
ನವದೆಹಲಿ/ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಬೆನ್ನಲ್ಲೇ, ಈಗ ಕೆಪಿಸಿಸಿ ಅಧ್ಯಕ್ಷ ಪಟ್ಟ ಯಾರಿಗೆ ಸಿಗಲಿದೆ ಎನ್ನುವ ಕುತೂಹಲ ತುತ್ತತುದಿಗೆ ತಲುಪಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದರಿಂದಾಗಿ ತೆರವಾಗಲಿರುವ ಈ ಉನ್ನತ ಸ್ಥಾನಕ್ಕೆ ಲೋಕೋಪಯೋಗಿ ಸಚಿವ, ಅಹಿಂದ ನಾಯಕ ಸತೀಶ್ ಜಾರಕಿಹೊಳಿ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ ಎಂದು ದೆಹಲಿ ಹಾಗೂ ಬೆಂಗಳೂರಿನ ಕಾಂಗ್ರೆಸ್ ಆಪ್ತ ಮೂಲಗಳು ತಿಳಿಸಿವೆ.

ಹೈಕಮಾಂಡ್ ಗುಪ್ತ ಸಂಧಾನ ಯಶಸ್ವಿ!
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈಗಾಗಲೇ ಸತೀಶ್ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಜಾರಕಿಹೊಳಿ ಅವರಿಗೆ ಸಾರಥ್ಯ ವಹಿಸಿಕೊಳ್ಳಲು ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಆದರೆ, ಇಲ್ಲೊಂದು ದೊಡ್ಡ ಟ್ವಿಸ್ಟ್ ಎದುರಾಗಿದೆ. ಪಕ್ಷದ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ನಿಯಮದ ನಡುವೆಯೂ, ಸತೀಶ್ ಜಾರಕಿಹೊಳಿ ಅವರು ಪ್ರಸ್ತುತ ತಮಗಿರುವ ಸಚಿವ ಡಿಮ್ಯಾಂಡ್ ಇಟ್ಟಿದೆ.ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಕೂಡ ಸಚಿವರಾಗಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಒಟ್ಟಿಗೆ ಕಾರ್ಯನಿರ್ವಹಿಸಿದ್ದ ಉದಾಹರಣೆಯನ್ನು ಮುಂದಿಟ್ಟು ಜಾರಕಿಹೊಳಿ ತಂಡ ಬೇಡಿಕೆ ಇಟ್ಟಿದೆ.
ಮುಂದೇನು?: ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಅವರ ಈ ಬೇಡಿಕೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸುತ್ತಾ? ಅಥವಾ ಸಚಿವ ಸ್ಥಾನ ತ್ಯಾಗ ಮಾಡುವಂತೆ ಒಲಿಸುತ್ತಾ? ಎಂಬುದನ್ನು ಕಾದುನೋಡಬೇಕಿದೆ.
#FreedomTV #KarnatakaPolitics #KPCCPresident #SatishJarkiholi #DKShivakumar #CongressHighCommand #SiddaramaiahResignation #BengaluruPolitics #KarnatakaNews #BreakingNews #CongressPowerShift #BelagaviPolitics




