TVK ಶಾಸಕನಾದರೂ ವಿಶ್ವಾಸಮತ ಚಲಾವಣೆಗೆ ಹೈಕೋರ್ಟ್ ಅಡ್ಡಿ!
TVK mla Majority voting is prohibited

ಚೆನ್ನೈ: ಕೇವಲ ಒಂದು ಮತದಿಂದ ಗೆದ್ದು ಬೀಗಿದ್ದ ತಿರುಪತ್ತೂರು ಕ್ಷೇತ್ರದ ಶಾಸಕ ಆರ್.ಶ್ರೀನಿವಾಸ ಸೇತುಪತಿಗೆ ತಮಿಳುನಾಡು ಹೈಕೋರ್ಟ್ ಶಾಕ್ ನೀಡಿದೆ. ಟಿವಿಕೆ ಶಾಸಕನಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಚಲಾಯಿಸದಂತೆ ನ್ಯಾಯಾಲಯ ತಡೆ ನೀಡಿದೆ.ಈ ವಿಚಾರ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದ್ದು ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರಕ್ಕೆ ಹಿನ್ನಡೆ ಉಂಟಾಗಿದೆ.

ಒಂದು ಓಟಿನ ಕಥೆ
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಿರುಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಆರ್.ಶ್ರೀನಿವಾಸ ಸೇತುಪತಿ 83,365 ಮತಗಳನ್ನು ಪಡೆದಿದ್ದರು.ಅವರ ಪ್ರತಿಸ್ಪರ್ಧಿ ಡಿಎಂಕೆ ನಾಯಕ ಹಾಗೂ ಮಾಜಿ ಸಚಿವ ಕೆ.ಆರ್.ಪೆರಿಯಕರುಪ್ಪನ್ 83,364 ಮತಗಳನ್ನು ಗಳಿಸಿದ್ದರು. ಕೇವಲ 1 ಮತದ ಅಂತರದಲ್ಲಿ ಟಿವಿಕೆ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಗೆಲುವನ್ನು ಪ್ರಶ್ನಿಸಿ ಪೆರಿಯಕರುಪ್ಪನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಡಿಎಂಕೆ ಅಭ್ಯರ್ಥಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್. ವಿಕ್ಟೋರಿಯಾ ಗೌರಿ ಮತ್ತು ಎನ್. ಸೆಂಥಿಲ್ ಕುಮಾರ್ ಅವರಿದ್ದ ಪೀಠ ಬುಧವಾರ ನಡೆಯಲಿರುವ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಶ್ರೀನಿವಾಸ ಸೇತುಪತಿ ಮತ ಚಲಾಯಿಸುವಂತಿಲ್ಲ ಎಂದು ಆದೇಶಿಸಿತ್ತು.ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲು ತಡೆ ನೀಡದಿದ್ದರೂ, ವಿಶ್ವಾಸಮತ ಅಥವಾ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಅವರ ಮತವನ್ನು ಪರಿಗಣಿಸುವಂತಿಲ್ಲ ಎಂದು ಈ ನ್ಯಾಯ ಪೀಠ ಸ್ಪಷ್ಟಪಡಿಸಿದೆ.ಅರ್ಜಿದಾರರು ಮತಗಳ ಮರುಎಣಿಕೆಗೆ ಕೋರಿದ್ದು,ಈ ಬಗ್ಗೆ ನ್ಯಾಯಾಲಯ ಮುಂದಿನ ವಿಚಾರಣೆ ನಡೆಸಲಿದೆ.
ಟಿವಿಕೆ ಸರ್ಕಾರಕ್ಕೆ ಅಗ್ನಿಪರೀಕ್ಷೆ
ಮುಖ್ಯಮಂತ್ರಿ ವಿಜಯ್ ನೇತೃತ್ವದ ಸಚಿವ ಸಂಪುಟ ಪ್ರಮಾಣವಚನ ಸ್ವೀಕರಿಸಿದ ಮೂರು ದಿನಗಳ ನಂತರ,ಬುಧವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. ಇಂತಹ ನಿರ್ಣಾಯಕ ಸಂದರ್ಭದಲ್ಲೇ ಒಬ್ಬ ಶಾಸಕನ ಮತದಾನದ ಹಕ್ಕಿಗೆ ತಡೆ ಬಿದ್ದಿರುವುದು ಟಿವಿಕೆ ಪಾಳೆಯದಲ್ಲಿ ಆತಂಕ ಮೂಡಿದೆ.ಒಂದು ಮತದ ಅಂತರದ ಗೆಲುವು ನ್ಯಾಯಾಲಯದ ಅಂಗಳದಲ್ಲಿದ್ದು, ತಿರುಪತ್ತೂರು ಕ್ಷೇತ್ರದ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
#TamilNaduPolitics #TVK #VijayCM #MadrasHighCourt #TirupathurConstituency #SrinivasaSethupathi #DMK #BreakingNews #FreedomTV #FloorTest #PoliticalCrisis




