ದೇಶ/ವಿದೇಶ

ಗ್ರೀನ್ ಕಾರ್ಡ್ ನಿಯಮ ಸಡಿಲಿಕೆ, ಅಮೆರಿಕ-ಭಾರತೀಯರಿಗೆ ಭಾರಿ ರಿಲೀಫ್!

U-turn on Green cards. US says 'return home' rule not for all applicants

ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿ ಕಾಯಂ ನಿವಾಸಿತ್ವ ಅಥವಾ ಗ್ರೀನ್ ಕಾರ್ಡ್ (Green Card) ಪಡೆಯಲು ಕಾಯುತ್ತಿದ್ದ ಲಕ್ಷಾಂತರ ವಲಸಿಗರಿಗೆ, ವಿಶೇಷವಾಗಿ ಭಾರತೀಯ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಇತ್ತೀಚಿನ ವಲಸೆ ನೀತಿಯ ಕಠಿಣ ಆದೇಶದಿಂದ ಸೃಷ್ಟಿಯಾಗಿದ್ದ ಭಾರಿ ಆತಂಕವನ್ನು ದೂರ ಮಾಡಲು ಅಮೆರಿಕದ ಗೃಹ ಭದ್ರತಾ ಇಲಾಖೆ ಕೊನೆಗೂ ಮುಂದಾಗಿದೆ.ಹೆಚ್ಚಿನ ಗ್ರೀನ್ ಕಾರ್ಡ್ ಅರ್ಜಿದಾರರು ತಮ್ಮ ಶಾಶ್ವತ ನಿವಾಸದ ಅರ್ಜಿಗಳು ಪರಿಶೀಲನೆಯಲ್ಲಿರುವ ಅವಧಿಯಲ್ಲಿ ಅಮೆರಿಕವನ್ನು ತೊರೆದು ಸ್ವದೇಶಕ್ಕೆ ಹೋಗುವ ಅಗತ್ಯವಿಲ್ಲ ಎಂದು ಯುಎಸ್ ಸರ್ಕಾರ ಈಗ ಅಧಿಕೃತವಾಗಿ ಸ್ಪಷ್ಟಪಡಿಸಿದೆ.

ಒಂದೇ ವಾರದಲ್ಲಿ ಕಠಿಣ ನಿಯಮದ ಯು-ಟರ್ನ್!


ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗ (USCIS) ಕೇವಲ ಒಂದು ವಾರದ ಹಿಂದೆಯಷ್ಟೇ ಹೊಸ ಕಠಿಣ ನಿಯಮವೊಂದನ್ನು ಜಾರಿಗೊಳಿಸಿತ್ತು. ಅದರ ಪ್ರಕಾರ, ಗ್ರೀನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುವವರು ಮೊದಲು ತಮ್ಮ ಸ್ವದೇಶಕ್ಕೆ (ಭಾರತಕ್ಕೆ) ಮರಳಿ, ಅಲ್ಲಿಂದಲೇ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಲಾಗಿತ್ತು. ಕೇವಲ ಕೆಲವು ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ ಈ ನಿಯಮ ಕಡ್ಡಾಯ ಎಂದಿದ್ದರಿಂದ ಅಮೆರಿಕದಲ್ಲಿದ್ದ ಸಾವಿರಾರು ಭಾರತೀಯರು ಆತಂಕದ ಸುಳಿಗೆ ಸಿಲುಕಿದ್ದರು. ಆದರೆ, ಈ ಆದೇಶ ಹೊರಬಿದ್ದ ಕೇವಲ ಒಂದು ವಾರದಲ್ಲೇ ಯುಎಸ್‌ಸಿಐಎಸ್ ನಿಯಮವನ್ನು ಸಡಿಲಗೊಳಿಸಿ ಸ್ಪಷ್ಟೀಕರಣ ನೀಡಿದೆ.

“ಅಮೆರಿಕದ ಮೂಲ ವಲಸೆ ನೀತಿಯಲ್ಲಿ ಯಾವುದೇ ವ್ಯಾಪಕ ಬದಲಾವಣೆಯಾಗಿಲ್ಲ. ಅರ್ಜಿದಾರರು ಯುಎಸ್‌ನ ಹೊರಗಿನಿಂದ ಗ್ರೀನ್ ಕಾರ್ಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೇ ಅಥವಾ ಬೇಡವೇ ಎಂಬುದನ್ನು ಪ್ರಕರಣದಿಂದ ಪ್ರಕರಣಕ್ಕೆ (Case-to-Case) ಅನುಗುಣವಾಗಿ ನಿರ್ಧರಿಸುವ ವಿವೇಚನಾ ಅಧಿಕಾರವನ್ನು ವಲಸೆ ಅಧಿಕಾರಿಗಳು ಬಹಳ ಹಿಂದಿನಿಂದಲೂ ಹೊಂದಿದ್ದಾರೆ. ಅದನ್ನು ಈಗಲೂ ಮುಂದುವರಿಸಲಾಗುವುದು” ಎಂದು ತಿಳಿಸಿದೆ.

ಭಾರತೀಯ ಟೆಕ್ಕಿಗಳು, ವಿದ್ಯಾರ್ಥಿಗಳಿಗೆ ನೆಮ್ಮದಿ!
ಅಮೆರಿಕ ಸರ್ಕಾರದ ಈ ಇತ್ತೀಚಿನ ವಿವರಣೆಯು ಕಳೆದ ವಾರದ ಕಠಿಣ ಪ್ರಕಟಣೆಗೆ ಹೋಲಿಸಿದರೆ ಗಮನಾರ್ಹ ಸಡಿಲಿಕೆಯಾಗಿದೆ. ಒಂದು ವೇಳೆ ಅಮೆರಿಕ ಸರ್ಕಾರ ಈ ನಿಯಮವನ್ನು ಸಡಿಲಗೊಳಿಸದೆ ಇದ್ದಲ್ಲಿ, ವರ್ಷಗಟ್ಟಲೆಯಿಂದ ಅಮೆರಿಕದಲ್ಲೇ ಇದ್ದು ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದ ಸಾವಿರಾರು ಭಾರತೀಯರ ಉದ್ಯೋಗ ಮತ್ತು ಭವಿಷ್ಯಕ್ಕೆ ಭಾರಿ ಪೆಟ್ಟು ಬೀಳುತ್ತಿತ್ತು. ಸದ್ಯ ತಾತ್ಕಾಲಿಕವಾಗಿ ವೀಸಾ ಪಡೆದು ಅಮೆರಿಕದಲ್ಲಿ ವಾಸಿಸುತ್ತಿರುವ ವಲಸಿಗರು, ಉದ್ಯೋಗಿಗಳು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ಈ ಹೊಸ ಸ್ಪಷ್ಟೀಕರಣ ದೊಡ್ಡ ನಿಟ್ಟುಸಿರು ಬಿಡುವಂತೆ ಮಾಡಿದೆ.

#GreenCardRules #USCIS #USImmigration #USNews #IndiansInUSA #FreedomTV #BreakingNews #DHSUpdate #USVisa #NRI_News #TechiesInUS #InternationalNews #WashingtonDC #GreenCardRelaxation

Comments (0)

Your email address will not be published. Required fields are marked *

Back to top button