ಡಿಕೆಶಿ ಸಿಎಂ ಆಗಲು ಗಡ್ಡ ಬಿಟ್ಟಿದ್ದ ಈಶ್ವರಪ್ಪ, ತ್ರಿವೇಣಿ ಸಂಗಮದಲ್ಲಿ ಸ್ನಾನ!
DKS fan didn't havehair cut since 3 years for CM Harake

ಬೆಂಗಳೂರು/ರಾಮನಗರ: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಕೌಂಟ್ಡೌನ್ ಶುರುವಾಗಿದೆ. ಸಂಜೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯಲ್ಲಿ ಪದಗ್ರಹಣದ ದಿನಾಂಕ ಅಧಿಕೃತವಾಗಿ ಹೊರಬೀಳಲಿದೆ. ಇಡೀ ರಾಜ್ಯವೇ ಈ ರಾಜಕೀಯ ಬದಲಾವಣೆಯನ್ನು ಕುತೂಹಲದಿಂದ ನೋಡುತ್ತಿದ್ದರೆ, ರಾಮನಗರದ ಕಟ್ಟಾ ಅಭಿಮಾನಿಯ ವಿಶಿಷ್ಟ ಹರಕೆ ಮತ್ತು ಭಕ್ತಿ ಮಾತ್ರ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ.
3 ವರ್ಷ ಗಡ್ಡ-ಕೂದಲು ಕತ್ತರಿಸಲ್ಲ ಎಂದಿದ್ದ ಭಕ್ತ!
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದ ಈಶ್ವರಪ್ಪನೇ ಆ ವಿಶಿಷ್ಟ ಅಭಿಮಾನಿ. ತಮ್ಮ ನೆಚ್ಚಿನ ನಾಯಕ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲೇಬೇಕು ಎಂದು ಕಳೆದ ಮೂರು ವರ್ಷಗಳಿಂದ ಈಶ್ವರಪ್ಪ ಕಠಿಣ ಹರಕೆಯೊಂದನ್ನು ಹೊತ್ತಿದ್ದರು. “ಡಿಕೆಶಿ ರಾಜ್ಯದ ಸಿಎಂ ಗಾದಿ ಏರುವವರೆಗೂ ನಾನು ತಲೆಗೂದಲು ಮತ್ತು ಗಡ್ಡವನ್ನು ಕತ್ತರಿಸುವುದಿಲ್ಲ” ಎಂದು ಪ್ರತಿಜ್ಞೆ ಮಾಡಿದ್ದ ಈಶ್ವರಪ್ಪ, ಕಳೆದ ಮೂರು ವರ್ಷಗಳಿಂದ ತಪಸ್ವಿಯಂತೆ ದಟ್ಟವಾದ ಗಡ್ಡ-ಕೂದಲು ಬಿಟ್ಟುಕೊಂಡು ತಿರುಗುತ್ತಿದ್ದರು.

ತ್ರಿವೇಣಿ ಸಂಗಮದಲ್ಲಿ ಡಿಕೆಶಿ ಫೋಟೋ ಹಿಡಿದು ಸ್ನಾನ!
ಡಿಕೆಶಿ ಮುಖ್ಯಮಂತ್ರಿಯಾಗುವುದು ಖಚಿತವಾಗುತ್ತಿದ್ದಂತೆ ಈಶ್ವರಪ್ಪ ನೇರವಾಗಿ ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ (ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ) ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಪುಣ್ಯಸ್ನಾನ ಮಾಡಿದ್ದಾರೆ! ತಮ್ಮ ನಾಯಕನಿಗೆ ಯಾವುದೇ ವಿಘ್ನ ಎದುರಾಗದೆ ಸಿಎಂ ಆಗಲಿ ಎಂದು ಗಂಗಾಮಾತೆಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ.
“ನನ್ನ ಮೂರು ವರ್ಷಗಳ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ದೇವರು ಕಣ್ಣು ಬಿಟ್ಟಿದ್ದಾನೆ” ಎಂದು ಈಶ್ವರಪ್ಪ ಭಾವುಕರಾಗಿ ನುಡಿದಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಈಶ್ವರಪ್ಪ ಬೆಂಗಳೂರಿಗೆ ಬಂದು ಅವರನ್ನು ಖುದ್ದಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಲಿದ್ದಾರೆ. ಅದಾದ ಬಳಿಕ ನೇರವಾಗಿ ಮಂತ್ರಾಲಯ ಪುಣ್ಯಕ್ಷೇತ್ರಕ್ಕೆ ತೆರಳಿ, ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಮುಂಡನ ಮಾಡಿಸಿಕೊಂಡು ತಮ್ಮ ಗಡ್ಡ-ಕೂದಲನ್ನು ರಾಯರಿಗೆ ಒಪ್ಪಿಸಿ ಹರಕೆ ತೀರಿಸಲಿದ್ದಾರೆ.
ರಾಜಕಾರಣಿಗಳಿಗೆ ಅಭಿಮಾನಿಗಳು ಇರೋದು ಸಾಮಾನ್ಯ, ಆದರೆ ಡಿಕೆಶಿ ಸಿಎಂ ಆಗಲು ಉತ್ತರ ಪ್ರದೇಶದ ನದಿ ತೀರದವರೆಗೆ ಹೋಗಿ ಹರಕೆ ತೀರಿಸುತ್ತಿರುವ ಈಶ್ವರಪ್ಪ ಅವರ ಅಭಿಮಾನ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
#DKShivakumar #DKS_Fan #HarohalliEshwarappa #Ramanagara #TriveniSangam #Prayagraj #KarnatakaPolitics #FreedomTV #BreakingNews #DKSAsCM #CongressGovernment #Mantralayam #ViralNews #LoyalFan




