
ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರದ ಬೆಂಕಿ ಧಗಧಗಿಸುತ್ತಿದ್ದು, ಮೈತೇಯಿ ಜನವಸತಿ ಪ್ರದೇಶದ ಮೇಲೆ ನಡೆದ ಭೀಕರ ಮಿಸೈಲ್ ಮತ್ತು ಬಾಂಬ್ ದಾಳಿಯಿಂದಾಗಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಅಮಾಯಕರು ಬಲಿಯಾಗಿದ್ದಾರೆ. ಮೊಯಿರಾಂಗ್ ಟ್ರೋಂಗ್ಲಾಬಿ ಪ್ರದೇಶದಲ್ಲಿ ಉಗ್ರಗಾಮಿಗಳು ಅತ್ಯಾಧುನಿಕ ರಾಕೆಟ್‌ಗಳನ್ನು ಬಳಸಿ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆಯ ಬೆನ್ನಲ್ಲೇ ಮಣಿಪುರದ ಐದು ಜಿಲ್ಲೆಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳು ಹೈ ಅಲರ್ಟ್ ಘೋಷಿಸಿದ್ದು, ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ಭೀಕರ ಹತ್ಯಾಕಾಂಡದ ನಂತರ ಕೇಂದ್ರ ಸರ್ಕಾರದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕುತ್ತಿದ್ದು, “ಮಣಿಪುರ ಭಾರತದ ಭಾಗವಲ್ಲವೇ? ನಾವು ಭಾರತೀಯರಲ್ಲವೇ?” ಎಂಬ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಮಣಿಪುರದಲ್ಲಿ ಹಿಂಸಾಚಾರ ಅಂತ್ಯವಾಗಿದೆ ಎಂಬ ಸರ್ಕಾರದ ಹೇಳಿಕೆಗಳನ್ನು ಖಂಡಿಸಿರುವ ಜನರು, ಅಮಾಯಕರ ಸತತ ಸಾವುಗಳ ಬಗ್ಗೆ ಪ್ರಧಾನಿ ಮೋದಿ ಅವರು ಮೌನ ವಹಿಸಿರುವುದನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರ ಜೀವ ರಕ್ಷಣೆ ಮಾಡಬೇಕಾದ ಸೈನಿಕರು ಮತ್ತು ಸರ್ಕಾರವು ಮಣಿಪುರದ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಿದೆ ಎಂದು ಸಂತ್ರಸ್ತರು ಕಣ್ಣೀರಿಡುತ್ತಿದ್ದಾರೆ.

ಇರಾನ್ ಅಥವಾ ಇಸ್ರೇಲ್ ಮಾದರಿಯಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಗುಂಡಿನ ದಾಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ನಾಗರಿಕರ ಮೇಲೆ ಗುಂಡಿನ ದಾಳಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉದ್ರಿಕ್ತ ಜನರು ಸಿಆರ್‌ಪಿಎಫ್ (CRPF) ಶಿಬಿರಗಳ ಮೇಲೆ ನುಗ್ಗಲು ಯತ್ನಿಸಿದ ಘಟನೆಗಳೂ ವರದಿಯಾಗಿವೆ. ಮಣಿಪುರದಲ್ಲಿ ನಡೆಯುತ್ತಿರುವ ಈ ನಿರಂತರ ರಕ್ತಪಾತಕ್ಕೆ ಹೊಣೆ ಯಾರು ಮತ್ತು ಈ ಹಿಂಸಾಚಾರಕ್ಕೆ ಎಂದಾದರೂ ಅಂತ್ಯವಿದೆಯೇ ಎಂದು ಜಾಲತಾಣಗಳಲ್ಲಿ ಸಾರ್ವಜನಿಕರು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.




