bengaluruchamarajnagar

ನಾನು ಮುಖ್ಯಮಂತ್ರಿ, ಕಾಲ ನಿರ್ಧಾರ- ಡಿಕೆಶಿ ಹೊಸ ಬಾಂಬ್!

CM fight between DKS vs Parameshwar

ಚಾಮರಾಜನಗರ/ಬೆಂಗಳೂರು: “ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ನಾನು ರಾಜ್ಯದ ಸಿಎಂ ಹುದ್ದೆಗೇರುತ್ತೇನೋ ಇಲ್ಲವೋ ಎಂಬುದಕ್ಕೆ ಸಮಯ ಮತ್ತು ಮುಹೂರ್ತವೇ ಸರಿಯಾದ ಉತ್ತರ ನೀಡುತ್ತದೆ ಎಂದು ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಉತ್ತರ ನೀಡಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳ ಅವಧಿ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ, ನಾಯಕತ್ವ ಬದಲಾವಣೆಯ ಭಾರಿ ಬಿರುಗಾಳಿ ಎದ್ದಿದೆ.

ಈ ಮಧ್ಯೆ ಮುಖ್ಯಮಂತ್ರಿ ಹುದ್ದೆಯ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗುರುವಾರ ನೀಡಿರುವ ಈ ಮಾರ್ಮಿಕ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ದೆಹಲಿ ಅಖಾಡಕ್ಕೆ ಸಿದ್ದರಾಮಯ್ಯ,ಡಿಕೆಶಿ-ಮೇ ಅಂತ್ಯಕ್ಕೆ ಗೊಂದಲಕ್ಕೆ ತೆರೆ!

ಕಾಂಗ್ರೆಸ್ ಸರ್ಕಾರದಲ್ಲಿನ ಈ ನಾಯಕತ್ವ ಜಗಳವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಹೈಕಮಾಂಡ್ ವರಿಷ್ಠರು ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ನವದೆಹಲಿಗೆ ಕರೆಸಿಕೊಳ್ಳುವ ಸಾದ್ಯತೆಗಳಿವೆ. 2023ರಲ್ಲಿ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ನಡೆದಿದ್ದ 30 ತಿಂಗಳ ‘ಅಧಿಕಾರ ಹಂಚಿಕೆ’ ಒಪ್ಪಂದದ ಪ್ರಕಾರ, ಈಗಾಗಲೇ ಅವಧಿ ಮೀರಿದೆ. ಹೀಗಾಗಿ ಮೇ ಅಂತ್ಯದ ವೇಳೆಗೆ ಹೈಕಮಾಂಡ್ ಈ ಎಲ್ಲಾ ಗೊಂದಲಗಳಿಗೆ ಮತ್ತು ಸಂಪುಟ ಪುನಾರಚನೆಗೆ ಅಂತಿಮ ಮುಹೂರ್ತ ಇಡಲಿದೆ ಎನ್ನಲಾಗುತ್ತಿದೆ. ಚಾಮರಾಜನಗರದಲ್ಲಿ ಸುದ್ದಿಗಾರರು “ನೀವು ಸಿಎಂ ಆಗ್ತೀರಾ?” ಎಂದು ಕೇಳಿದ ಪ್ರಶ್ನೆಗೆ ಡಿಕೆಶಿ, “ಕಾಲವೇ ಉತ್ತರಿಸುತ್ತೆ” ಎನ್ನುತ್ತಾ ನಿಗೂಢ ನಗೆ ಬೀರಿದ್ದಾರೆ.

ಹೈಕಮಾಂಡ್ ಅಂಗಳದಲ್ಲಿ ಸಿಎಂ ಗಾದಿ- ಗೃಹ ಸಚಿವ ಪರಮೇಶ್ವರ್
ಇತ್ತ ಬೆಂಗಳೂರಿನಲ್ಲಿ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಮಾಧ್ಯಮಗಳ ಹಾಗೂ ಪಕ್ಷದ ಒಳಗಿನ ನಾಯಕರ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಮುಖ್ಯಮಂತ್ರಿ ಬದಲಾವಣೆ ವಿಷಯ ಏನಿದ್ದರೂ ಅದು ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿದೆ. ಇಲ್ಲಿ ಕುಳಿತು ನಾವೆಲ್ಲಾ ಚರ್ಚೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.ಹೈಕಮಾಂಡ್ ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟಿಸಲಿದೆ.” “ನನಗೆ ತಿಳಿದಿರುವ ಮಟ್ಟಿಗೆ, 2023 ರಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದಾಗ ಅವರಿಗೆ ಯಾವುದೇ ಸಮಯದ ಚೌಕಟ್ಟು ನಿಗದಿಪಡಿಸಿರಲಿಲ್ಲ.ಹೈಕಮಾಂಡ್‌ನ ಯಾರೊಬ್ಬರೂ ನಮಗೆ ಇಂತಹ ಒಪ್ಪಂದದ ಬಗ್ಗೆ ಹೇಳಿಲ್ಲ.”ಎಂದು ಗೃಹ ಸಚಿವರು ಹೇಳಿದರು.

“ಪರಮೇಶ್ವರ್ ಸಿಎಂ ಆಗಲಿ” ಎಂದ ರಾಜಣ್ಣ-ಪರಮೇಶ್ವರ್ ಪ್ರತ್ಯುತ್ತರ!
“ನಾಯಕತ್ವ ಬದಲಾವಣೆಯಾದರೆ ಹಿರಿಯ ನಾಯಕ ಪರಮೇಶ್ವರ್ ಅವರಿಗೆ ಸಿಎಂ ಕುರ್ಚಿ ನೀಡಬೇಕು” ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, “ರಾಜಣ್ಣ ನಮ್ಮ ಜಿಲ್ಲೆಯವರು,ನನ್ನ ಆತ್ಮೀಯ ಸ್ನೇಹಿತರು.ನಾವು ಜೊತೆಯಾಗಿ ಓದಿದವರು.ಸ್ವಾಭಾವಿಕವಾಗಿಯೇ ಅವರಿಗೆ ನನ್ನ ಮೇಲೆ ಪ್ರೀತಿ ಇದೆ, ಹಾಗಾಗಿ ತುಮಕೂರು ಜಿಲ್ಲೆಗೆ ಸಿಎಂ ಅವಕಾಶ ಕೇಳಿದ್ದಾರೆ, ಅದರಲ್ಲಿ ಯಾವುದೇ ತಪ್ಪಿಲ್ಲ,” ಎಂದು ಜಾಣ್ಮೆಯ ಮಾತನ್ನಾಡಿದರು.

ಒಟ್ಟಾರೆಯಾಗಿ, ಕರ್ನಾಟಕ ಹಸ್ತ ಪಾಳಯದಲ್ಲಿ ‘ಮುಖ್ಯಮಂತ್ರಿ’ ಕುರ್ಚಿಗಾಗಿ ತೆರೆಮರೆಯ ಯುದ್ಧ ತಾರಕಕ್ಕೇರಿದ್ದು, ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ‘ಮಹಾ ಸರ್ಜರಿ’ ನಡೆಯುವುದು ಬಹುತೇಕ ನಿಶ್ಚಿತವಾಗಿದೆ.

#FreedomTV #DKShivakumar #CMSiddaramaiah #DrGParameshwar #KarnatakaPolitics #NextCMKarnataka #CongressHighCommand #DKShashiForCM #PowerSharingFormula #BengaluruNews #BreakingNewsKarnataka #KannadaNews #PoliticalChanakya

Comments (0)

Your email address will not be published. Required fields are marked *

Back to top button