
ಬೆಂಗಳೂರು: ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಬಹುನಿರೀಕ್ಷಿತ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಕೊನೆಗೂ ಸುಸೂತ್ರವಾಗಿ ಮುಕ್ತಾಯಗೊಂಡಿದೆ. ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನೂತನ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ‘ಕನಕಪುರ ಬಂಡೆ’ ಡಿ.ಕೆ. ಶಿವಕುಮಾರ್ ಕರ್ನಾಟಕದ 25ನೇ ನೂತನ ಮುಖ್ಯಮಂತ್ರಿಯಾಗುವುದು ಅಧಿಕೃತಗೊಂಡಿದೆ.

ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭಿಕ ಮಾತುಗಳನ್ನಾಡಿದರು. ಇದೇ ವೇಳೆ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನು ಘೋಷಿಸಿದರು. ರಾಜೀನಾಮೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರೇ ಖುದ್ದಾಗಿ ಸಿಎಲ್‌ಪಿ ನೂತನ ನಾಯಕನ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿ ಪ್ರಮುಖ ನಿರ್ಣಯ ಮಂಡಿಸಿದರು. ಈ ಪ್ರಸ್ತಾಪಕ್ಕೆ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರು ತಕ್ಷಣವೇ ಅನುಮೋದನೆ ನೀಡಿದರು. ಉಳಿದ ಎಲ್ಲಾ ಕಾಂಗ್ರೆಸ್ ಶಾಸಕರು ಒಮ್ಮತದಿಂದ ಕೈ ಎತ್ತುವ ಮೂಲಕ ಡಿಕೆಶಿ ಆಯ್ಕೆಯನ್ನು ಜೈಕಾರದೊಂದಿಗೆ ಅಂಗೀಕರಿಸಿದರು. ಇಡೀ ಪ್ರಕ್ರಿಯೆ ಕೇವಲ ಐದೇ ಐದು ನಿಮಿಷಗಳಲ್ಲಿ ಅತ್ಯಂತ ಸೌಹಾರ್ದಯುತವಾಗಿ ಮುಕ್ತಾಯವಾಯಿತು.
ಸಿಎಲ್‌ಪಿ ಸಭೆಗೆ 10 ನಿಮಿಷ ಬ್ರೇಕ್!
ದೆಹಲಿಯಿಂದ ಆಗಮಿಸಿದ್ದ ಹೈಕಮಾಂಡ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ನೇರವಾಗಿ ಸಿಎಂ ಕಚೇರಿಗೆ ಎಂಟ್ರಿ ಕೊಟ್ಟರು. ಅಚ್ಚರಿಯ ಬೆಳವಣಿಗೆಯಲ್ಲಿ, ನೂತನ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಹೊರಗಿಟ್ಟು, ಸಿಎಂ ಕಚೇರಿಯಲ್ಲಿ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸುಮಾರು 10 ನಿಮಿಷಗಳ ಕಾಲ ಪ್ರತ್ಯೇಕವಾಗಿ ರಹಸ್ಯ ಸಭೆ ನಡೆಸಿದರು. ಈ ಸಭೆಯಲ್ಲಿ ಸಿದ್ದರಾಮಯ್ಯ ಆಪ್ತರಿಗೆ ಸಂಪುಟದಲ್ಲಿ ನೀಡಬೇಕಾದ ಸ್ಥಾನಮಾನ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆಯಾಗಿದೆ ಎನ್ನಲಾಗುತ್ತಿದೆ. ಈ ಗುಪ್ತ ಸಭೆಯ ಬಳಿಕ ನಾಯಕರು ಮತ್ತೆ ಸಿಎಲ್‌ಪಿ ಸಭೆಗೆ ಮರಳಿದರು.
#DKShivakumar #Siddaramaiah #KarnatakaNewCM #CLPLeaderDKS #KarnatakaPolitics #CongressCLP #FreedomTV #BreakingNews #BengaluruNews #KC_Venugopal #RandeepSurjewala #RajBhavan #GovernmentFormation #DKS_EraBegins




