೆ ಮೂರು ಕಡೆ ಭೀಕರವಾಗಿ ಇರಿದಿದ್ದಾನೆ. ತಂದೆಯನ್ನು ರಕ್ಷಿಸಲು ಮಗ ತಕ್ಷಣವೇ ಮಧ್ಯಪ್ರವೇಶಿಸಿದಾಗ, ಆಕ್ರೋಶಗೊಂಡ ಕಿರಣ್ ಮಗನ ಸೊಂಟ ಹಾಗೂ ಮೊಳಕಾಲಿನ ಭಾಗಕ್ಕೂ ಚಾಕುವಿನಿಂದ ಇರಿದಿದ್ದಾನೆ. ಸ್ಥಳೀಯರ ಪ್ರಕಾರ, ಒಂದು ವೇಳೆ ಮಗ ಅಡ್ಡ ಬಂದು ತಡೆಯದಿದ್ದರೆ ನವೀನ್ ಅವರ ಪ್ರಾಣವೇ ಪಕ್ಷಿ ಹಾರಿಹೋಗುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಚಾಕು ಇರಿತದ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಮತ್ತು ಸಾರ್ವಜನಿಕರು ಗಲಾಟೆ ಮಾಡಿದ ಇಬ್ಬರು ಆರೋಪಿಗಳನ್ನು ಹಿಡಿದು ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ. ಈ ವೇಳೆ ಒಬ್ಬ ಸ್ಥಳದಿಂದ ಪರಾರಿಯಾಗಿದ್ದಾನೆ. ಸಾರ್ವಜನಿಕರು ಸಿಕ್ಕಿಬಿದ್ದ ಮತ್ತೊಬ್ಬ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಇಬ್ಬರೂ ಯುವಕರು ಸಂಪೂರ್ಣ ಮದ್ಯದ ಮತ್ತಿನಲ್ಲಿದ್ದರು ಎಂದು ಗಾಯಾಳು ನವೀನ್ ತಿಳಿಸಿದ್ದಾರೆ.
ಸದ್ಯ ಆನೇಕಲ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃತ್ಯಕ್ಕೆ ಬಳಸಿದ ಫ್ರಾಂಕ್ಸ್ ಕಾರು ಹಾಗೂ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

#AnekalCrime #RoadRage #StabbingCase #AnekalPolice #CrimeNews #FreedomTV #BreakingNews #BengaluruCrime #AlcoholInfluence #FronxCar #Vanakanahalli #KarnatakaCrime #AttackOnWaterman

Comments (0)

Your email address will not be published. Required fields are marked *

Back to top button