2ನೇ ದೊಡ್ಡ ಕ್ರಿಕೆಟ್ ಕ್ರೀಡಾಂಗಣ – CM ಸಿದ್ದರಾಮಯ್ಯ ಶಂಕುಸ್ಥಾಪನೆ
New cricket stadium in Anekal Laying stone by CM and DCM of karnataka

ಬೆಂಗಳೂರು: ಬೆಂಗಳೂರಿನ ಹೊರವಲಯದ ಆನೇಕಲ್‌ನಲ್ಲಿ ನಿರ್ಮಾಣವಾಗಲಿರುವ ದೇಶದ ಎರಡನೇ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಿದರು. ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ಆನೇಕಲ್ ತಾಲೂಕಿನ ಸೂರ್ಯನಗರದ 4ನೇ ಹಂತದ ಲೇಔಟ್‌ನಲ್ಲಿ ಈ ಅತ್ಯಾಧುನಿಕ ಹಾಗೂ ಬೃಹತ್ ಕ್ರೀಡಾಂಗಣ ತಲೆಎತ್ತಲಿದ್ದು, ಕ್ರೀಡಾ ಲೋಕದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.

ನರೇಂದ್ರ ಮೋದಿ ಸ್ಟೇಡಿಯಂ ಬಿಟ್ಟರೆ ದೇಶದಲ್ಲೇ ಅತಿ ಹೆಚ್ಚು ಆಸನ ಸಾಮರ್ಥ್ಯ ಇರುವ ಎರಡನೇ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಇದಾಗಲಿದೆ. ಸದ್ಯ ಬೆಂಗಳೂರಿನಲ್ಲಿರುವ ಎಂ. ಚಿನ್ನಸ್ವಾಮಿ ಸ್ಟೇಡಿಯಂನ ಸಾಮರ್ಥ್ಯ ಕೇವಲ 32,000 ಆಗಿದ್ದರೆ, ಹೊಸ ಸ್ಟೇಡಿಯಂನಲ್ಲಿ ಏಕಕಾಲಕ್ಕೆ ಬರೋಬ್ಬರಿ 80,000 ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ.
ಕರ್ನಾಟಕ ಗೃಹ ಮಂಡಳಿ ವತಿಯಿಂದ ಸುಮಾರು 100 ಎಕರೆ ಜಾಗದಲ್ಲಿ, 943 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಅತ್ಯಾಧುನಿಕ ಸ್ಟೇಡಿಯಂ ನಿರ್ಮಾಣವಾಗುತ್ತಿದ್ದು ಕೇವಲ 2 ರಿಂದ 3 ವರ್ಷಗಳಲ್ಲಿ ಕ್ರೀಡಾಂಗಣವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ.ಒಂದೆ ಬಾರಿಗೆ 500ಕ್ಕೂ ಹೆಚ್ಚು ವಾಹನಗಳನ್ನು ಪಾರ್ಕ್ ಮಾಡಬಹುದಾದ ಸುಸಜ್ಜಿತ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಇದೆ. ಕ್ರೀಡಾ ಪ್ರೇಮಿಗಳಿಗಾಗಿ ವಾಣಿಜ್ಯ ಮತ್ತು ಚಿಲ್ಲರೆ ವ್ಯಾಪಾರ ಮಳಿಗೆಗಳು, ಕ್ರೀಡಾ ಪರಿಕರಗಳ ಅಂಗಡಿ ಮತ್ತು ವಿಶಾಲವಾದ ಉಪಹಾರ ಗೃಹಗಳು ಇವೆ. ಆಟಗಾರರು, ಕೋಚ್‌ಗಳು ಹಾಗೂ ಕ್ರೀಡಾ ಸಿಬ್ಬಂದಿ ವಾಸ್ತವ್ಯ ಹೂಡಲು ಹೈಟೆಕ್ ವಸತಿ ಗೃಹಗಳು. ಗಣ್ಯರ ತುರ್ತು ಆಗಮನಕ್ಕಾಗಿ ಹೆಲಿಪ್ಯಾಡ್, ಸಾರ್ವಜನಿಕ ಪ್ಲಾಜಾ ಮತ್ತು ಸುತ್ತಲೂ ಆಕರ್ಷಕ ಹಸಿರು ವಲಯ ಇರಲಿದೆ.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಬೆಂಗಳೂರು ನಗರ ಹಾಗೂ ಇಡೀ ರಾಜ್ಯಕ್ಕೆ ಅಂತರರಾಷ್ಟ್ರೀಯ ಗುಣಮಟ್ಟದ ದೊಡ್ಡ ಕ್ರೀಡಾಂಗಣದ ಅಗತ್ಯವಿತ್ತು. ಈ ಕ್ರೀಡಾಂಗಣ ನಿರ್ಮಾಣದಿಂದ ಆನೇಕಲ್ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಯಲಿದ್ದು, ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಸುತ್ತಮುತ್ತಲಿನ ಹಳ್ಳಿಗಳ ಆರ್ಥಿಕತೆ ಸುಧಾರಿಸಲಿದೆ.” ಎಂದರು.
#FreedomTV #AnekalCricketStadium #BengaluruNews #Siddaramaiah #Gparameshwar #InternationalCricketStadium #KHB #KarnatakaSports #Suryanagar #CricketNews #BengaluruInfrastructure #BreakingNews




