ರಾಜಕೀಯಕ್ಕೂ ಮೀರಿದ್ದು ದೇಶ – ಮೋದಿಗೆ ಉಲಗನಾಯಗನ್ ಬೆಂಬಲ!
Kamal Hassan supports modi on usage of Fuel in limitation

ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಪರಿಣಾಮವಾಗಿ ವಿಶ್ವಾದ್ಯಂತ ತಲೆದೋರಿರುವ ತೈಲ ಹಾಗೂ ಇಂಧನ ಕೊರತೆಯ ಬಿಕ್ಕಟ್ಟನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನೀಡಿರುವ ವಿಶೇಷ ಕರೆಗೆ ಮಕ್ಕಳ್ ನೀದಿ ಮೈಯಂ (MNM) ಅಧ್ಯಕ್ಷ ಹಾಗೂ ಸಂಸದ, ಬಹುಭಾಷಾ ನಟ ಕಮಲ್ ಹಾಸನ್ ಘಂಟಾಘೋಷವಾಗಿ ಬೆಂಬಲ ಸೂಚಿಸಿದ್ದಾರೆ. “ರಾಷ್ಟ್ರೀಯ ಜವಾಬ್ದಾರಿಯ ವಿಚಾರ ಬಂದಾಗ ಪಕ್ಷ ರಾಜಕೀಯವನ್ನು ಮೀರಿ ಬೆಂಬಲಿಸಬೇಕಾಗುತ್ತದೆ” ಎಂದು ಹೇಳುವ ಮೂಲಕ ಯುನಿವರ್ಸಲ್ ಹೀರೊ ಕಮಲ್ ಹಾಸನ್ ಪ್ರಧಾನಿಯವರ ಇಂಧನ ಸಂರಕ್ಷಣೆಯ ಮೌಲ್ಯಯುತ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ವಾಜಪೇಯಿ ಮಾತು ನೆನೆದ ಪುನ್ನಗೈಮನ್ನನ್!
ಪ್ರಧಾನಿ ಮೋದಿಯವರ ಈ ಕರೆಗೆ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, “ಇಂದು ನಾನು ಇರಾನ್ ಯುದ್ಧದ ಪರಿಣಾಮದ ಬಗ್ಗೆ ತೀವ್ರ ಕಳವಳ ಹೊಂದಿರುವ ಸಾಮಾನ್ಯ ಭಾರತೀಯನಾಗಿ ಮಾತನಾಡುತ್ತಿದ್ದೇನೆ. ಮುಂಬರುವ ಕಷ್ಟದ ಸಮಯಕ್ಕೆ ಸಿದ್ಧರಾಗುವಂತೆ ಸಿಂಗಾಪುರ ಪ್ರಧಾನಿ ಕೂಡ ತಮ್ಮ ಜನರಿಗೆ ಕರೆ ನೀಡಿದ್ದಾರೆ. ಭಾರತ ದೈತ್ಯ ದೇಶವಾಗಿದ್ದು, ನಮ್ಮ ಪ್ರಧಾನಿ ಮುಂದಿನ ವರ್ಷಕ್ಕಾಗಿ ಇಂಧನ ಉಳಿಸಲು ಹೇಳಿದ್ದಾರೆ. ಇಂತಹ ಸಮಯದಲ್ಲಿ ರಾಷ್ಟ್ರೀಯ ಜವಾಬ್ದಾರಿ ಮುಖ್ಯವೇ ಹೊರತು ರಾಜಕೀಯವಲ್ಲ” ಎಂದಿದ್ದಾರೆ.
“ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದಂತೆ ‘ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ರಾಷ್ಟ್ರ ಶಾಶ್ವತವಾಗಿ ಉಳಿಯಬೇಕು’. ಒಬ್ಬ ಕೇಂದ್ರೀಯವಾದಿಯಾಗಿ ರಾಜಕೀಯ ಮೈತ್ರಿಗಳನ್ನು ಬದಿಗಿಟ್ಟು ಸರ್ಕಾರದ ಒಳ್ಳೆಯ ಕೆಲಸವನ್ನು ನಾನು ಮುಕ್ತವಾಗಿ ಒಪ್ಪಿಕೊಳ್ಳುತ್ತೇನೆ.” ಎಂದು ಸಂಸದ ಕಮಲಹಾಸನ್ ವಾಜಪೇಯಿಯವರ ಮಾತುಗಳನ್ನು ಮೆಲುಕು ಹಾಕಿದರು.
ಜಾಗತಿಕ ಯುದ್ಧ- ಪ್ರಧಾನಿ ಮೋದಿ ಮನವಿ!
ಇರಾನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈಗಾಗಲೇ ವಿಶ್ವದ 60ಕ್ಕೂ ಹೆಚ್ಚು ದೇಶಗಳು ಸಮತೋಲಿತ ಇಂಧನ ಬಳಕೆಗಾಗಿ ಇಂಧನ ಉಳಿತಾಯ ನಿಯಮಗಳನ್ನು ಜಾರಿಗೆ ತಂದಿವೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಪ್ರಧಾನಿ ಮೋದಿ ದೇಶದ ನಾಗರಿಕರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನು ಇಂಧನವನ್ನು (ಪೆಟ್ರೋಲ್/ಡೀಸೆಲ್) ಮಿತವಾಗಿ ಬಳಸಿ ಸಂರಕ್ಷಿಸಬೇಕು. ಚಿನ್ನದ ಖರೀದಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಬೇಕು ಹಾಗೂ ಅನಗತ್ಯ ವಿದೇಶಿ ಪ್ರಯಾಣಗಳನ್ನು ಮಾಡಬಾರದೆಂಬ ವಿಶೇಷ ಮನವಿಗಳನ್ನು ಮಾಡಿದ್ದರು.
ಇಂಧನ ಸ್ವಾವಲಂಬನೆಗೆ ಶ್ಲಾಘನೆ!
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಕಳೆದ ಒಂದು ದಶಕದಲ್ಲಿ ಭಾರತದ ಸೌರ (Solar) ಮತ್ತು ಪವನ (Wind) ವಿದ್ಯುತ್ ಸಾಮರ್ಥ್ಯ ಗಣನೀಯವಾಗಿ ಹೆಚ್ಚಿರುವುದನ್ನು ಕಮಲ್ ಹಾಸನ್ ಕೊಂಡಾಡಿದ್ದಾರೆ. “ಕಲ್ಲಿದ್ದಲು ಅನಿಲೀಕರಣ, ನವೀಕರಿಸಬಹುದಾದ ಇಂಧನ ಹಾಗೂ ಪರಮಾಣು ಶಕ್ತಿ ಕ್ಷೇತ್ರದಲ್ಲಿನ ಇತ್ತೀಚಿನ ಹೂಡಿಕೆಗಳು ವಿದೇಶಿ ತೈಲ ಮತ್ತು ಅನಿಲದ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಮುಖ ಹಂತಗಳಾಗಿವೆ” ಎಂದು ಅವರು ವಿಶ್ಲೇಷಿಸಿದ್ದಾರೆ. ಇದೇ ಹಾದಿಯಲ್ಲಿ ತ್ಯಾಗ ಎಂಬುದು ಕೇವಲ ನಾಗರಿಕರಿಂದಷ್ಟೇ ಅಲ್ಲ, ಸರ್ಕಾರಗಳಿಂದಲೂ ಆಗಬೇಕು ಎಂದು ಪ್ರತಿಪಾದಿಸಿದ್ದಾರೆ.
ಕಮಲ್ ಮೋದಿಗೆ ಕೊಟ್ಟ ಪ್ರಮುಖ ಸಲಹೆಗಳು
ತಕ್ಷಣವೇ ಎಲ್ಲಾ ಮುಖ್ಯಮಂತ್ರಿಗಳ ರಾಷ್ಟ್ರೀಯ ಶೃಂಗಸಭೆ ಕರೆದು, ಸಾಮಾನ್ಯ ಜನರನ್ನು ರಕ್ಷಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ (VAT) ನಂತಹ ರಾಜ್ಯ ತೆರಿಗೆಗಳನ್ನು ಕಡಿತಗೊಳಿಸಬೇಕು. ಜನರು ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡುವಂತೆ ಉತ್ತೇಜಿಸಲು ರೈಲು,ಮೆಟ್ರೋ ಮತ್ತು ಬಸ್ ದರಗಳನ್ನು ತಕ್ಷಣವೇ ಕಡಿತಗೊಳಿಸಬೇಕೆಂದರು.“ಭೌಗೋಳಿಕ ರಾಜಕೀಯದ ಈ ಬಿಕ್ಕಟ್ಟು ಶ್ರೀಮಂತರು ಹಾಗೂ ಸಾಮಾನ್ಯ ಪಾದಚಾರಿ ಇಬ್ಬರ ಮೇಲೂ ಪರಿಣಾಮ ಬೀರುತ್ತದೆ. ಆದರೆ ನಾವೆಲ್ಲರೂ ಈ ಬಿಕ್ಕಟ್ಟನ್ನು ಒಟ್ಟಾಗಿ ಎದುರಿಸಿದರೆ, ಭಾರತವು ಜಾಗತಿಕವಾಗಿ ಇನ್ನಷ್ಟು ಬಲಶಾಲಿಯಾಗಿ ಹೊರಹೊಮ್ಮುತ್ತದೆ” ಎಂದು ಕಮಲ್ ಹಾಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
#KamalHaasan #PMModi #FuelCrisis #IranUSA #EnergyConservation #NationFirst #MNM #PetrolDieselPrice #RenewableEnergy #GlobalCrisis #FreedomTV #FreedomTVNews #KannadaNews




