ರಾಜ್ಯ

ಕಾವೇರಿ ನೀರು ಬಿಡುಗಡೆ ಆದೇಶಕ್ಕೆ ಮರುಪರಿಶೀಲನೆಗೆ ಮೇಲ್ಮನವಿ!

Appeal filed seeking review of the order to release Cauvery water!

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಕರ್ನಾಟಕ ಸರ್ಕಾರವು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದೆ. ಪ್ರಸ್ತುತ ದಿನಕ್ಕೆ 12,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಆದೇಶವನ್ನು ಕಡಿತಗೊಳಿಸಿ, ಅದನ್ನು 6,000 ಕ್ಯೂಸೆಕ್‌ಗೆ ಇಳಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

ರಾಜ್ಯದಲ್ಲಿ ಮುಂಗಾರು ಮಳೆಯು ನಿರೀಕ್ಷಿತ ಪ್ರಮಾಣದಲ್ಲಿ ಮುಂದುವರಿಯದಿರುವುದು, ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಕುಸಿದಿರುವುದು ಹಾಗೂ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಕೃಷಿ ನೀರಾವರಿಗೆ ಎದುರಾಗಬಹುದಾದ ಗಂಭೀರ ಸಂಕಷ್ಟವನ್ನು ಉಲ್ಲೇಖಿಸಿ ಕರ್ನಾಟಕ ಈ ಮೇಲ್ಮನವಿ ಸಲ್ಲಿಸಿದೆ.

ಆಗಸ್ಟ್‌ನಲ್ಲಿ ನೀಡಲಾಗಿದ್ದ ದಿನಕ್ಕೆ 12,000 ಕ್ಯೂಸೆಕ್ ನೀರು ಬಿಡುಗಡೆ ಆದೇಶವು ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ವರೆಗೂ ಉತ್ತಮ ಮುಂಗಾರು ಮಳೆಯಾಗಲಿದೆ ಎಂಬ ನಿರೀಕ್ಷೆಯ ಆಧಾರದ ಮೇಲೆ ಹೊರಡಿಸಲಾಗಿತ್ತು. ಸೂಪರ್ ಎಲ್ ನಿನೊ ಪರಿಣಾಮದಿಂದಾಗಿ ಮುಂಗಾರು ಮಳೆಯು ತೀವ್ರವಾಗಿ ದುರ್ಬಲಗೊಂಡಿದ್ದು, ಪರಿಣಾಮವಾಗಿ ಜಲಾಶಯಗಳಿಗೆ ಹರಿದುಬರುವ ನೀರಿನ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ.

ಆಗಸ್ಟ್ 18ರ ವೇಳೆಗೆ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಒಟ್ಟು 77.907 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇದೇ ಅವಧಿಯಲ್ಲಿ ತಮಿಳುನಾಡಿನ ಮೂರು ಪ್ರಮುಖ ಜಲಾಶಯಗಳಲ್ಲಿ ಸುಮಾರು 52.483 ಟಿಎಂಸಿ ನೀರು ಲಭ್ಯವಿದೆ ಎಂದು ಕರ್ನಾಟಕ ತನ್ನ ಮನವಿಯಲ್ಲಿ ಸ್ಪಷ್ಟಪಡಿಸಿದೆ.

ಕಬಿನಿ ಒಳಹರಿವು ಕೂಡ 7,747ರಿಂದ 6,457 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಜಲಾಶಯಗಳಲ್ಲಿ ನೀರಿನ ಕೊರತೆ, ನೀರಾವರಿ ಬೆಳೆಗಳ ಮೇಲೂ ಪರಿಣಾಮ ಉಂಟುಮಾಡಿದೆ. 155 ಟಿಎಂಸಿ ಅಗತ್ಯದ ನಡುವೆ ಜಲಾಶಯಗಳಲ್ಲಿ 77.907 ಟಿಎಂಸಿ ಮಾತ್ರ ನೀರಿದೆ. ಮೆಟ್ಟೂರು ಜಲಾಶಯದಲ್ಲಿ ಸುಮಾರು 45 ಟಿಎಂಸಿ ನೀರು ಸಂಗ್ರಹವಿದ್ದು, ಸಾಂಬಾ ಭತ್ತದ ಬಿತ್ತನೆ ಪ್ರದೇಶ ಕುಸಿಯುವ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಕರ್ನಾಟಕಕ್ಕೆ ನೀರಾವರಿ ಹಾಗೂ ಕುಡಿಯಲು ಅಗತ್ಯ ನೀರು ಉಳಿಸುವ ನಿಟ್ಟಿನಲ್ಲಿ ಆದೇಶ ಮರುಪರಿಶೀಲನೆ ಮಾಡುವಂತೆ CWMAಗೆ ಕರ್ನಾಟಕ ಆಗ್ರಹಿಸಿದೆ.

Comments (0)

Your email address will not be published. Required fields are marked *

Back to top button