ಪಶ್ಚಿಮ ದೆಹಲಿ: ಉತ್ತಮ್ ನಗರ ಪೂರ್ವ ಮೆಟ್ರೋ ನಿಲ್ದಾಣದಲ್ಲಿ 12ನೇ ತರಗತಿ ಪೂರೈಸಿದ ಬಾಲಕನೊಬ್ಬ ವೈಯಕ್ತಿಕ ಸಮಸ್ಯೆಗಳಿಂದ ಮನನೊಂದು ಮೆಟ್ರೋ ರೈಲಿನ ಮುಂದೆ ಹಾರಿ ಪ್ರಾಣ ಕಳೆದುಕೊಂಡಿರುವುದು ಮನಕಲಕುವಂತಿದೆ. ಬೆಳಿಗ್ಗೆ 11:07ರ ಸುಮಾರಿಗೆ ದ್ವಾರಕಾ ಕಡೆಯಿಂದ ಬರುತ್ತಿದ್ದ ರೈಲು ಆತನ ಮೇಲೆ ಹರಿದಿದ್ದು, ಸ್ಥಳಕ್ಕೆ ಪೊಲೀಸರು ಬರುವ ಮೊದಲೇ ಮೃತದೇಹವನ್ನು ಹಳಿಗಳಿಂದ ಹೊರತೆಗೆಯಲಾಗಿತ್ತು.
ಮೃತ ಬಾಲಕ ನಜಾಫ್‌ಗಢ ನಿವಾಸಿಯಾಗಿದ್ದು, ತನ್ನ ಪೋಷಕರಿಗೆ ಒಬ್ಬನೇ ಮಗನಾಗಿದ್ದ,ಆತನ ತಂದೆ ಡಿಟಿಸಿಯಲ್ಲಿ ಗುತ್ತಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಮಗನ ಉನ್ನತ ವ್ಯಾಸಂಗಕ್ಕಾಗಿ ಆಸೆಯಿಟ್ಟುಕೊಂಡಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಈ ಬಾಲಕ ತೀವ್ರವಾದ ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದ್ದು, ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯಿಂದಾಗಿ ದೆಹಲಿ ಮೆಟ್ರೋದ ನೀಲಿ ಮಾರ್ಗದಲ್ಲಿ ಸಂಚಾರ ಸೇವೆಯು ಕೆಲಕಾಲ ಸ್ಥಗಿತಗೊಂಡಿತ್ತು.
ಇದೇ ರೀತಿಯ ಘಟನೆಗಳು ಮೆಟ್ರೋ ನಿಲ್ದಾಣಗಳಲ್ಲಿ ಮರುಕಳಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕಳೆದ ನವೆಂಬರ್‌ನಲ್ಲಿ ರೋಹಿಣಿ ವೆಸ್ಟ್ ಮೆಟ್ರೋ ನಿಲ್ದಾಣದಲ್ಲೂ ಇಂತಹದ್ದೇ ಆತ್ಮಹತ್ಯೆ ಪ್ರಕರಣ ನಡೆದಿತ್ತು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಸೆಕ್ಷನ್ 194 ರ ಅಡಿಯಲ್ಲಿ ತನಿಖೆಯನ್ನು ಕೈಗೊಂಡಿದ್ದಾರೆ.


