Editorial

ಸಂಪಾದಕೀಯ…

ಇವರು ಒಂದೇ ವಯಸ್ಸಿನ ಇಬ್ಬರು ಯುವಕರು. ಇಬ್ಬರೂ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿದ್ದವರು. ಒಬ್ಬ ಧಾರವಾಡದ ಕಾಂತ್ ಕುಮಾರ್, ಮತ್ತೊಬ್ಬ ದಾವಣಗೆರೆಯ ಸಮರ್ಥ್. ಕಾಂತ್ ಕುಮಾರ್‌ಗೆ ಕೆಲಸ ಸಿಗದ ಕಾರಣ ಚಳವಳಿ ಮಾಡುತ್ತಿದ್ದಾನೆ. ನಿನ್ನೆ ಆತನನ್ನು ಧಾರವಾಡ ಎಸ್ಪಿ ಶಶಿಕುಮಾರ್ ನೇತೃತ್ವದಲ್ಲಿ ಅವರು ಒಬ್ಬ ಮೂರನೇ ದರ್ಜೆಯ ಕ್ರಿಮಿನಲ್‌ನಂತೆ ದಸ್ತಗಿರಿ ಮಾಡಿ ಹೊತ್ತೊಯ್ಯುತ್ತಿದ್ದರು.

ಆದರೆ ಸಮರ್ಥ್? ಇವರು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ. ತಂದೆ ಮಂತ್ರಿ, ತಾಯಿ ಸಂಸದೆ. ಹಾಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಗೆದ್ದು ಶಾಸಕರಾಗಿಬಿಟ್ಟಿದ್ದಾರೆ. ಇವರನ್ನು ಜಿಲ್ಲಾ ಎಸ್ಪಿ ಶೇಖರ್ ಟೆಕ್ಕಣ್ಣವರ್ ಮತ್ತು ಸಿಇಒ ಅವರು ಭೇಟಿ ಮಾಡಿ, ಶುಭಕೋರಿ (ವಿಶ್ ಮಾಡಿ) ಸಲಾಮು ಹೊಡೆಯುತ್ತಿದ್ದಾರೆ.

ಸಾಮಾನ್ಯರ ಮೇಲೆ ಮತ್ತು ನ್ಯಾಯ ಕೇಳುವ ಜನರ ಮೇಲೆ ಅಟ್ಟಹಾಸ ಮೆರೆಯುವ ಅಧಿಕಾರಿಗಳು, ಅಧಿಕಾರಶಾಹಿ ರಾಜಕಾರಣಿಗಳ ಕಾಲೊತ್ತಲು ಸದಾ ಸಿದ್ಧವಿರುತ್ತಾರೆ. ಎಸ್ಪಿ, ಡಿಸಿ, ಸಿಇಒ ಹುದ್ದೆಗಳು ಶಾಸಕರಿಗಿಂತ ಹೆಚ್ಚು ಜವಾಬ್ದಾರಿ ಮತ್ತು ಅಧಿಕಾರವುಳ್ಳ ಸ್ಥಾನಗಳು. ನಿಯಮದ ಪ್ರಕಾರ ಅವರು ಅನೇಕ ವಿಷಯಗಳಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೊಂದಿದ್ದಾರೆ. ಆದರೆ 27 ವರ್ಷದ ಯುವ ಶಾಸಕನ ಎದುರು ಅವರು ಸಲಾಮು ಹೊಡೆಯುವಂತಹ ಅನಿವಾರ್ಯತೆ ಬಂದಿರುವುದು ಕಾರ್ಯಾಂಗದ ದುಸ್ಥಿತಿಗೆ ಹಿಡಿದ ಕನ್ನಡಿ.

ದಾವಣಗೆರೆ ಪ್ರೆಸ್ ಕ್ಲಬ್‌ನಲ್ಲಿ ಪತ್ರಕರ್ತರ ಒಂದು ಪ್ರಶ್ನೆಗೂ ಉತ್ತರ ಕೊಡಲಾಗದ ಎಳೆಯ ಶಾಸಕ; ಸಿಎಂ, ಸಚಿವರು ಹಾಗೂ ಅಧಿಕಾರಿಗಳ ಸನ್ಮಾನಕ್ಕೆ ಪಾತ್ರರಾಗುತ್ತಿದ್ದಾರೆ. ಇತ್ತ ಸಂಘಟನೆ ಮಾಡಿ, ಹೋರಾಟ ಕಟ್ಟಿ ನಿರುದ್ಯೋಗಿಗಳಿಗೆ ನ್ಯಾಯ ಕೇಳುವ ಕಾಂತ್ ಕುಮಾರ್ ಅಂತಹವರು ಪೊಲೀಸರ ಏಟು ತಿನ್ನಲಷ್ಟೇ ಸೀಮಿತವಾಗುತ್ತಿರುವುದು ನಮ್ಮ ಸರ್ಕಾರಗಳ ಆದ್ಯತೆಗೆ ಸಾಕ್ಷಿ.

ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಬಿಹಾರದಲ್ಲಿ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹಾಗೂ ನಿತೀಶ್ ಕುಮಾರ್ ಸಚಿವ ಸಂಪುಟದ ಉಪೇಂದ್ರ ಕುಶ್ವಾಹ ಅವರ ಮಕ್ಕಳು ಚುನಾವಣೆಗೆ ನಿಲ್ಲದೆಯೇ ಮಂತ್ರಿಗಳಾಗಿ ಮಿಂಚುತ್ತಿದ್ದಾರೆ. ಅಲ್ಲಿಯೂ ಹಿರಿಯ ಅಧಿಕಾರಿಗಳು ಈ ಯುವಕರ ಮುಂದೆ ಡೊಗ್ಗು ಸಲಾಮು ಹೊಡೆಯುತ್ತಿದ್ದಾರೆ. ಜನರ ಒಂದು ಮತವನ್ನೂ ಪಡೆಯದೆ ಕೇವಲ ಕುಟುಂಬದ ಪ್ರಭಾವದಿಂದಲೇ ಅಧಿಕಾರಕ್ಕೆ ಬರುವುದು ಈಗ ಸಾಮಾನ್ಯವಾಗುತ್ತಿದೆ.

ಇದು ಪ್ರಜಾಪ್ರಭುತ್ವಕ್ಕೆ ಅಪಾಯ. ಪ್ರತಿಭೆಗೆ ಬೆಲೆ ಇಲ್ಲದೆ, ಕೇವಲ ಕುಟುಂಬದ ಹೆಸರಿಗೆ ಬೆಲೆ ಬರುತ್ತಿರುವುದು ದೇಶದ ಯುವಜನಾಂಗವನ್ನು ನಿರಾಸೆಗೆ ತಳ್ಳುತ್ತಿದೆ. ಕಾಂತ್ ಕುಮಾರ್‌ನಂತಹ ಸಾವಿರಾರು ಯುವಕರು ಕೆಲಸಕ್ಕಾಗಿ ಹೋರಾಡುತ್ತಿರುವಾಗ, ಕೆಲವರು ಕುಟುಂಬದ ಆಶ್ರಯದಲ್ಲಿ ಸುಲಭವಾಗಿ ಅಧಿಕಾರದ ಸಿಂಹಾಸನ ಏರುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಸಮಾನತೆಯ ಕಿಚ್ಚು ಬೆಳೆಯುವುದು ಸಹಜ.
ತಾವಿಬ್ಬರೇ ಎಂದು ಮರೆಯುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಗಳನ್ನು ತಮಿಳುನಾಡಿನ ಜನ ಉಗಿದಟ್ಟಿದಂತೆ. ರಾಜಕೀಯೇತರ ವ್ಯಕ್ತಿ ನಟ ವಿಜಯ್ ರನ್ನು ಮುಖ್ಯಮಂತ್ರಿ ಮಾಡಿದಂತೆ..ಇಂಥ ಕುಟುಂಬ ರಾಜಕಾರಣಿಗಳ ಸೊಕ್ಕನ್ನು ಸಮಾಜವೇ ಮುರಿಯಬೇಕು.

Comments (0)

Your email address will not be published. Required fields are marked *

Back to top button