Top Newsದೇಶ/ವಿದೇಶಸುದ್ದಿ

ಇಂಡಿಯಾ ಎಐ ಶೃಂಗಸಭೆ 2026; ಎಐ ಜವಾಬ್ದಾರಿಯುತ ಬಳಕೆಯಲ್ಲಿ ಭಾರತಕ್ಕೆ ಗಿನ್ನಿಸ್ ರೆಕಾರ್ಡ್

ದೆಹಲಿ: ‘ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026’ ರಲ್ಲಿ ಕರ್ನಾಟಕವು ಕೃತಕ ಬುದ್ಧಿಮತ್ತೆ ಮತ್ತು ಡೀಪ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ತನ್ನ ಜಾಗತಿಕ ನಾಯಕತ್ವವನ್ನು ಪ್ರದರ್ಶಿಸಿದೆ. ರಾಜ್ಯದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಾಗತಿಕ ಉದ್ಯಮ ದಿಗ್ಗಜರೊಂದಿಗೆ ಸಮಾಲೋಚನೆ ನಡೆಸಿ, ಬೆಂಗಳೂರು ಹೇಗೆ ಎಐ ಪ್ರತಿಭೆಗಳ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಹಾರ್ವೆ ಎಐ, ಆಂಥ್ರೊಪಿಕ್ ಮತ್ತು ವಾಲ್ಟ್ ಡಿಸ್ನಿಯಂತಹ ದೈತ್ಯ ಕಂಪನಿಗಳು ಈಗಾಗಲೇ ಬೆಂಗಳೂರಿನಲ್ಲಿ ತಮ್ಮ ಜಾಲವನ್ನು ವಿಸ್ತರಿಸುತ್ತಿರುವುದನ್ನು ಉಲ್ಲೇಖಿಸಿದರು.

ಭಾರತವು ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆಗಾಗಿ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಹೊಸ ಗಿನ್ನಿಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ. ‘ಇಂಡಿಯಾ ಎಐ ಮಿಷನ್’ ಹಮ್ಮಿಕೊಂಡಿದ್ದ ಈ ಅಭಿಯಾನದಲ್ಲಿ ಕೇವಲ 24 ಗಂಟೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ಆನ್‌ಲೈನ್ ಪೋರ್ಟಲ್ ಮೂಲಕ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಆರಂಭದಲ್ಲಿ 5 ಸಾವಿರ ವಿದ್ಯಾರ್ಥಿಗಳ ಗುರಿ ಹೊಂದಿದ್ದ ಈ ಅಭಿಯಾನವು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ ಎಂದು ಬ್ರಿಟನ್‌ನ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತೀರ್ಪುಗಾರ ಪ್ರವೀಣ್ ಪಟೇಲ್ ಘೋಷಿಸಿದ್ದಾರೆ.

ರಾಜ್ಯದ ಮಟ್ಟದಲ್ಲಿ ಒಂದು ಪ್ರಮುಖ ಬೆಳವಣಿಗೆಯಾಗಿ, ಆಸ್ಪತ್ರೆಗಳ ಕಾರ್ಯನಿರ್ವಹಣೆಯಲ್ಲಿ ಸುಧಾರಿತ ಎಂಟರ್‌ಪ್ರೈಸ್ ಎಐ ಅನ್ನು ಬಳಸಿಕೊಳ್ಳಲು ‘ಹೆಚ್ ಕಂಪನಿ’ ಹಾಗೂ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ನಡುವಿನ ಒಪ್ಪಂದಕ್ಕೆ ಪ್ರಿಯಾಂಕ್ ಖರ್ಗೆ ಅವರು ಸಾಕ್ಷಿಯಾದರು. ಇದರೊಂದಿಗೆ ಫಿನ್ಲೆಂಡ್ ಮತ್ತು ಸೈಪ್ರಸ್ ದೇಶಗಳ ನಿಯೋಗದೊಂದಿಗೆ ಮಾತುಕತೆ ನಡೆಸಿದ ಸಚಿವರು, ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅಂತರಾಷ್ಟ್ರೀಯ ಕಂಪನಿಗಳಿಗೆ ಇರುವ ಪೂರಕ ವಾತಾವರಣದ ಬಗ್ಗೆ ಭರವಸೆ ನೀಡಿದರು. ನವೋದ್ಯಮಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು 1 ಕೋಟಿ ರೂ.ವರೆಗಿನ ಅನುದಾನ ನೀಡುತ್ತಿರುವ ಯೋಜನೆಯನ್ನು ಶ್ಲಾಘಿಸಿದರು.

ಇಂಡಿಯಾ ಎಐ ಮಿಷನ್ ಮತ್ತು ಇಂಟೆಲ್ ಇಂಡಿಯಾ ಸಹಯೋಗದಲ್ಲಿ ನಡೆದ ಈ ಗಿನ್ನಿಸ್ ದಾಖಲೆ ಅಭಿಯಾನವು ಎಐನ ಸುರಕ್ಷಿತ ಬಳಕೆ, ಡೇಟಾ ಗೌಪ್ಯತೆ ಮತ್ತು ತಪ್ಪು ಮಾಹಿತಿಯನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿತ್ತು. ಪ್ರತಿಜ್ಞೆ ಪೂರ್ಣಗೊಳಿಸಿದವರಿಗೆ ಡಿಜಿಟಲ್ ಬ್ಯಾಡ್ಜ್ ಮತ್ತು ವಿಶೇಷ ಎಐ ಕಲಿಕಾ ಕಾರ್ಯಕ್ರಮಗಳ ಪ್ರವೇಶಾವಕಾಶವನ್ನು ನೀಡಲಾಗಿದೆ. ಈ ಶೃಂಗಸಭೆಯು ಭಾರತವನ್ನು ಜಾಗತಿಕ ಎಐ ಭೂಪಟದಲ್ಲಿ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರಗತಿಪರ ರಾಷ್ಟ್ರವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ.

Comments (0)

Your email address will not be published. Required fields are marked *

Back to top button