Friday, February 20, 2026
24.7 C
Bengaluru
Google search engine
LIVE
ಮನೆ#Exclusive NewsTop Newsಬೀದಿಯಲ್ಲಿ ನಿಂತು ಸುದ್ದಿಗೋಷ್ಠಿ ನಡೆಸಿದ ಆರ್. ಅಶೋಕ್!?

ಬೀದಿಯಲ್ಲಿ ನಿಂತು ಸುದ್ದಿಗೋಷ್ಠಿ ನಡೆಸಿದ ಆರ್. ಅಶೋಕ್!?

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಆವರಣದ ಹೊರಗಿನ ಬೀದಿಯಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಸರ್ಕಾರದ ಕ್ರಮಕ್ಕೆ ವ್ಯಂಗ್ಯವಾಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ತುರ್ತು ಪರಿಸ್ಥಿತಿಯ ಕಾಲದಲ್ಲಿ ಮಾಧ್ಯಮಗಳ ಪರವಾಗಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಇಂದು ತಾವೇ ಮುಖ್ಯಮಂತ್ರಿಯಾದ ಮೇಲೆ ಅದೇ ಮಾಧ್ಯಮಗಳ ಧ್ವನಿಯನ್ನು ಅಡಗಿಸಲು ಮುಂದಾಗಿರುವುದು ಅವರ ದುರಹಂಕಾರವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವವರ ಮೇಲೆ ಸರಿಯಾದ ಕ್ರಮವಿಲ್ಲ, ಆದರೆ ಸಮಾಜದ ಕನ್ನಡಿಯಂತಿರುವ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಮಾಧ್ಯಮದವರು ಭಯೋತ್ಪಾದಕರಾ?” ಎಂದು ಪ್ರಶ್ನಿಸಿದರು. ಇಂತಹ ಪರಿಸ್ಥಿತಿ ಕರ್ನಾಟಕದ ಇತಿಹಾಸದಲ್ಲಿ ಎಂದೂ ಬಂದಿರಲಿಲ್ಲ ಈ ದುರಹಂಕಾರದ ನಡೆಗೆ ರಾಜ್ಯದ ಜನರ ಶಾಪ ತಟ್ಟಲಿದೆ ಎಂದು ಎಚ್ಚರಿಸಿದರು. ಸಿದ್ದರಾಮಯ್ಯ ನೇತೃತ್ವದ ಈ ಸರ್ಕಾರವು ಜನರಲ್ಲಿ ಭರವಸೆ ಕಳೆದುಕೊಂಡಿದ್ದು, ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.

ಉಚಿತ ಯೋಜನೆಗಳಿಂದ ಕರ್ನಾಟಕ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ ,ಈಗಾಗಲೇ ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪಾಪರ್ ಆಗಿವೆ, ಅದೇ ಪರಿಸ್ಥಿತಿ ಇಂದು ಕರ್ನಾಟಕಕ್ಕೂ ಬಂದಿದೆ. ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮಾಡಲು ಹಣವಿಲ್ಲದ ಪರಿಸ್ಥಿತಿ ಇದೆ, ಸಾರಿಗೆ ಇಲಾಖೆಯ ನೌಕರರಿಗೆ ಸಂಬಳ ನೀಡಲಾಗುತ್ತಿಲ್ಲ ಮತ್ತು ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರ ಸರಿಯಾಗಿ ನೀಡದೆ ಜನರ ದಾರಿ ತಪ್ಪಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತಾದ ಪ್ರೊ. ಗೋವಿಂದ್ ರಾವ್ ವರದಿಯನ್ನು ಜಾರಿ ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ ಅಶೋಕ್, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ 15 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು. ಕೇವಲ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಣ ನೀಡದಿದ್ದರೆ, ಸಿದ್ದರಾಮಯ್ಯ ಆ ಭಾಗದ ದ್ರೋಹಿಯಾಗಿ ಇತಿಹಾಸದಲ್ಲಿ ಉಳಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments