ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟ ಬೇಡ-ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ತಡೆ
High court refuses for KSRTC strike due to supplimentary SSLC exam

ಬೆಂಗಳೂರು: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ (SSLC) ಪೂರಕ ಪರೀಕ್ಷೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ಸರ್ಕಾರ ಮತ್ತು ಸಾರಿಗೆ ನೌಕರರ ಜಗಳದಲ್ಲಿ ಜನಸಾಮಾನ್ಯರಿಗೆ, ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು” ಎಂದು ಖಡಕ್ ಆಗಿ ಹೇಳಿರುವ ನ್ಯಾಯಾಲಯ, ಸಾರಿಗೆ ಮುಷ್ಕರಕ್ಕೆ ಅನುಮತಿ ನೀಡಲು ನಿರಾಕರಿಸಿದೆ.ಬೆಂಗಳೂರಿನ ಗೃಹ ಕಾರ್ಮಿಕರಾದ ಸಿ. ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್.ವಿ. ಶ್ರೀಧರ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಮತ್ತು ನ್ಯಾಯಮೂರ್ತಿ ಮನ್ಮಥರಾವ್ ಅವರ ಪೀಠವು ಈ ಮಹತ್ವದ ಆದೇಶ ನೀಡಿದೆ.

ಕೋರ್ಟ್‌ನಲ್ಲಿ ಸರ್ಕಾರದ ವಾದವೇನು?
ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮುಖ ಮಾಹಿತಿಗಳನ್ನು ನೀಡಿದರು.ಬಹುತೇಕ ದೊಡ್ಡ ಸಾರಿಗೆ ಸಂಘಟನೆಗಳು ಈಗಾಗಲೇ ಸರ್ಕಾರದ ವೇತನ ಏರಿಕೆ ಪ್ರಸ್ತಾಪವನ್ನು ಒಪ್ಪಿಕೊಂಡಿವೆ.ಈಗ ಮುಷ್ಕರಕ್ಕೆ ಕರೆ ನೀಡಿರುವ ಕೆಲವು ಸಂಘಟನೆಗಳು ಒಟ್ಟು ಸಾರಿಗೆ ಕಾರ್ಮಿಕರನ್ನು ಪ್ರತಿನಿಧಿಸುವುದಿಲ್ಲ.ಮೇ 25 ರಂದು ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ರಾಜಿ ಸಂಧಾನ ಮಾತುಕತೆ ನಿಗದಿಯಾಗಿದೆ. ಉಭಯ ಪಕ್ಷಗಳ ವಾದ ಆಲಿಸಿದ ಹೈಕೋರ್ಟ್ ಪೀಠವು, “ರಾಜಿ ಸಂಧಾನದ ಮಾತುಕತೆ ಬಾಕಿ ಇರುವಾಗ ಮುಷ್ಕರಕ್ಕೆ ಮುಂದಾಗುವುದು ಸೂಕ್ತವಲ್ಲ” ಎಂದು ತಿಳಿಸಿ, ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿತು.ಅಲ್ಲಿಯವರೆಗೆ ಮುಷ್ಕರ ನಡೆಸದಂತೆ ವಿಧಿಸಿದ್ದ ಹಳೆಯ ನಿರ್ಬಂಧವನ್ನು ವಿಸ್ತರಿಸಿ ಆದೇಶಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರಮುಖಾಂಶಗಳು
ಸಾರಿಗೆ ಮುಷ್ಕರದಿಂದ ಸಾರ್ವಜನಿಕರಿಗೆ ಎದುರಾಗುವ ಸಂಕಷ್ಟಗಳನ್ನು ಅರ್ಜಿದಾರರು ಕುಲಂಕುಶವಾಗಿ ಕೋರ್ಟ್ ಗಮನಕ್ಕೆ ತಂದಿದ್ದಾರೆ.ರಾಜ್ಯದಲ್ಲಿ ಪ್ರತಿದಿನ ಬರೋಬ್ಬರಿ 1.20 ಕೋಟಿ ಜನ ಸರ್ಕಾರಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಇದರಲ್ಲಿ ಶೇ. 60 ರಷ್ಟು ಮಹಿಳೆಯರಾಗಿದ್ದು,’ಶಕ್ತಿ’ ಯೋಜನೆ ಅಡಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.ಗ್ರಾಮೀಣ ಹಾಗೂ ಅರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು ಸರ್ಕಾರಿ ಬಸ್‌ಗಳನ್ನೇ ನಂಬಿಕೊಂಡಿದ್ದಾರೆ.ಮುಷ್ಕರ ನಡೆದರೆ ಪರೀಕ್ಷೆ ಬರೆಯಲು ಸಾಧ್ಯವಾಗದೆ ಅವರ ಭವಿಷ್ಯವೇ ಕಮರಿ ಹೋಗಲಿದೆ.
ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 22(1)(a) ಪ್ರಕಾರ ಮುಷ್ಕರಕ್ಕೂ 14 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ ಸಾರಿಗೆ ಸಂಸ್ಥೆಗಳ ಜಂಟಿ ಕ್ರಿಯಾ ಸಮಿತಿಯು ಕೇವಲ 5-6 ದಿನ ಮುಂಚಿತವಾಗಿ ಭಿತ್ತಿಪತ್ರ ಬಿಡುಗಡೆ ಮಾಡಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ಸಾರಿಗೆ ಸಿಬ್ಬಂದಿಯ ವೇತನವನ್ನು ಶೇ. 12.5 ರಷ್ಟು ಪರಿಷ್ಕರಿಸಿದ್ದು, ಇದಕ್ಕಾಗಿ ₹1,271.92 ಕೋಟಿ ಹಂಚಿಕೆ ಮಾಡಿದೆ. ಮೊದಲ ಕಂತಿನ ರೂಪದಲ್ಲಿ ₹450 ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಹೈಕೋರ್ಟ್‌ನ ಈ ಸಕಾಲಿಕ ಮಧ್ಯಪ್ರವೇಶದಿಂದಾಗಿ ಸದ್ಯಕ್ಕೆ ಸಾರಿಗೆ ಮುಷ್ಕರದ ಭೀತಿ ದೂರಾಗಿದ್ದು, ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಬರೆಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ದಿನಗೂಲಿ ನೌಕರರು ನಿಟ್ಟುಸಿರು ಬಿಡುವಂತಾಗಿದೆ.
#FreedomTV #HighCourtOfKarnataka #KSRTCStrike #BusStrikeStayed #SSLCSupplementaryExam #StudentSafety #TransportWorkersProtest #JusticeSurajGovindaraj #PublicInterestLitigation #ShaktiScheme #KannadaNews #BengaluruUpdates




