ದೇವಸ್ಥಾನದಲ್ಲಿ ವೃದ್ಧೆ ಕೊಲೆ ಪ್ರಕರಣ, ಆರೋಪಿಗಳ ಬಂಧನಕ್ಕೆ ವಿಳಂಬ:15 ದಿನಗಳ ಗಡುವು!

ಬೀಳಗಿ:ಪಟ್ಟಣದ ಬೀರೇಶ್ವರ ದೇವಸ್ಥಾನದಲ್ಲಿ ನಡೆದ ವೃದ್ಧೆಯ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಶ್ರೀ ಬೀರೇಶ್ವರ ದೇವರ ಜಾತ್ರಾ ಸಮಿತಿಯ ಸದಸ್ಯರು ಹಾಗೂ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೀಳಗಿ ಪಟ್ಟಣದ ತಹಶೀಲ್ದಾರ್ ಕಛೇರಿ ಎದುರು ಮಾತನಾಡಿದ ಜಾತ್ರಾ ಸಮಿತಿ ಮುಖಂಡರು, ಬೀರೇಶ್ವರ ದೇವಸ್ಥಾನದಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಪ್ರತಿ ದಿನ ರಾತ್ರಿ ಮಲಗುತ್ತಿದ್ದ ಗೌರವ್ವ ಅಯ್ಯಪ್ಪ ಕೊಡೇಕಲ್ (65) ಅವರು 2026ರ ಮಾರ್ಚ್ 18ರಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂಬಂಧ ಮೃತೆಯ ಪುತ್ರ ಪಡಿಯಪ್ಪ ಅಯ್ಯಪ್ಪ ಕೊಡೇಕಲ್ ಅವರು ಬೀಳಗಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು.ಘಟನೆ ನಡೆದ ಎಂಟು ದಿನಗಳ ಬಳಿಕ ಜಾತ್ರಾ ಸಮಿತಿ ಸದಸ್ಯರು ಹಾಗೂ ಕುಟುಂಬಸ್ಥರು ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖೆಯ ಕುರಿತು ಮಾಹಿತಿ ಕೇಳಿದಾಗ, ಎಫ್ಎಸ್ಎಲ್ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದರು.ನಂತರ ಎಫ್ಎಸ್ಎಲ್ ವರದಿಯಲ್ಲಿ ಕೊಲೆ ನಡೆದಿರುವುದು ದೃಢಪಟ್ಟಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಕರಣದಲ್ಲಿ ಮೂವರು ಶಂಕಿತರ ಮೇಲೆ ಅನುಮಾನವಿದ್ದು, ಅವರ ಬ್ರೇನ್ ಮ್ಯಾಪಿಂಗ್ ಪರೀಕ್ಷೆಗೆ ನ್ಯಾಯಾಲಯದಿಂದ ಅನುಮತಿ ಪಡೆಯಲಾಗಿದೆ. ಆದರೆ ಪರೀಕ್ಷೆಗೆ ಹಾಜರಾಗಲು ಶಂಕಿತರು ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸುತ್ತಿದ್ದಾರೆ. ಘಟನೆ ನಡೆದು ನಾಲ್ಕು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಲು ವಿಫಲವಾಗಿರುವುದು ತನಿಖೆಯ ಮೇಲಿನ ಅನುಮಾನಕ್ಕೆ ಕಾರಣವಾಗಿದೆ ಎಂದು ಜಾತ್ರಾ ಸಮಿತಿ ಸದಸ್ಯರು ಹೇಳಿದರು.ಈ ಸಂಬಂಧ ಈಗಾಗಲೇ ಮೂರು ಬಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತರಲಾಗಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ ಅವರು,15 ದಿನಗಳಲ್ಲಿ ಪ್ರಕರಣದ ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸದಿದ್ದರೆ ಎಸ್ಪಿ ಕಚೇರಿ ಎದುರು ಉಗ್ರ ಹೋರಾಟ ಎಚ್ಚರಿಕೆ ನೀಡಿ,ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ,ಗೃಹ ಸಚಿವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಜಾತ್ರಾ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.





