
ನವದೆಹಲಿ: ಬಿಜೆಪಿ ಮತ್ತು ಆರ್ಎಸ್ಎಸ್ (RSS) ಸಂಪೂರ್ಣ ಜನವಿರೋಧಿ ಹಾಗೂ ಆದಿವಾಸಿ ವಿರೋಧಿ ಮನಸ್ಥಿತಿಯನ್ನು ಹೊಂದಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆದಿವಾಸಿಗಳನ್ನು ‘ವನವಾಸಿಗಳು’ ಎಂದು ಕರೆಯುವ ಮೂಲಕ ಅವರ ಮೂಲಭೂತ ಹಕ್ಕುಗಳಾದ ಜಲ, ಜಂಗಲ್ ಮತ್ತು ಜಮೀನನ್ನು (ನೀರು, ಅರಣ್ಯ ಮತ್ತು ಭೂಮಿ) ಕಸಿದುಕೊಳ್ಳಲು ಮೋದಿ ಆಡಳಿತ ಸಂಚು ರೂಪಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ದೆಹಲಿಯ ಇಂದಿರಾ ಭವನದಲ್ಲಿ ಆದಿವಾಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

‘ಆದಿವಾಸಿ ಪ್ರೊಫೆಷನಲ್ಸ್ ಕಾನ್ಕ್ಲೇವ್ 2026’ ನಲ್ಲಿ ರಾಹುಲ್ ಭಾಗಿ
ದೆಹಲಿಯಲ್ಲಿ ನಡೆದ ‘ಆದಿವಾಸಿ ಪ್ರೊಫೆಷನಲ್ಸ್ ಕಾನ್ಕ್ಲೇವ್ 2026’ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಹುಲ್ ಗಾಂಧಿ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಆದಿವಾಸಿ ಕಾಂಗ್ರೆಸ್ ಅಧ್ಯಕ್ಷ ವಿಕ್ರಾಂತ್ ಭುರಿಯಾ ಅವರು ರಾಹುಲ್ ಗಾಂಧಿ ಅವರಿಗೆ ಸಾಂಪ್ರದಾಯಿಕ ಆದಿವಾಸಿ ಹ್ಯಾಟ್ (ಶಿರಸ್ತ್ರಾಣ) ತೊಡಿಸಿ, ಗೌರವಪೂರ್ವಕವಾಗಿ ಸ್ವಾಗತಿಸಿದರು. ಈ ಸಮಾವೇಶದಲ್ಲಿ ಆದಿವಾಸಿಗಳು ಎದುರಿಸುತ್ತಿರುವ ಪ್ರಸ್ತುತ ಸವಾಲುಗಳು ಮತ್ತು ಹಕ್ಕುಗಳ ರಕ್ಷಣೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
“ಆದಿವಾಸಿಗಳೇ ದೇಶದ ನಿಜವಾದ ಮಾಲೀಕರು”
ಸಮಾವೇಶದ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಿಂದಿ ಭಾಷೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಆದಿವಾಸಿಗಳ ಪರವಾಗಿ ದನಿ ಎತ್ತಿದ್ದಾರೆ.”ಆದಿವಾಸಿಗಳು ಈ ಭಾರತ ದೇಶದ ಮೂಲ ಸಂರಕ್ಷಕರು ಮತ್ತು ನಿಜವಾದ ಮಾಲೀಕರು. ಭಾರತದ ಐತಿಹಾಸಿಕ ಪ್ರಜ್ಞೆ, ವಿಶಿಷ್ಟ ಸಂಸ್ಕೃತಿ ಮತ್ತು ಬುದ್ಧಿವಂತಿಕೆ ಅಡಗಿರುವುದೇ ಅವರಲ್ಲಿ. ಇದುವೇ ಪರಮ ಸತ್ಯ. ಆದರೆ ಬಿಜೆಪಿ ಹಾಗೂ ಆರ್ಎಸ್ಎಸ್ನ ಆದಿವಾಸಿ ವಿರೋಧಿ ಮನಸ್ಥಿತಿಯು ನಿಮ್ಮನ್ನು ಕೇವಲ ‘ವನವಾಸಿಗಳು’ ಎಂದು ಸೀಮಿತಗೊಳಿಸಲು ಯತ್ನಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.
ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧ!
ಆದಿವಾಸಿಗಳ ಸಾಂಪ್ರದಾಯಿಕ ಹಕ್ಕುಗಳಾದ ನೀರು, ಕಾಡು ಮತ್ತು ಭೂಮಿಯನ್ನು ಕಬಳಿಸುವುದೇ ಇಂದಿನ ಕೇಂದ್ರ ಸರ್ಕಾರದ ಆಲೋಚನೆಯಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಮತ್ತು ನಾನು ವೈಯಕ್ತಿಕವಾಗಿ ನಿಮ್ಮ ಹಕ್ಕುಗಳನ್ನು ಗೌರವಿಸುತ್ತೇವೆ. ಜಲ, ಜಂಗಲ್ ಹಾಗೂ ಜಮೀನಿನ ರಕ್ಷಣೆಗಾಗಿ ನಾವು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ರಾಹುಲ್ ಗಾಂಧಿ ಆದಿವಾಸಿ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.
#RahulGandhi #AdivasiProfessionalsConclave #JalJangalJameen #CongressForAdivasis #BirsaMunda #VikrantBhuria #BJPvsCongress #AdivasiRights #FreedomTV #DelhiPolitics




