HDK ಗೆ ಮಾತಾಡೋ ಖಯಾಲಿ- ಚಲುವರಾಯಸ್ವಾಮಿ ಆಕ್ರೋಶ!
Agriculture minister cheluvarayaswamy slams HDK on Farmers suicide issue

ಬೆಂಗಳೂರು: “ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅನಾವಶ್ಯಕವಾಗಿ ಬಾಯಿಗೆ ಬಂದಂತೆ ಮಾತನಾಡಬಾರದು. ಅದಕ್ಕೆ ಬಾಯಿ ಚಪಲ ಅಂತಾರೆ,” ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿರುವ ಹೇಳಿಕೆಗಳು ವಾಸ್ತವಾಂಶಕ್ಕೆ ದೂರವಾಗಿದ್ದು, ರಾಜಕೀಯ ಲಾಭಕ್ಕಾಗಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಸಚಿವರು ವಿಧಾನಸೌಧದಲ್ಲಿ ತಿರುಗೇಟು ನೀಡಿದರು.

ಎಲ್ಲಾ ಆತ್ಮಹತ್ಯೆಗಳು ಕೃಷಿ ಸಂಬಂಧಿತ ರೈತರ ಆತ್ಮಹತ್ಯೆಗಳಲ್ಲ!
“ಹೆಚ್‌ಡಿಕೆ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, “ಕುಮಾರಸ್ವಾಮಿ ಅವರು ಈ ಹಿಂದೆ ಎರಡು ಬಾರಿ ರಾಜ್ಯದ ಸಿಎಂ ಆಗಿದ್ದವರು. ಅವರಿಗೆ ನಿಯಮಗಳ ಅರಿವಿರಬೇಕು. ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಎಫ್‌ಐಆರ್ ಆಧಾರದ ಮೇಲೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶ ಸಂಗ್ರಹಿಸುತ್ತದೆ. ಇದರಲ್ಲಿ ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಆತ್ಮಹತ್ಯೆ ಸೇರಿರುತ್ತದೆ. ಆದರೆ, ರಾಜ್ಯ ಸರ್ಕಾರವು ಕೃಷಿ ಸಾಲಬಾಧೆ ಅಥವಾ ಕೃಷಿ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ಮಾತ್ರ ರೈತರ ಆತ್ಮಹತ್ಯೆ ಎಂದು ಪರಿಗಣಿಸುತ್ತದೆ. ಎಲ್ಲಾ ಆತ್ಮಹತ್ಯೆಯನ್ನೂ ರೈತರ ಆತ್ಮಹತ್ಯೆಗಳೆಂದೇ ಹೇಳುವುದು ತಪ್ಪು,” ಎಂದರು.
ರಾಜ್ಯ ಸರ್ಕಾರ ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಕಳೆದ ಮೂರು ವರ್ಷಗಳ ಅಧಿಕೃತ ಅಂಕಿ-ಅಂಶಗಳನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟರು. ಸರ್ಕಾರದ ಗ್ಯಾರಂಟಿ ಯೋಜನೆಗಳು, ಬೆಳೆ ವಿಮೆ ಹಾಗೂ ಪರಿಹಾರದ ಪರಿಣಾಮವಾಗಿ ಆತ್ಮಹತ್ಯೆ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ಅವರು ದೃಢಪಡಿಸಿದರು. ದುಃಖದಲ್ಲಿರುವ ರೈತ ಕುಟುಂಬಗಳ ನೋವನ್ನು ರಾಜಕೀಯ ಲಾಭಕ್ಕೆ ಬಳಸಿದರೆ ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ,” ಎಂದು ಚಲುವರಾಯಸ್ವಾಮಿ ಲೇವಡಿ ಮಾಡಿದರು.
ಅಂಕಿ ಅಂಶಗಳ ವಿವರ
| ಸಾಲು (ವರ್ಷ) | ದಾಖಲಾದ ರೈತರ ಆತ್ಮಹತ್ಯೆ ಪ್ರಕರಣಗಳು |
| 2023 | 1,090 ಪ್ರಕರಣಗಳು |
| 2024 | 1,032 ಪ್ರಕರಣಗಳು |
| 2025 | 644 ಪ್ರಕರಣಗಳು |
ರಸಗೊಬ್ಬರ ಕೊರತೆ-ಕೇಂದ್ರವೇ ಹೊಣೆ
ಇದೇ ವೇಳೆ ರಾಜ್ಯದಲ್ಲಿ ಎದುರಾಗಿರುವ ರಸಗೊಬ್ಬರ ಅಭಾವದ ಕುರಿತು ಮಾತನಾಡಿದ ಸಚಿವರು, ಇದಕ್ಕೆ ಮೋದಿ ಸರ್ಕಾರವೇ ನೇರ ಹೊಣೆ. “ರಸಗೊಬ್ಬರವನ್ನು ನೇರವಾಗಿ ಖರೀದಿ ಮಾಡಲು ನಮಗೆ ಅಧಿಕಾರವಿಲ್ಲ. ಕೇಂದ್ರ ಸರ್ಕಾರವೇ ಅದನ್ನು ಪೂರೈಕೆ ಮಾಡಬೇಕು. ಖುದ್ದು ಪ್ರಧಾನಿ ಮೋದಿಯವರೇ ರಸಗೊಬ್ಬರ ಕೊರತೆಯಿದೆ,ಎಚ್ಚರಿಕೆಯಿಂದ ನಿಭಾಯಿಸಿ ಎಂದು ಹೇಳಿದ್ದಾರೆ.
ಕಾಳಸಂತೆಕೋರರಿಗೆ ಎಚ್ಚರಿಕೆ
“ಈ ಬಾರಿ ರಸಗೊಬ್ಬರ ಕೊರತೆ ಇರುವುದು ನಿಜ. ಹೀಗಾಗಿಯೇ ಪಾರದರ್ಶಕತೆಗಾಗಿ ‘ಎಫ್ಐಡಿ’ (FID) ಮೂಲಕ ಗೊಬ್ಬರ ಹಂಚಿಕೆ ಮಾಡಲಾಗುತ್ತಿದೆ. ಯಾರೂ ಕೂಡ ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಬಾರದು. ಮುಂಗಾರು ಹಂಗಾಮಿಗೆ ರೈತರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿವೆ,” ಎಂದು ಕೃಷಿ ಸಚಿವರು ಭರವಸೆ ನೀಡಿದರು.
#FreedomTV #NChaluvarayaswamy #HDKumaraswamy #FarmersSuicideData #KarnatakaAgriculture #FertilizerShortage #SiddaramaiahGovernment #NCRBReport #KarnatakaPolitics #KannadaNews #Vidhansoudha #BreakingNewsKarnataka




