bengaluruರಾಜಕೀಯ

ಮಂತ್ರಿಗಿರಿಗೆ ಜಂಗೀ ಕುಸ್ತಿ, ನಾಲ್ವರಲ್ಲಿ ಪ್ರಬಲರು ಯಾರು?

Bagalkote mlas fight for Ministership

ಬಾಗಲಕೋಟೆ: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸರ್ಜನೆಯಾಗಿ, ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ರಚನೆಗೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ ಆಯಕಟ್ಟಿನ ಜಿಲ್ಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಗಗನಕ್ಕೇರಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 5 ರಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿರುವುದರಿಂದ, ಬಾಗಲಕೋಟೆ ಕೈ ಕಾರ್ಯಕರ್ತರ ಭದ್ರಕೋಟೆಯಾಗಿದೆ. ಹೀಗಾಗಿ ಈ ಬಾರಿಯ ಜಿಲ್ಲೆಗೆ ಕನಿಷ್ಠ 2 ಸಚಿವ ಸ್ಥಾನ ನೀಡಲೇಬೇಕು ಎಂಬ ಒತ್ತಡ ಹೈಕಮಾಂಡ್ ಮೇಲೆ ಹೆಚ್ಚಾಗಿದೆ.

ಯಾರು ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ!
ಮುದೋಳ ಕ್ಷೇತ್ರದ ಶಾಸಕ ಹಾಗೂ ನಿರ್ಗಮಿತ ಸಂಪುಟದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ಬಿ. ತಿಮ್ಮಾಪುರ ಅವರಿಗೆ ಈ ಬಾರಿ ಬಡ್ತಿ ನೀಡಿ, ಉಪಮುಖ್ಯಮಂತ್ರಿ (DCM) ಹುದ್ದೆ ನೀಡಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಒಕ್ಕೊರಲಿನಿಂದ ಒತ್ತಾಯಿಸುತ್ತಿದ್ದಾರೆ.
“ನಾಲ್ಕು ದಶಕಗಳಿಗೂ ಅಧಿಕ ಕಾಲ ಸಕ್ರಿಯ ರಾಜಕಾರಣದಲ್ಲಿರುವ ತಿಮ್ಮಾಪುರ ಅವರು ರಾಜ್ಯದ ಅತ್ಯಂತ ಪ್ರಭಾವಿ ದಲಿತ ನಾಯಕರು. ಇತ್ತೀಚಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಇವರ ಕಾರ್ಯತಂತ್ರವೇ ಪ್ರಮುಖ ಕಾರಣವಾಗಿತ್ತು. ಹಾಗಾಗಿ ಇವರಿಗೆ ಡಿಸಿಎಂ ಸ್ಥಾನ ನೀಡಿ ಗೌರವಿಸಬೇಕು” ಎಂದು ಒತ್ತಾಯ ಕೇಳಿಬಂದಿದೆ.

ಬೀಳಗಿ ಮತಕ್ಷೇತ್ರದ ಹಿರಿಯ ಮುತ್ಸದ್ದಿ ರಾಜಕಾರಣಿ, ಶಾಸಕ ಜೆ.ಟಿ. ಪಾಟೀಲ್ ರಿಗೆ ಈ ಬಾರಿಯಾದರೂ ಸಚಿವ ಸ್ಥಾನ ನೀಡಬೇಕು ಎಂದು ಬೀಳಗಿಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳಾದ ಮುಳುಗಡೆ ಸಂತ್ರಸ್ತರ ಹೋರಾಟ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಜೆ.ಟಿ. ಪಾಟೀಲ್ 4 ಬಾರಿ ಶಾಸಕರಾಗಿದ್ದರೂ ಇನ್ನುವರೆಗೂ ಸಚಿವರಾಗಿಲ್ಲ. “ಉಳಿದ ಅವಧಿಗಾದರೂ ನಮ್ಮ ನಾಯಕರಿಗೆ ಮಂತ್ರಿಗಿರಿ ಕೊಡಿ” ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಸದ್ಯ ಸಚಿವ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರಲು ಜೆ.ಟಿ. ಪಾಟೀಲ್ ಅವರು ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲೇ ಬಿಡು ಬಿಟ್ಟಿದ್ದಾರೆ.

ಲಿಂಗಾಯತ ಸಮುದಾಯದ ಪ್ರಮುಖ ಯುವ ನಾಯಕರಾಗಿರುವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬಾಗಲಕೋಟೆಯಲ್ಲಿ ಹುನಗುಂದ ಕಾಂಗ್ರೆಸ್ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ. ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ಕಾಶಪ್ಪನವರ್ 1989ರಲ್ಲಿ ಎನ್‌ಎಸ್‌ಯುಐ (NSUI) ಮೂಲಕ ರಾಜಕೀಯ ಆರಂಭಿಸಿ, ಯುವ ಕಾಂಗ್ರೆಸ್‌ನ ವಿವಿಧ ಉನ್ನತ ಹುದ್ದೆಗಳನ್ನು ನಿಭಾಯಿಸಿದ ಎರಡು ದಶಕಗಳ ಇತಿಹಾಸ ಹೊಂದಿದ್ದಾರೆ. ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ನೀಡಲೇಬೇಕು ಎಂಬುದು ಬೆಂಬಲಿಗರ ಡಿಮ್ಯಾಂಡ್.

ಬಾದಾಮಿ ಕ್ಷೇತ್ರದಿಂದ ಮೊದಲ ಬಾರಿಗೆ ಭರ್ಜರಿ ಗೆಲುವು ದಾಖಲಿಸಿ ಶಾಸಕರಾಗಿರುವ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಕುರುಬರ ಸಂಘ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ತೀವ್ರ ಒತ್ತಡ ಹೇರಿದೆ. ಮುಂಬೈ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಹಾಗೂ ಹಿಂದುಳಿದ ವರ್ಗಗಳ ಹಿತರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಿ. ಬಿ. ಚಿಮ್ಮನಕಟ್ಟಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜನರು ಕಾಂಗ್ರೆಸ್ ಪರವಾಗಿ ಸ್ಪಷ್ಟ ಜನಾದೇಶ ನೀಡಿದ್ದಾರೆ. ಜಿಲ್ಲೆಯ ಈ ಭರ್ಜರಿ ಜನಾದೇಶಕ್ಕೆ ಗೌರವ ನೀಡಿ, ಹೊಸ ಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಗೆ ಕನಿಷ್ಠ ಎರಡು ಸಚಿವ ಸ್ಥಾನಗಳನ್ನು ನೀಡುವ ಮೂಲಕ ಉತ್ತರ ಕರ್ನಾಟಕದ ಜನರ ಆಶಯ ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    BagalkotPolitics #KarnatakaCabinetExpansion #DKShivakumarCabinet #RBThimmapur #JTPatil #VijayanandKashappanavar #BhimasenaChimmankatti #CongressLobby #FreedomTV #BreakingNews #NorthKarnatakaPolitics #Mudhol #Bilagi #Hunagunda #Badami #KarnatakaPolitics

    Comments (0)

    Your email address will not be published. Required fields are marked *

    Back to top button