ಮೋದಿಗೆ ಬಡವರ ಮಕ್ಕಳಂದ್ರೆ ಅಲರ್ಜಿ- ಸಿದ್ದು ಕೆಂಡಾಮಂಡಲ!
Modi should apologize students and Dharmendra Pradhan must resign

ಬೆಂಗಳೂರು: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ‘ನೀಟ್’ (NEET) ಪರೀಕ್ಷೆ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅತ್ಯಂತ ಕಠಿಣ ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಯೂತ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಇನ್ನು ಮುಂದೆ ದೇಶದಲ್ಲಿ ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಮತ್ತು ಹಳೇ ಸಿಇಟಿ (CET) ಪದ್ಧತಿಯನ್ನು ಮರಳಿ ತರಬೇಕು,” ಎಂದು ಬಲವಾಗಿ ಒತ್ತಾಯಿಸಿದರು.

10 ವರ್ಷ 5 ಬಾರಿ ಸೋರಿಕೆ- ನೀಟ್ ಬಡವರ ವಿರೋಧಿ!
“ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ವೈದ್ಯಕೀಯ ಸೀಟುಗಳಿಗಾಗಿ ಹಿಂದೆ ಸಿಇಟಿ (CET) ಪರೀಕ್ಷೆ ನಡೆಯುತ್ತಿತ್ತು ಅದು ಅತ್ಯಂತ ಪಾರದರ್ಶಕವಾಗಿರುತ್ತಿತ್ತು.ಆದರೆ ಮೋದಿ ಅವರು ಪ್ರಧಾನಿಯಾದ ನಂತರ ರಾಜ್ಯಗಳ ಹಕ್ಕನ್ನು ಕಸಿದುಕೊಂಡು ‘ನೀಟ್’ ಪದ್ಧತಿಯನ್ನು ಬಲವಂತವಾಗಿ ಜಾರಿಗೆ ತಂದರು.ಇದು ಜಾರಿಗೆ ಬಂದು 10 ವರ್ಷಗಳಾಗಿದ್ದು,ಈಗಾಗಲೇ 5 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.
ವಿದ್ಯಾರ್ಥಿಗಳು ಒಂದು ವರ್ಷದಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ, ಕೋಚಿಂಗ್ ಸೆಂಟರ್‌ಗಳಿಗೆ ಸೇರಿ ಹಗಲಿರುಳು ಅಭ್ಯಾಸ ಮಾಡಿರುತ್ತಾರೆ. ಹಣ ಇರೋರು ಕೋಚಿಂಗ್ ಸೇರಬಹುದು, ಆದರೆ ಬಡವರ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಕೋಚಿಂಗ್ ಸೆಂಟರ್ ಸೇರಲು ಸಾಧ್ಯವೇ? ಈ ನೀಟ್ ಪದ್ಧತಿಯೇ ತಾರತಮ್ಯದಿಂದ ಕೂಡಿದೆ. ಬಡವರು, ಹಿಂದುಳಿದ ವರ್ಗಗಳ ಮಕ್ಕಳು ಅಂದರೆ ಪ್ರಧಾನಿ ಮೋದಿಗೆ ಆಗಲ್ಲ ಅನ್ನೋದಕ್ಕೆ ಈ ನೀಟ್ ಹಗರಣವೇ ಸಾಕ್ಷಿ,” ಎಂದು ಸಿಎಂ ಆಕ್ರೋಶ ಹೊರಹಾಕಿದರು.
“ಪ್ರಶ್ನೆ ಪತ್ರಿಕೆ ಹಗರಣ ರುವಾರಿಗಳ ಮೇಲೆ ಕೇಸು!
ನೀಟ್ ಪರೀಕ್ಷೆ ಅಕ್ರಮ ಮತ್ತು ಮರು ಪರೀಕ್ಷೆಯ ನಿರ್ಧಾರದಿಂದ ಮನನೊಂದು ದೇಶದಲ್ಲಿ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ತೀವ್ರ ಕಳವಳ ವ್ಯಕ್ತಪಡಿಸಿದರು. “ವಿದ್ಯಾರ್ಥಿಗಳ ಆತ್ಮಹತ್ಯೆಗೆ ನೇರವಾಗಿ ಕೇಂದ್ರ ಸರ್ಕಾರ ಹಾಗೂ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದವರೇ ಕಾರಣ.ಹೀಗಾಗಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬೇಕು. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಕೇಂದ್ರ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು.””ಒಕ್ಕೂಟ ವ್ಯವಸ್ಥೆಯಲ್ಲಿ ಆಯಾ ರಾಜ್ಯಗಳಿಗೆ ಪರೀಕ್ಷೆ ನಡೆಸುವ ಸ್ವಾಯತ್ತತೆ ಇರಬೇಕು.ಈ ಕೂಡಲೇ ನೀಟ್ ರದ್ದು ಮಾಡಿ, ರಾಜ್ಯಗಳಿಗೆ ಸಿಇಟಿ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು.”
ಬಿಜೆಪಿ ಲೀಕ್ ಭಾಗ್ಯ!
“ಕೇಂದ್ರದಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಾಕು, ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತವೆ. ರಾಜ್ಯದಲ್ಲಿ ಈ ಹಿಂದೆ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪಿಎಸ್‌ಐ (PSI) ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈಗ ಕೇಂದ್ರದಲ್ಲಿ ನೀಟ್ ಲೀಕ್ ಆಗಿದೆ.ಇವರಿಗೆ ಆಡಳಿತ ನಡೆಸಲು ಬರಲ್ಲ. ಇವರಿಗೆ ಗೊತ್ತಿರುವುದು ಕೇವಲ ಆರ್.ಎಸ್.ಎಸ್ ಮತ್ತು ಬಿಜೆಪಿ ಹೆಸರಿನಲ್ಲಿ ಹಿಂದೂ-ಮುಸ್ಲಿಂ ದ್ವೇಷದ ಬೀಜ ಬಿತ್ತೋದು ಮಾತ್ರ,” ಎಂದು ಸಿಎಂ ಲೇವಡಿ ಮಾಡಿದರು.
“ದೇಶ ಬಿಕ್ಕಟ್ಟಿನಲ್ಲಿ-ಮೋದಿ ಪ್ರವಾಸದಲ್ಲಿ!
“ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಬೀದಿಗೆ ಬಿದ್ದಿದೆ. ಆದರೆ ಪ್ರಧಾನಿ ಮೋದಿ ಅವರು ಇಲ್ಲಿನ ಸಮಸ್ಯೆ ಎದುರಿಸಲಾಗದೆ ತಪ್ಪಿಸಿಕೊಂಡು ಯುರೋಪ್ ಪ್ರವಾಸದಲ್ಲಿ ಮಜಾ ಮಾಡುತ್ತಿದ್ದಾರೆ. ಅವರು ಕೂಡಲೇ ದೇಶಕ್ಕೆ ವಾಪಸ್ ಬಂದು ವಿದ್ಯಾರ್ಥಿಗಳ ಬಳಿ ಬೇಷರತ್ ಕ್ಷಮೆ ಕೇಳಬೇಕು.ಅತ್ತ ನಿರುದ್ಯೋಗ ಶೇ.60ಕ್ಕೆ ತಲುಪಿದೆ.ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದವರು 12 ವರ್ಷಕ್ಕೆ 24 ಕೋಟಿ ಉದ್ಯೋಗ ಕೊಡಬೇಕಿತ್ತು, ಆದರೆ 2 ಕೋಟಿ ಉದ್ಯೋಗನೂ ಕೊಟ್ಟಿಲ್ಲ. ಯುವಕರಿಗೆ ಯಾಕೆ ಸುಳ್ಳು ಹೇಳಿದ್ರಿ ಮೋದಿಯವರೇ?” ಎಂದು ಸಿಎಂ ಪ್ರಶ್ನಿಸಿದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು!
“ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೇವಲ ‘ಮತ್ತೆ ಪರೀಕ್ಷೆ ನಡೆಸುತ್ತೇವೆ’ ಎಂದು ಹೇಳಿ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿಯವರು ಭಂಡರು, ಸುಲಭವಾಗಿ ರಾಜೀನಾಮೆ ಕೊಡಲ್ಲ. ಅವರು ರಾಜೀನಾಮೆ ನೀಡುವವರೆಗೂ ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಕಾಂಗ್ರೆಸ್ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
#FreedomTV #CMSiddaramaiah #NEETScam #CancelNEET #BringBackCET #DharmendraPradhanResign #NarendraModi #PaperLeakScam #YouthCongressProtest #StudentSuicides #EducationSystemCrisis #KarnatakaPolitics #KannadaNews




